ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ 60ನೇ ಕರ್ನಾಟಕ ರಾಜ್ಯೋತ್ಸವ

Spread the love

 

ಅಬುಧಾಬಿ ಕರ್ನಾಟಕ ಸಂಘ ತನ್ನ 35ನೇ ವರ್ಷದ ಯಶಸ್ವಿ ಹೆಜ್ಜೆಯಲ್ಲಿ 60ನೇ ಕರ್ನಾಟಕ ರಾಜ್ಯೋತ್ಸವ ಅದ್ಧೂರಿ ಸಮಾರಂಭ 2015 ನವೆಂಬರ್ 6ನೇ ತಾರೀಕು ಶುಕ್ರವಾರ ಅಬುಧಾಬಿ ಇಂಡಿಯಾ ಸೋಸಿಯಲ್ ಸೆಂಟರ್ ಸಭಾಂಗಣದಲ್ಲಿ ಸಮಾವೇಶಗೊಂಡ ಅಪಾರ ಕನ್ನಡಿಗರ ಸಮ್ಮುಖದಲ್ಲಿ ಆಚರಿಸಲಾಯಿತು.

ಅಬುಧಾಬಿ ಕರ್ನಾಟಕ ಸಂಘದ ಮಹಾ ಪೋಷಕರು ಡಾ. ಬಿ. ಆರ್. ಶೆಟ್ಟಿ, ಡಾ. ಚಂದ್ರಕುಮಾರಿ ಆರ್. ಶೆಟ್ಟಿ ಯವರ ಸಮ್ಮುಖದಲ್ಲಿ ಯು.ಎ.ಇ. ಗೆ ಭಾರತೀಯ ರಾಯಭಾರಿ ಗೌ. ಮಾನ್ಯ ಟಿ.ಪಿ. ಸೀತಾರಾಂ, ಇಂಡಿಯಾ ಸೋಸಿಯಲ್ ಸೆಂಟರ್ ಅಬುಧಾಬಿ ಅಧ್ಯಕ್ಷರು ಶ್ರೀ ರಮೇಶ್ ಪಣಿಕ್ಕರ್, ಉಪಾಧ್ಯಕ್ಷರು ಡಾ. ರಾಜ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀ ಎಂ.ಎ. ಸಲೀಂ, ಹಾಗೂ ಶ್ರೀ ಶೇಖರ್ ಶೆಟ್ಟಿ, ಶ್ರೀ ರೊನಾಲ್ಡ್ ಪಿಂಟೊ, ಶ್ರೀ ಲಿಯೋ ರಾಡ್ರಿಗಸ್ ಸರ್ವರು ಜ್ಯೋತಿಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಆರಂಭದಲ್ಲಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ವಾಗತಿಸಿದರು.

ಶ್ರೀಮತಿ ದಿವ್ಯ ಶರ್ಮಾ ಮತ್ತು ತಂಡದ ಪ್ರಾರ್ಥನಾ ಗೀತೆ, ಶ್ರೀಮತಿ ಸುಪ್ರಿಯಾ ಕಿರಣ್ ರೈ ನಿರ್ದೇಶನದಲ್ಲಿ ಮಕ್ಕಳ ಸ್ವಾಗತ ನೃತ್ಯ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಮಕ್ಕಳ ತಂಡದ ಗುರುವಂದನೆ ನೃತ್ಯ, ಅಬುಧಾಬಿ ಬ್ರಾಹ್ಮಣರ ಸಂಘದ ತಂಡ ಒಂದು ಸದಸ್ಯರ ಸಮೂಹ ಗೀತೆ, ಕೊಂಕಣ್ ಪರ್ಲ್ಸ್ ತಂಡದ ಸಮೂಹ ಗೀತೆ, ವಿಧೂಷಿ ರೋಹಿಣಿ ಅನಂತ್ ನಿರ್ದೇಶನದಲ್ಲಿ ಕಿರಿಯ ಮಕ್ಕಳ ತಂಡದ ಬೀಸು ಕಂಸಾಳೆ, ಶ್ರೀಮತಿ ವೀಣಾ ಮಲ್ಯ ರವರ ನಿರ್ದೇಶನದಲ್ಲಿ ಒನಕೆ ಓಬವ್ವ ನೃತ್ಯ ರೂಪಕ, ವಿಧೂಷಿ ಸಪ್ನ ಕಿರಣ್ ನಿರ್ದೇಶನದಲ್ಲಿ ಮಕ್ಕಳ ತಂಡದ ಗುಡ್ಡಗಾಡು ಜನರ ನೃತ್ಯ ಸರ್ವರ ಮನ ಸೆಳೆಯಿತು.

ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಉಡುಪಿಯಿಂದ ವಿಶೇಷ ಅಮಂತ್ರಿತರಾಗಿ ಆಗಮಿಸಿದ ಶ್ರೀಮತಿ ಸಂಧ್ಯಾ ಶೆಣೈ ಹಾಸ್ಯ ಪ್ರಹಸನ ಸರ್ವರನ್ನು ಮನರಂಜಿಸಿದರು.

ಅಬುಧಾಬಿ ಕರ್ನಾಟಕ ಸಂಘ ಕಳೆದ ಹಲವು ವರ್ಷಗಳಿಂದ ಯು.ಎ.ಇ.ಯಲ್ಲಿ ಕನ್ನಡ ಭಾಷೆ ಕಲೆ ಸಂಸ್ಕೃತಿಗಾಗಿ ಅಪಾರ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ನೀಡಲಾಗುತಿರುವ ಪ್ರತಿಷ್ಠಿತ “ಡಾ. ದ. ರಾ. ಬೇಂದ್ರೆ ಪ್ರಶಸ್ತಿ” ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಮಹಮ್ಮದ್ ಇರ್ಷಾದ್ ಮೂಡಬಿದ್ರಿಯವರಿಗೆ ಪ್ರಧಾನಿಸಿದರು. ಡಾ. ಬಿ.ಆರ್.ಶೆಟ್ಟಿಯವರ ಸಮ್ಮುಖದಲ್ಲಿ ಮುಖ್ಯ ಅತಿಥಿಗಳು, ಅಬುಧಾಬಿ ಕರ್ನಾಟಕ ಸಂಘದ ಸರ್ವ ಸದಸ್ಯರು ವೇದಿಕೆಯಲ್ಲಿ ಉಪಸ್ತಿತರಿದ್ದರು.

ಕವಿ, ಸಾಹಿತಿ, ಬರಹಗಾರ ಶ್ರೀ ಮಹಮ್ಮದ್ ಇರ್ಷಾದ್ ಮೂಡಬಿದ್ರಿ ಯವರು ಸನ್ಮಾನಕ್ಕೆ ಉತ್ತರವಾಗಿ ರಚಿಸಿದ ಕವನವನ್ನು ವಾಚಿಸಿ ಕೃತಜ್ಞತೆಯನ್ನು ಸಲ್ಲಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘದ ವಿವಿಧ ಕನ್ನಡ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘದ ಲಾಂಛನವನ್ನು ವಿನ್ಯಾಸ ಗೊಳಿಸಿ, ಸಮಾರಂಭಗಳ ಅಹ್ವಾನ ಪತ್ರ ವಿನ್ಯಾಸ, ವೇದಿಕೆಯ ಬೃಹತ್ ಚಿತ್ರಪಟ ವಿನ್ಯಾಸ, ಹಲವಾರು ಗಣ್ಯರ ಸನ್ಮಾನ ಪತ್ರ ಪರಿಕಲ್ಪನೆ ವಿನ್ಯಾಸ, ರಜತ ಮಹೋತ್ಸವದ ಸ್ಮರಣ ಸಂಚಿಕೆ ವಿನ್ಯಾಸ, ಅಬುಧಾಬಿ ಕರ್ನಾಟಕ ಸಂಘದ ಹಲವಾರು ಲೇಖನಗಳನ್ನು ಮಾಧ್ಯಮದಲ್ಲಿ ಪ್ರಕಟಿಸಿಕೊಂಡು ಸಕ್ರಿಯಾವಾಗಿ ತೊಡಗಿಸಿಕೊಂಡಿರುವ ಕ್ರಿಯಾತ್ಮಕ ಕಲಾ ನಿರ್ದೇಶಕರಾದ ಶ್ರೀ ಬಿ. ಕೆ. ಗಣೇಶ್ ರೈ ಯವರನ್ನು ಡಾ. ಡಿ. ವೀರೆಂದ್ರ ಹೆಗ್ಗಡೆಯವರು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.

ಅಬುಧಾಬಿ ಕರ್ನಾಟಕ ಸಂಘದ ಮಹಾ ಪೋಷಕರು, ಎಲ್ಲಾ ಕನ್ನಡ ಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಪ್ರೋತ್ಸಾಹ ನೀಡುತ್ತಾ ಉತ್ಸಾಹಿ ಚಿಲುಮೆಯಾಗಿರುವ  ಡಾ. ಬಿ. ಆರ್. ಶೆಟ್ಟಿಯವರನ್ನು ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸಿದ ಅಹ್ವಾನಿತ ಕರ್ನಾಟಕ ಪರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಡಾ. ಬಿ. ಆರ್. ಶೆಟ್ಟಿ ಯವರು ಶಾಲುಹೊದಿಸಿ ಸನ್ಮಾನಿಸಿ ಗೌರವಿಸಿದರು. ಗೌರವ ಸ್ವೀಕರಿಸಿದ ಅತಿಥಿಗಳು ಶ್ರೀಯುತರಗಳಾದ ಸತೀಶ್ ವೆಂಕಟರಮಣ – ಅಧ್ಯಕ್ಷರು ಕರ್ನಾಟಕ ಸಂಘ ಶಾರ್ಜಾ, ಸದನ್ ದಾಸ್-ಕನ್ನಡ ಕೂಟ ದುಬಾಯಿ, ಹರೀಶ್ ಶೇರಿಗಾರ್-ದೇವಾಡಿಗ ಸಂಘ ದುಬಾಯಿ, ಜಯಂತ್ ಶೆಟ್ಟಿ-ಯು.ಎ.ಇ. ತುಳುಕೂಟ, ಕರ್ನಾಟಕ ಸಂಘ ದುಬಾಯಿ, ಲಿಯೋ ರೋಡ್ರಿಗಸ್ – ಕೆ.ಸಿ.ಒ. ಅಬುಧಾಬಿ, ಮಹಮ್ಮದ್ ಆಲಿ ಉಚ್ಚಿಲ-ಬ್ಯಾರಿಸ್ ಕಲ್ಚರಲ್ ಫೋರಂ ಅಬುಧಾಬಿ, ಪ್ರಕಾಶ ರಾವ್ ಪಯ್ಯಾರ್ – ಧ್ವನಿ ಪ್ರತಿಷ್ಠಾನ, ಸತೀಶ್ ಪೂಜಾರಿ – ಬಿಲ್ಲವಾಸ್ ದುಬಾಯಿ, ಪ್ರಭಾಕರ ಅಂಲತೆರೆ- ಮಾರ್ಗ ದೀಪ ಯು.ಎ.ಇ., ರುದಯ್ಯ ನವಲಿ ಹಿರೆಮಠ್ – ಬಸವ ಸಮಿತಿ ದುಬಾಯಿ, ಜೆ. ಎಸ್. ಎಸ್. ಇಂಟರ್ನ್ಯಾಶನಲ್ ಸ್ಕೂಲ್ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಡಾ. ಡಿ. ಪಿ. ಶಿವ ಕುಮಾರ್, ಗೋಪಿನಾಥ್ ರಾವ್ – ಕನ್ನಡ ಧ್ವನಿ, ದಿನೇಶ್ ಶೆಟ್ಟಿ – ಯಕ್ಷಮಿತ್ರರು, ದೀಪಕ್ ಸೋಮಶೇಖರ್ – ಕನ್ನಡ ಮೂವಿಸ್, ಸುಗಂಧರಾಜ್ ಬೇಕಲ್ – ರಾಮ ಕ್ಷತ್ರೀಯ ಸಂಘ ಯು.ಎ.ಇ. ಶ್ರೀ ಶೋಧನ್ ಪ್ರಸಾದ್ – ನಮ ತುಳುವೆರ್, ಮತ್ತು ತುಳು ಸಿನೆಮಾ ನಿರ್ಮಾಪಕರು ಹಾಗೂ ರಂಗ್ ಚಲನ ಚಿತ್ರ ನಟಿ ದಿಕ್ಷಾತಾ ಆಚಾರ್ಯ.

ಶ್ರೀಯುತರುಗಳಾದ ಸೋನು ಬಂಟ್ವಾಲ್, ಕ್ಯಾನೂಟ್, ಇಸ್ಮೈಲ್ ಶಿವಮೊಗ್ಗ, ಅಶೋಕ್ ಬೆಳ್ಮಣ್, ರಫಿಕ್ ಕೊಲ್ಪೆ, ಪ್ರಶಾಂತ್ ನಾಯರ್, ರಮೇಶ್ ಸುವರ್ಣ, ವಿಜಯ ಕುಮಾರ್ ಶೆಟ್ಟಿ, ವಿನಯ ನಾಯಕ್, ಸುಧಾಕರ್ ತುಂಬೆ, ಅರ್ಶಾದ್ ಹುಸ್ಸೈನ್ ಇವರುಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಅಷ್ಟ ದೇಗುಲದ ಬಗ್ಗೆ ರಚಿಸಲಾದ ಭಕ್ತಿಗೀತೆಗಳ ಸಂಗ್ರಹ ಪುತ್ತೂರು ನರಸಿಂಹನಾಯಕ್ ಬಳಗದವರ ಗಾಯನದಲ್ಲಿ ಮೂಡಿಬಂದ ಸಿ.ಡಿ.ಯನ್ನು ಡಾ. ಬಿ. ಆರ್. ಶೆಟ್ಟಿವರು ಬಿಡುಗಡೆ ಮಾಡಿದರು. ಡಾ. ಹರ್ಷ ಕುಮಾರ್ ರೈ ನಿರ್ಮಾಣದಲ್ಲಿ ಮಿತ್ರಂಪಾಡಿ ಜಯರಾಂ ರೈ ಅಬುಧಾಬಿ ಇವರ ಸಹಕಾರದಿಂದ ಬಿಡುಗಡೆಯಾಗುವ ಸಿ.ಡಿ. ಎಂಟು ರಾಷ್ಟ್ರಗಳಲ್ಲಿ ಬಿಡುಗಡೆಯ ಯೋಜನೆಯಲ್ಲಿ, ಇಂದು ಅಬುಧಾಬಿಯಲ್ಲಿ ಬಿಡುಗಡೆಯಾಗಿದೆ.

ಅಬುಧಾಬಿ ಕರ್ನಾಟಕ ಸಂಘದ ಥ್ರೋಬಾಲ್ ತಂಡದ ವಿಜೇತರಿಗೆ ವೇದಿಕೆಯಲ್ಲಿ ಗೌರವಿಸಲಾಯಿತು.

ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಪೋಷಕರ ಸಹಿತ ಶೈಕ್ಷಣಿಕವಾಗಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಯು.ಎ.ಇ. ಯಲ್ಲಿ ಪ್ರತಿಷ್ಠಿತ ಶೇಖ್ ಹಂದಾನ್ ಅವಾರ್ಡ್ ಹಾಗೂ ಇನ್ನಿತರ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಡಾ. ಬಿ. ಆರ್. ಶೆಟ್ಟಿಯವರು ಹಾಗೂ ಡಾ. ಚಂದ್ರಕುಮಾರಿ ಆರ್. ಶೆಟ್ಟಿಯವರು ಪದಕ ನೀಡಿ ಗೌರವಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ರವಿಂದ್ರ ರೈ ನಡೆಸಿಕೊಟ್ಟರು.

ಹಾಸ್ಯ ಪ್ರಹಸನ ನೀಡಿದ ಶ್ರೀಮತಿ ಸಂದ್ಯಾ ಶೆಣೈ ಯವರಿಗೆ “ಮಾತಿನ ಮಲ್ಲಿ ” ಬಿರುದು ಸನ್ಮಾನ ಗೌರವ ಸಲ್ಲಿಸಲಾಯಿತು ಸನ್ಮಾನ ಪ್ರಕ್ರಿಯೆಯಲ್ಲಿ ಶ್ರೀಮತಿ ಶೀಲಾ ಸುಧೀರ್ ಶೆಟ್ಟಿ ಶಾಲು ಹೊದಿಸಿದರು, ಶ್ರೀಮತಿ ದಿವ್ಯಾ ಸ್ಮರಣಿಕೆ ನೀಡಿದರು, ಶ್ರೀ ರೋನಾಲ್ಡ್ ಪಿಂಟೊ ಸನ್ಮಾನ ಪತ್ರ ನೀಡಿ ಗೌರವಿಸಿದರು.

ಅಬುಧಾಬಿ ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಕಾರ್ಯಕ್ರಮ ನಿರೂಪಣೆಯನ್ನು ನಡೆಸಿಕೊಡಲು ಉಡುಪಿಯಿಂದ ಆಗಮಿಸಿದ ಪ್ರಖ್ಯಾತ ಕಾರ್ಯಕ್ರಮ ನಿರೂಪಕರಾದ ಶ್ರೀ ಅವಿನಾಶ್ ಕಾಮತ್ ರವರನ್ನು ಶ್ರೀ ರೋನಾಲ್ಡ್ ಪಿಂಟೊ ಹಾಗೂ ಶ್ರೀಮತಿ ಶೀಲಾ ಸುಧೀರ್ ಶೆಟ್ಟಿ ಶಾಲು ಹೊದಿಸಿ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಅಬುಧಾಬಿ ಕರ್ನಾಟಕ ಸಂಘ ಪ್ರತಿಬಾರಿ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ವಯೋಮಿತಿಯರಿಗೆ ಜನಪದ ನೃತ್ಯ ಎರ್ಪಡಿಸಿತ್ತಿದ್ದು, ಈ ಬಾರಿಯೂ ಮಕ್ಕಳಿಗೆ ಏರ್ಪಡಿಸಲಾಗಿದ್ದು, ಯು.ಎ.ಇ. ಯ ವಿವಿಧ ಭಾಗಗಳಿಂದ ಐದು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಕರ್ನಾಟಕ ಐತಿಹಾಸಿಕ ವೀರ ಪುರುಷ, ವನಿತೆಯರ ನಾಮಾಂಕಿತದಲ್ಲಿ ಉತ್ಸಾಹಿ ಮಕ್ಕಳ ತಂಡಗಳು “ಮಯೂರ ವರ್ಮ (ಮೋನಲ್ ರಸ್ಕಿನಾ ನಿರ್ದೇಶನ) , ಮದಕರಿನಾಯಕ, ಒನಕೆ ಒಬ್ಬವ್ವ, ಕಿತ್ತೂರ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ( ಶ್ರೀಮತಿ ಜಸ್ಮಿತಾ ವಿವೇಕ್ ನಿರ್ದೇಶನ)” ಕರ್ನಾಟಕ ಜನಪದ ಶ್ರೀಮಂತಿಕೆಯ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಸೆಳೆದರು. ತೀರ್ಪುಗಾರರಾಗಿ ಶ್ರೀ ಭವಾನಿ ಶಂಕರ್ ಶರ್ಮಾ, ಶ್ರೀಮತಿ ದಿವ್ಯಾ ಭವಾನಿ ಶಂಕರ್ ಶರ್ಮಾ, ಶ್ರೀಮತಿ ಸಪ್ನ ಕಿರಣ್ ಕಾರ್ಯ ನಿರ್ವಹಿಸಿದರು.

ಪ್ರಥಮ : ಕಿತ್ತೂರು ಚೆನ್ನಮ್ಮ ತಂಡ – ಶ್ರೀಮತಿ ಆಶಾ ನಾಯರ್ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ

ದ್ವಿತೀಯ : ಒನಕೆ ಒಬ್ಬವ್ವ ತಂಡ – ಶ್ರೀಮತಿ ವೀಣಾ ಮಲ್ಯ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ

ತೃತಿಯ : ಮದಕರಿ ನಾಯಕ ತಂಡ – ಶ್ರೀಮತಿ ಸುಪ್ರಿಯಾ ಕಿರಣ್ ರೈ ನಿರ್ದೇಶದಲ್ಲಿ ಮಕ್ಕಳ ಜನಪದ ನೃತ್ಯ

ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕರು ಶ್ರೀ ಮಚ್ಚೇಂದ್ರನಾಥ್ ಮಂಗಳದೇವಿ ಮಂಗಳೂರು ಮತ್ತು ಪುತ್ರಿ ಸಿಂಧೂ ಬೈರವಿ  ಯವರಿಂದ ಸ್ಯಾಕ್ಸೋಫೋನ್ ವಾದನದ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದರು.

ಕೊನೆಯಲ್ಲಿ ಜನಪದ ನೃತ್ಯ ವಿಜೇತರಿಗೆ ಬಹುಮಾನ ವಿತರಣೆ, ಲಕ್ಕಿಡಿಪ್ ಡ್ರಾ, ವಂದಾನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಗಿಯಿತು.

ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ ಅಪಾರ ಅನುಭವೀ ನಾಯಕತ್ವ, ಉತ್ಸಾಹಿ ಕಾರ್ಯಕಾರಿ ಸಮಿತಿಯ ವ್ಯವಸ್ಥಿತ ಪೂರ್ವಭಾವಿ ತಯಾರಿ ಅಬುಧಾಬಿಯಲ್ಲಿ ನೆಲೆಸಿರುವ ಅಭಿಮಾನಿ ಕನ್ನಡಿಗರ ಸಮ್ಮುಖದಲ್ಲಿ ಅಪ್ಪಟ ಕನ್ನಡ ಕಾರ್ಯಕ್ರಮ ದಾಖಲೆಯನ್ನು ಸೃಷ್ಟಿಸಿತ್ತು.


Spread the love