ಅಯೋಧ್ಯೆ ತೀರ್ಪು : ಶಾಂತಿ ಕಾಪಾಡಲು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ

Spread the love

ಅಯೋಧ್ಯೆ ತೀರ್ಪು : ಶಾಂತಿ ಕಾಪಾಡಲು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕರೆ

ಉಡುಪಿ: ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಶನಿವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದ್ದು ತೀರ್ಪಿನ ಬಳಿಕ ಎಲ್ಲರೂ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಕರೆ ನೀಡಿದ್ದಾರೆ.

ಮಹತ್ವದ ಈ ಪ್ರಕರಣದಲ್ಲಿ ದೇಶದ ಅತ್ಯುನ್ನತ ನ್ಯಾಯಾಲಯ ಸುದೀರ್ಘ ಸಮಯ ವಿಚಾರಣೆ ನಡೆಸಿ ಈಗ ತೀರ್ಪು ನೀಡುತ್ತಿದೆ. ತೀರ್ಪಿನ ಸ್ವರೂಪದ ಬಗ್ಗೆ ಯಾರೂ ಜನರನ್ನು ಪ್ರಚೋದಿಸುವ, ಪರಸ್ಪರ ದ್ವೇಷ, ಅಪನಂಬಿಕೆ ಸೃಷ್ಟಿಸುವ , ವದಂತಿ ಹರಡುವ ಕೆಲಸಕ್ಕೆ ಇಳಿಯದೆ ಸುಪ್ರೀಂ ಕೋರ್ಟ್ ಹಾಗು ದೇಶದ ನ್ಯಾಯ ವ್ಯವಸ್ಥೆಯನ್ನು ಗೌರವಿಸಬೇಕು. ಎಲ್ಲ ರಾಜಕೀಯ ಪಕ್ಷಗಳು , ಧಾರ್ಮಿಕ, ಸಾಮಾಜಿಕ ಸಂಘಟನೆಗಳು ಈ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಜಯೋತ್ಸವ, ಪ್ರತಿಭಟನೆ ನಡೆಸುವುದು ಅಥವಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಇತ್ಯಾದಿ ಸಮಾಜದ ಶಾಂತಿ ಕದಡುವ ಸಾಧ್ಯತೆ ಇರುವ ಯಾವುದೇ ಕೃತ್ಯಗಳನ್ನು ಮಾಡದಂತೆ ತಮ್ಮ ಕಾರ್ಯಕರ್ತರು ಹಾಗು ಅಭಿಮಾನಿಗಳಿಗೆ ಸ್ಪಷ್ಟವಾಗಿ ಸೂಚಿಸಬೇಕು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಈ ಸಂದರ್ಭದಲ್ಲಿ ನೀಡುವ ಸೂಚನೆ, ಸಲಹೆಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿದೆ. ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಸಂದೇಶಗಳನ್ನು, ಚಿತ್ರಗಳನ್ನು, ಆಡಿಯೋ, ವಿಡಿಯೋಗಳನ್ನು ಹಾಕದೆ ಸಂಯಮದಿಂದ ವರ್ತಿಸಬೇಕು. ಈ ಅವಧಿಯಲ್ಲಿ ಫೇಸ್ ಬುಕ್, ವಾಟ್ಸಾಪ್ ಇತ್ಯಾದಿಗಳ ಮೇಲೆ ಪೊಲೀಸ್ ಇಲಾಖೆ ಕೂಡ ವಿಶೇಷ ನಿಗಾ ಇಟ್ಟು ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯಾಸೀನ್ ಅವರು ತಿಳಿಸಿದ್ದಾರೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದರೆ ಈಗಾಗಲೇ ಆರ್ಥಿಕ ಹಿಂಜರಿತದಿಂದ ಕಷ್ಟದಲ್ಲಿರುವ ಬಡವರು, ಮಾಧ್ಯಮ, ಕೆಳ ಮಧ್ಯಮ ವರ್ಗಗಳ ಜನರು, ಕಾರ್ಮಿಕರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲ ಸಮುದಾಯಗಳಿಗೆ, ರಾಜಕೀಯ, ಧಾರ್ಮಿಕ, ಸಾಮಾಜಿಕ ನಾಯಕರಿಗೆ, ಯುವಜನತೆಗೆ , ಸಂಘಟನೆಗಳಿಗೆ ಇದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love