ಅರಬ್ ದೇಶದಲ್ಲಿ “ಯಕ್ಷ ತರಂಗ”; ಕರಾವಳಿ ಕರ್ನಾಟಕದ ಗಂಡುಕಲೆಯ ಹೆಜ್ಜೆ ಗುರುತುಗಳು
ಭವ್ಯ ಭಾರತದ ಸುಂದರ ಕರ್ನಾಟಕದ ಕಡಲ ತೀರದ ಕರಾವಳಿಯ ತುಳುನಾಡಿನ ವಿಶಿಷ್ಟ ಕಲೆ, ಕನ್ನಡ ಪ್ರಾಕಾರಗಳಲ್ಲಿ ಅತ್ಯಂತ ಪ್ರಮುಖವಾಗಿರುವ ಗಂಡುಕಲೆ ಎಂದೇ ವಿಶ್ವಖ್ಯಾತಿಯನ್ನು ಪಡೆದಿರುವ “ಯಕ್ಷಗಾನ” ಅರಬ್ ಸಂಯುಕ್ತ ಸಂಸ್ಥಾನದಲ್ಲಿ 1980ರ ದಶಕದಿಂದ ತೆಂಕುತಿಟ್ಟು, ಬಡಗುತಿಟ್ಟು ಪ್ರಾಕಾರಗಳ ಮೂಲಕ ಮೂಡಿಬಂದಿರುವ ಯಕ್ಷಗಾನದ ಹೆಜ್ಜೆಗುರುತುಗಳನ್ನು ದಾಖಲಿಸಿರುವ ವಿಶೇಷ ಲೇಖನ…..
“ಗಲ್ಫ್” ಎಂದರೆ ಮನಸ್ಸಿನಲ್ಲಿ ಮೂಡುವುದು ಮರುಭೂಮಿಯ ಚಿತ್ರಣ. ಅರೇಬಿಕ್ ಭಾಷೆಯನ್ನಡುವ ಅರಬ್ ಸಂಯುಕ್ತ ಸಂಸ್ಥಾನದ ಅರಬ್ಬರು ಮರಳುಗಾಡನ್ನು ಹಸಿರು ಭೂಮಿಯನ್ನಾಗಿ ಪರಿವರ್ತಿಸಿದ ಜ್ಞಾನ ವಿಜ್ಞಾನ ಕ್ರಿಯಾರೂಪದ ಅಧುನಿಕ ನಗರ. ಲೋಕವಿಖ್ಯಾತ ವಾಣಿಜ್ಯ ಕೇಂದ್ರ. ಯು.ಎ.ಇ. ಯಲ್ಲಿ ಅಬುಧಾಬಿ, ದುಬಾಯಿ, ಶಾರ್ಜಾ, ಅಜ್ಮಾನ್, ರಾಸ್ ಅಲ್ ಖೈಮಾ, ಪ್ಯುಜೆರಾ, ಉಮ್ ಅಲ್ ಕೊಯನ್ ಎಂಬ ಏಳು ರಾಜ್ಯಗಳು ಸೇರಿವೆ. ಅನಿವಾಸಿ ಭಾರತೀಯರು ಗಲ್ಫ್ ನಾಡಿನ ವಿತ್ತ ಸಂಪತ್ತಿನ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ. ಉದ್ಯೋಗಿಗಳಾಗಿ ಉದ್ದಿಮೆದಾರರಾಗಿರುವ ಭಾರತೀಯರಲ್ಲಿ ಕರ್ನಾಟಕದ ಕನ್ನಡಿಗರು, ತುಳುವರು ಹಾಗೂ ಕರ್ನಾಟಕದ ವಿವಿಧ ಭಾಷಿಗರು ಕಳೆದ ಮೂರು ನಾಲ್ಕು ದಶಕಗಳಿಂದ ಶಿಸ್ತಿನ ಜೀವನ ಸಾಗಿಸುತಿದ್ದಾರೆ. ಜನ್ಮಭೂಮಿಯ ಸಾಂಸ್ಕೃತಿಕ ಪ್ರಜ್ಞೆಯನ್ನು ನೆನಪಿಸಿಕೊಳ್ಳುವ ಯಕ್ಷಗಾನ, ನಾಟಕ, ಜಾನಪದ ನೃತ್ಯ, ರಂಗರೂಪಕ, ಪ್ರಹಸನ, ಛದ್ಮವೇಷ, ಹಾಸ್ಯ, ಲಹರಿ, ಸಂಗೀತ, ಗಾಯನ ರಸಮಂಜರಿ ಕಾರ್ಯಕ್ರಮಗಳನ್ನು ಈ ಗಲ್ಫ್ ನಾಡಿನಲ್ಲಿ ಭಾಷಾ, ಜಾತಿ ಸಮುದಾಯದ ಸಂಘಟನೆಗಳನ್ನು ಕಟ್ಟಿಕೊಂಡು ಭಾಷೆ, ಕಲಾ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡು ಬಂದಿವೆ.
ಅರಬ್ ದೇಶದ ಕಾನೂನು ಕಟ್ಟಳೆಯಲ್ಲಿ ಕರಾವಳಿ ಕರ್ನಾಟಕದ ನಾಗಮಂಡಲ, ಭೂತಕೋಲ, ಕಂಬಳ ಇತ್ಯಾದಿ ನಡೆಸಲು ಅವಕಾಶ ಇಲ್ಲದಿದ್ದರೂ, ಅನುಮತಿ ಪಡೆದು ಯಕ್ಷಗಾನ, ನಾಟಕ, ನೃತ್ಯ, ಕ್ರೀಡೆ, ಸ್ನೇಹಮಿಲನ, ಸ್ಥಬ್ಧಚಿತ್ರ ಮೆರವಣಿಗೆ, ಹುಲಿವೇಷ, ಬ್ಯಾಂಡ್ ಇತ್ಯಾದಿ ವೈಭವದ ಕಾರ್ಯಕ್ರಮಗಳನ್ನು ಸಹಸ್ರರಾರು ಸಂಖ್ಯೆಯಲ್ಲಿ ಕನ್ನಡಿಗರು ತುಳುವರು ಸಮಾವೇಶಗಳ ಮೂಲಕ ಯಶಸ್ವಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ವಿದೇಶದಲ್ಲಿ ಯಕ್ಷಗಾನದ ಕೀರ್ತಿ ಪತಾಕೆಯನ್ನು ಹಾರಿಸಿದ ದಾಖಲೆ
1970 ರಲ್ಲಿ ಜಪಾನ್ ದೇಶದಲ್ಲಿ ನಡೆದ “ಎಕ್ಸ್ಪೋ – 70” ವಿಶ್ವ ಜಾನಪದ ಮೇಳದಲ್ಲಿ ವಿಶ್ವದಾದ್ಯಂತ ವಿವಿಧ ದೇಶಗಳು ತಮ್ಮ ತಮ್ಮ ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿದ್ದವು. ಅಂದಿನ ಆ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ನಮ್ಮ ಕಡಲ ತೀರದ “ಯಕ್ಷಗಾನ” ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿತ್ತು.
ವಿಶ್ವದ ಜಾನಪದ ಕಲೆಗಳಲ್ಲಿ ಯಕ್ಷಗಾನ ಪ್ರಥಮ ಸ್ಥಾನದಲ್ಲಿರುವುದನ್ನು ವಿಶ್ವ ಸಂಸ್ಥೆ ಹಲವು ದಶಗಳ ಹಿಂದೆಯೆ ಘೋಷಣೆ ಮಾಡಿದ್ದು ಇಂದಿಗೂ ಅದೇ ಸ್ಥಾನವನ್ನು ಉಳಿಸಿಕೊಂಡಿದೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ದಾಖಲಾಗಿರುವ ಪ್ರಥಮ ಯಕ್ಷಗಾನ ಪ್ರದರ್ಶನ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃ ಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘದ ಮಹಾಪೋಷಕರಾಗಿರುವ ಡಾ. ಬಿ. ಆರ್. ಶೆಟ್ಟಿಯವರು ಹಾಗೂ ಅಧ್ಯಕ್ಷರಾಗಿರುವ ಶ್ರೀ ಸರ್ವೋತ್ತಮ್ ಶೆಟ್ಟಿಯವರ ನೇತ್ರತ್ವದಲ್ಲಿ, 1988 ಜೂನ್ ತಿಂಗಳಿನಲ್ಲಿ ಕರ್ನಾಟಕದ ತುಳುನಾಡಿನ ಕಡಲತಡಿಯ ಭಾರ್ಗವ ಡಾ| ಶಿವರಾಮ ಕಾರಂತರ ಹತ್ತೊಂಬತ್ತು ಯಕ್ಷಗಾನ ಕಲಾವಿದರ ತಂಡವನ್ನು ಅಬುಧಾಬಿಗೆ ಬರಮಾಡಿಕೊಂಡು “ವೀರ ಅಭಿಮನ್ಯು ಕಾಳಗ” ಬಡಗು ತಿಟ್ಟು ಯಕ್ಷಗಾನ ಪ್ರಸಂಗ ಪ್ರಥಮ ಬಾರಿಗೆ ಪ್ರದರ್ಶನವಾಗಿ ದಾಖಲೆಯಾಗಿದೆ. ಅಬುಧಾಬಿ ಇಂಡಿಯನ್ ಸ್ಕೂಲ್, ದುಬಾಯಿ ಇಂಡಿಯನ್ ಸ್ಕೂಲ್ ಹಾಗೂ ದುಬಾಯಿ ಸಭಾಂಗಣದಲ್ಲಿ “ಪಂಚವಟಿ” ಪ್ರಸಂಗವನ್ನು ಒಟ್ಟು ನಾಲ್ಕು ಬಾರಿ ಪ್ರದರ್ಶಿದ್ದಾರೆ. ಅಂದಿನ ಅ ಸಂದರ್ಭದಲ್ಲಿ ಡಾ| ಶಿವರಾಮ ಕಾರಂತರಿಗೆ ಎಪ್ಪತೈದು ಸಾವಿರ ರೂಪಾಯಿಗಳನ್ನು ಗೌರವ ಧನವಾಗಿ ನೀಡಿ ಗೌರವಿಸಲಾಗಿತ್ತು. ಡಾ. ಶಿವರಾಮ ಕಾರಂತರು ಹೊರದೇಶದಲ್ಲಿ ಪಡೆದ ಪ್ರಥಮ ಗೌರವ ಧನವಾಗಿತ್ತು. ಅಂದಿನ ಯಕ್ಷಗಾನ ಪ್ರಸಂಗದಲ್ಲಿ ವೀರ ಅಭಿಮನ್ಯು ಆಗಿ ಅಭಿನಯಿಸಿದ್ದ ಶ್ರೀ ಸಂಜೀವ ಸುವರ್ಣ ಇಂದು ಉಡುಪಿಯ ಎಂ.ಜೆ.ಎಂ. ಕಾಲೇಜಿನ ಆವರಣದಲ್ಲಿರುವ ಡಾ| ಶಿವರಾಮ ಕಾರಂತರು ಸ್ಥಾಪಿಸಿದ ಯಕ್ಷಗಾನ ಕೇಂದ್ರದ ಮುಖ್ಯಸ್ಥರಲ್ಲಿ ಓರ್ವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯು.ಎ.ಇ. ತುಳುಕೂಟ ದುಬಾಯಿ 1990 ರ ದಶಕದಲ್ಲಿ ಶ್ರೀಯುತ ಸಿ.ಆರ್. ಶೆಟ್ಟಿ ಮತ್ತು ಉಮೇಶ್ ನಂತೂರ್ ನಾಯಕತ್ವದಲ್ಲಿ ಊರಿನಿಂದ ಶ್ರೀ ಪ್ರಭಾಕರ ಜೋಶಿಯವರ ತಂಡವನ್ನು ಬರಮಾಡಿಕೊಂಡು ತೆಂಕು ತಿಟ್ಟು ಯಕ್ಷಗಾನ ಪ್ರಸಂಗವನ್ನು ದುಬಾಯಿಯಲ್ಲಿ ಪ್ರದರ್ಶಿಸಲಾಯಿತು.
ಎರಡನೆಯ ಸಹಸ್ರಮಾನದ ಆರಂಭದಲ್ಲಿ “ಯಕ್ಷಮಿತ್ರರು”
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಉದಯ….
2003ರಲ್ಲಿ ಶ್ರೀಯುತರುಗಳಾದ ಚಿದಾನಂದ ಪೂಜಾರಿ ವಾಮಂಜೂರು, ದಿನೇಶ್ ಶೆಟ್ಟಿ ಕೊಟ್ಟಿಂಜ, ಸುಧಾಕರ್ ತುಂಭೆ, ವಿಠಲ್ ಶೆಟ್ಟಿ ಮತ್ತು ಕಿಶೋರ್ ಗಟ್ಟಿ, ಭವಾನಿ ಶಂಕರ್ ಶರ್ಮಾ, ವೆಂಕಟೇಶ್ ಶಾಸ್ತ್ರಿ ಮತ್ತು ಪದ್ಮರಾಜ್ ಎಕ್ಕಾರ್ ಇವರುಗಳು ಒಟ್ಟು ಸೇರಿ ಯಕ್ಷಗಾನ ಪ್ರದರ್ಶನಕ್ಕೆ ಕಾರ್ಯಯೋಜನೆಯನ್ನು ಹಾಕಿಕೊಂಡು ಒಂದು ವರ್ಷಗಳ ಕಾಲ ಪೂರ್ವತಯಾರಿ ನಡೆಸಿ ಪೂರ್ಣಪ್ರಮಾಣದ ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಿಕೊಂಡರು. 2004ರಲ್ಲಿ ಪ್ರಥಮ ಯಕ್ಷಗಾನ ಪ್ರದರ್ಶನ ಪ್ರಾರಂಭಿಸಿದರು.
ಉದ್ಯೋಗ ನಿಮಿತ್ತ ಗಲ್ಫ್ ನಾಡಿಗೆ ಬಂದಿರುವ ತುಳುವರಲ್ಲಿ ಊರಿನಲ್ಲಿ ಕೆಲವು ಮೇಳಗಳಲ್ಲಿ ವಿವಿಧ ಪಾತ್ರಧಾರಿಗಳಾಗಿದ್ದ ಕಲಾವಿದರು ದುಬಾಯಿಯಲ್ಲಿ ಒಟ್ಟುಸೇರಿ, ಇನ್ನಿತರ ಯಕ್ಷಗಾನ ಆಸಕ್ತರೊಂದಿಗೆ “ಯಕ್ಷ ಮಿತ್ರರು ” ಸಂಘಟನೆ ಮಾಡಿಕೊಂಡರು. ದಿನನಿತ್ಯ ಅವಿಶ್ರಾಂತ ದುಡಿತ, ತಮ್ಮ ತಾಯಿನಾಡಿನ ಕಲಾಪರಂಪರೆಯ ತುಡಿತ, ವಾರದ ಒಂದು ದಿನದ ರಜೆಯಲ್ಲಿ ಯಕ್ಷಗಾನದ ಬಗ್ಗೆ ಚರ್ಚೆ, ಯಕ್ಷಗಾನ ಪ್ರಸಂಗ ಪ್ರದರ್ಶನದ ಬಗ್ಗೆ ಕಾರ್ಯ ಯೋಜನೆ ರೂಪಿಸಿಕೊಂಡು, ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆಯನ್ನು ತಯಾರಿಸಿಕೊಂಡರು.
ಯಕ್ಷಗಾನ ಮೇಳಕ್ಕೆ ಬೇಕಾಗುವ ಅಪಾರ ಪ್ರಮಾಣದ ವಸ್ತ್ರಾಭರಣಗಳು, ಕಿರೀಟ, ಚೆಂಡೆ, ತಾಳ ಮದ್ದಲೆಗಳು. ಆಭರಣಗಳು ವಿವಿಧ ವಿನ್ಯಾಸದ ಉಡುಪುಗಳನ್ನು ಪಾತ್ರಕ್ಕೆ ತಕ್ಕಂತೆ ಊರಿನಿಂದ ತರಿಸಲಾಯಿತು. ಇನ್ನಷ್ಟು ಹೆಚ್ಚಿನ ಕಿರೀಟ, ಕೈ ಪಟ್ಟಿ ತೋಳು ಪಟ್ಟಿಗಳನ್ನು ಕಿಶೋರ್ ಗಟ್ಟಿಯವರು ದುಬಾಯಿಯಲ್ಲೆ ಸಿದ್ದ ಪಡಿಸಿದರು. ವಸ್ತ್ರಗಳನ್ನು ಶ್ರೀಯುತ ಪದ್ಮರಾಜ್ ಎಕ್ಕಾರು ಸಿದ್ದಪಡಿಸಿದರು. ಒಂದು ದೇವಿ ಮಹಾತ್ಮೆ ಪ್ರಸಂಗಕ್ಕೆ ಬೇಕಾಗಿರುವ ಪರಿಕರಗಳನ್ನು ಸಂಗ್ರಹಿಸಿದರೆ, ಅದನ್ನು ಇನ್ನಿತರ ಯಾವುದೇ ಪ್ರಸಂಗಕ್ಕೆ ಉಪಯೋಗಿಸ ಬಹುದಾಗಿದೆ. ಯಕ್ಷಮಿತ್ರರು ಪೂರ್ಣ ಪ್ರಮಾಣದ ಪರಿಕರಗಳನ್ನು ಒಟ್ಟು ಮಾಡಿರುವುದರಿಂದ ಯು.ಎ.ಇ.ಯ ವಿವಿಧೆಡೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಸುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ.
ಯಕ್ಷ ಮಿತ್ರರ ಕಲಾ ಭಂಡಾರದಲ್ಲಿರುವ ಪರಿಕರಗಳು : ಐದು ಜನ ಹಿಮ್ಮೇಳದ ಮುಂಡಾಸು, ಚೆಂಡೆ, ಮದ್ದಲೆ, ಜಾಗಟೆ, ಚಕ್ರ ತಾಳ, ಹಾರ್ಮೊನಿಯಂ, ವಿಷ್ಣು ಚಕ್ರ, ದೇವೆಂದ್ರನ ವಜ್ರಾಯುದ, ತ್ರಿಶೂಲ, ಬಿಲ್ಲು ಬಾಣ, ಪರಶು, ದಂಡ, ರುದ್ರಾಕ್ಷಿ, ಕಮಂಡಲು, ಗೆಜ್ಜೆ, ಕೇಸರಿ ತಟ್ಟಿ, ಪಗಡಿ, ರಾಜ ವೇಷ, ಬಾಲು ಪುಂಡು ವೇಷ, ತುರಾಯಿ ಕಿರೀಟ, ಕೋಲು ಕಿರೀಟ, ಮಹಿಷಾಸುರನ ಕೊಂಬು, ಎದೆಪಟ್ಟಿ, ಶೋಗಲೆ, ಭುಜಪಟ್ಟಿ, ಕೆನ್ನೆಪು, ಕೈಕಟ್, ತೋಳುಕಟ್, ಕರ್ಣಪಾತ್ರೆ, ಎದೆಪದಕ, ಸಪೂರ ಅಟ್ಟಿಗೆ, ಹೊರಗಿನ ದಗನೆ, ಉಂಡಾಟಿಗೆ, ವೀರಕಸೆ, ಉಲ್ಲನ್ ಡಾಗು, ಹೊರಗಿನ ಚಡ್ಡಿ, ಸಾಕ್ಸ್, ಕಾಲು ಪಟ್ಟಿಸ್ ಇತ್ಯಾದಿ ಪಳ ಪಳನೆ ಹೊಳೆಯುವ ವಸ್ತ್ರಾಭರಣಗಳು ಯಕ್ಷ ಮಿತ್ರರ ಬಹು ದೊಡ್ಡ ಆಸ್ತಿಯಾಗಿದೆ. ಅತ್ಯಂತ ಅಕರ್ಷಕ ಉಡುಗೆ ತೊಡುಗೆಗಳು, ಅಭರಣ, ಅಯುಧಗಳು ಕಲಾವಿದರ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ. ಅನುಭವೀ ಕಲಾವಿದರೊಂದಿಗೆ ಯುವ ಪ್ರತಿಭೆಗಳು ಸೇರ್ಪಡೆಗೊಂಡು, ಕಲಾ ದೇವಿಯ ಆರಾಧನೆಯಲ್ಲಿ ತಮ್ಮನ್ನು ಸಮರ್ಪಿಸಿ ಕೊಂಡಿದ್ದಾರೆ.
ಯಕ್ಷಗಾನ ರಂಗ ವೇದಿಕೆ
ಯಕ್ಷಮಿತ್ರರು ತಮ್ಮ ಯಕ್ಷಗಾನ ಪ್ರದರ್ಶನಕ್ಕಾಗಿ ವಿಶಾಲವಾಗಿರುವ ಶಾಸ್ತ್ರೀಯವಾಗಿ ಕಂಬಗಳು ಕಮಾನುಗಳಿರುವ ವಿಧ್ಯುತ್ ದೀಪಾಲಂಕಾರದೊಂದಿಗೆ ನೈಜ್ಯ ಬೆಳಕು, ಧ್ವನಿವರ್ಧಕ ಅಳವಡಿಕೆಯಾಗಿರುವ ಆಕರ್ಷಕ ರಂಗ ಮಂಟಪವನ್ನು ತಯಾರಿಸಿಕೊಂಡು ಪ್ರದರ್ಶನ ನೀಡುತ್ತಾ ಬರುತ್ತಿರುವುದು ಹೆಗ್ಗಳಿಕೆಯ ವಿಷಯವಾಗಿದೆ.
ಇಂದಿನ ನವ್ಯ ಯುಗದಲ್ಲಿ ಮನೆಯಲ್ಲೇ ಕುಳಿತು ಆಯ್ಕೆ ಮಾಡಿಕೊಂಡು ವೀಕ್ಷಿಸುವ ಸುಲಭದ ಮನರಂಜನೆ ನೀಡುವ ಟಿ. ವಿ. ಯಲ್ಲಿ ಮೂಡಿಬರುವ ಸಿನೆಮಾ, ಧಾರಾವಾಹಿಗಳು, ರಿಯಾಲಿಟಿ ಶೋಗಳು ವೈಭವೀಕರಣ ಗೊಳ್ಳುತ್ತಿವೆ. ಇಂತಹ ಸನ್ನಿವೇಶಗಳಲ್ಲಿ ಮನೆಯಿಂದ ಯಕ್ಷಗಾನ ಸಭಾಂಗಣಕ್ಕೆ ಪ್ರೇಕ್ಷಕರನ್ನು ಕರೆ ತರುವ ಸಾಹಸ ಆಯೋಜಕರಿಗೆ ಸವಾಲಾಗಿದೆ.
ಪ್ರೇಕ್ಷಕ ವರ್ಗವನ್ನು ಹಿನ್ನೆಲೆಯಾಗಿಟ್ಟುಕೊಂಡು ಯಕ್ಷಗಾನ ಪ್ರಸಂಗದ ಕತೆಯ ಚೌಕಟ್ಟಿನ ಒಳಗೆ ಶೃಂಗಾರ ಕರುಣಾ ರಸಗಳನ್ನು ಆರಂಭದಲ್ಲೊ, ರುದ್ರ ಭೀಕರ ರಸವನ್ನು ಪ್ರಸಂಗದ ಮಧ್ಯಭಾಗದಲ್ಲೂ, ವೀರರಸ ಪ್ರಸಂಗದ ಕೊನೆಯ ಭಾಗದಲ್ಲೂ, ಅಲ್ಲಲ್ಲಿ ಪ್ರಸಂಗದ ಗಂಭೀರ ನಡೆಯಿಂದ ಹಾಸ್ಯದತ್ತ ಸೆಳೆದು, ಗಾನ, ನೃತ್ಯ, ಅಭಿನಯ, ಮಾತುಗಾರಿಕೆ ಈ ನಾಲ್ಕು ಅಂಗಗಳಿಗೆ ಚ್ಯುತಿಬಾರದ ರೀತಿಯಲ್ಲಿ ಗಲ್ಫ್ ನಾಡಿನಲ್ಲಿ ಯಕ್ಷಗಾನ ಪ್ರಸಂಗಗಳು ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿವೆ.
ಕಲಾವಿದನ ಮನೋಜ್ಞ ಅಭಿನಯ, ವಾಕ್ ಪಟುತ್ವ, ಕನ್ನಡ, ತುಳು ಭಾಷಾ ಸ್ವಚ್ಚತೆ, ನಿರರ್ಗಳ ಮಾತುಗಾರಿಕೆ, ಯಕ್ಷಗಾನದ ಮೂಲ ಸ್ವರೂಪಕ್ಕೆ ದಕ್ಕೆ ಬಾರದ ರೀತಿಯಲ್ಲಿ ಹಾಡುಗಾರಿಕೆ, ಶಬ್ಧಭಂಡಾರದಿಂದ ಸರಳ ಮಾತುಗಳ ಪ್ರಯೋಗ, ಮನೋರಂಜನೆ ಮಾತ್ರವಲ್ಲ, ಮನೋವಿಕಾಸಕ್ಕೆ ಕಾರಣವಾಗಿರುವ, ಗಾನ, ನೃತ್ಯ, ಅಭಿನಯ, ಮಾತುಗಾರಿಕೆ ಈ ನಾಲ್ಕು ಅಂಗಗಳಿಂದ ಕನ್ನಡ, ತುಳು ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿರುವ ಗಂಡುಕಲೆ ಯಕ್ಷಗಾನವನ್ನು ಗಲ್ಫ್ ನಾಡಿನಲ್ಲಿ ಕಲಾವಿದರು ಅತ್ಯಂತ ಶಿಸ್ತಿನಿಂದ, ಸತತವಾಗಿ ಅಭ್ಯಾಸ ಮಾಡಿಕೊಂಡು ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರ ಮನಸೆಳೆಯುವಲ್ಲಿ ಸಫಲತೆಯನ್ನು ಪಡೆದಿದ್ದಾರೆ.
2004 ರಿಂದ “ಯಕ್ಷ ಮಿತ್ರರ” ಪ್ರದರ್ಶವಾದ ಪ್ರಸಂಗಗಳು
ಕಡಲ ತೀರದ ಯಕ್ಷಗಾನ ರಂಗದ ಅಭಿನವ ವಾಲ್ಮಿಕಿ, ಛಂದಶಾಸ್ತ್ರ ಪರಿಣಿತರು, ತೆಂಕು ತಿಟ್ಟು ಬಡಗುತಿಟ್ಟು ಮಹೋನ್ನತ ಪ್ರಸಂಗಕರ್ತರಾದ “ಯಕ್ಷ ಬ್ರಹ್ಮ” ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಭಾಗವತಿಕೆಯಲ್ಲಿ ಪ್ರಥಮ ಪ್ರದರ್ಶನ 2004 ರಲ್ಲಿ “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” ದುಬಾಯಿ ನಶ್ವನ್ ಸಭಾಂಗಣದಲ್ಲಿ ನಡೆಯಿತು.
* ಶಾಂಭವಿ ವಿಲಾಸ ( ದೇವಿ ಮಹಾತ್ಮೆ) ಶ್ರೀ ಪುರುಷೋತ್ತಮ ಪೂಂಜಾ ರವರ ಭಾಗವತಿಕೆಯಲ್ಲಿ.
* ಶ್ರೀ ದೇವಿ ಲಲಿತೋಪಖ್ಯಾನ – ಶ್ರೀ ನಾರಾಯಣ ಶಭರಾಯ ರವರ ಭಾಗವತಿಕೆಯಲ್ಲಿ.
* ದಕ್ಷ ಯಜ್ಞ ಭಾರ್ಗವ ವಿಜಯ – ಶ್ರೀ ಜಯಪ್ರಕಾಶ ನಿಡುವಣ್ಣಾಯ ರವರ ಭಾಗವತಿಕೆಯಲ್ಲಿ.
* ಕೋಟಿ ಚೆನ್ನಯ್ಯ – ಶ್ರೀ ಪುರುಷೋತ್ತಮ ಪೂಂಜಾ ರವರ ಭಾಗವತಿಕೆಯಲ್ಲಿ.
ಶ್ರೀ ಕ್ಷೇತ್ರ ಕಟೀಲು 5ನೇ ಮೇಳದ ಪ್ರಧಾನ ಭಾಗವತರು ಕಂಚಿನ ಕಂಠದ ಪಟ್ಲ ಸತೀಶ್ ಶೆಟ್ಟಿ ಯವರ ಭಾಗವತಿಕೆಯಲ್ಲಿ. “ಶಾಂಭವಿ ವಿಜಯ” (2011) “ತ್ರಿಜನ್ಮ ಮೋಕ್ಷ” (2012) “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” (2013)
“ಯಕ್ಷ ವೈಭವ – ಮಾನಿಷಾದ” ಭಾಗವತರಾದ ಗಾನಕೋಗಿಲೆ ಶ್ರೀ ದಿನೇಶ್ ಅಮ್ಮಣ್ಣಾಯ ಜೊತೆಗೂಡಿ (2014)
“ಮಣಿಕಂಠ ಮಹಿಮೆ – ರತಿ ಕಲ್ಯಾಣ” (2015)
“ವಿರೋಚನ ತರಣಿ ಸೇನ” ಭಾಗವತರಾದ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಯವರ ಜೊತೆಗೂಡಿ (2016)
“ಚಕ್ರೇಶ್ವರ ಪರೀಕ್ಷಿತ” ಭಾಗವತರಾದ ಶ್ರೀ ಗಿರೀಶ್ ರೈ ಕಕ್ಕೆಪದವು ಜೊತೆಗೂಡಿ (2017)
ಇನ್ನಿತರ ಸಂಘ ಸಂಸ್ಥೆಗಳಲ್ಲಿ ಯಕ್ಷ ಮಿತ್ರರ ತಂಡ ನೀಡಿರುವ ಪ್ರಸಂಗಗಳು : “ಶಾಂಭವಿ ವಿಜಯ” – ಶ್ರೀ ಬಲಿಪ ನಾರಾಯಣ ಭಾಗವತರ ಭಾಗವತಿಕೆಯಲ್ಲಿ ನಡೆದಿತ್ತು. ಇನ್ನಿತರ ಪ್ರಸಂಗಗಳು – ಅಭಿಮನ್ಯು ಕಾಳಗ, ಕರ್ಣಾರ್ಜುನ ಕಾಳಗ, ಶುಂಭಾಸುರ ವಧೆ, ಭಸ್ಮಾಸುರ ಮೋಹಿನಿ, ಅಮರ ಶಿಲ್ಪಿ ವೀರ ಕಲ್ಕುಡ, ಬಿರ್ದ್ ದ ಬೀರೆರ್, ಮಹಿಸಾಸುರ ವಧೆ, ಇತ್ಯಾದಿ ಯಕ್ಷಗಾನ ಪ್ರದರ್ಶನ ಸ್ಥಳಿಯ ಕಲಾವಿದರ ಅಭಿನಯದಲ್ಲಿ ಯು.ಎ.ಇ.ಯ ವಿವಿಧ ವೇದಿಕೆಗಳಲ್ಲಿ ಪ್ರದರ್ಶನವಾಗಿದೆ.
ಬಡಗುತಿಟ್ಟು ಮೇಳ
2013ರಲ್ಲಿ ಶ್ರೀ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ, ಕೊಂಡದಕುಳಿ, ಕುಂಭಾಶಿ ಅತಿಥಿ ಕಲಾತಂಡ, ಯಕ್ಷಕಲಾ ವೃಂದ ದುಬೈ ಇವರ ಆಶ್ರಯದಲ್ಲಿ ದುಬಾಯಿಯಲ್ಲಿ ಪ್ರಥಮ ಬಾರಿಗೆ, ಗಾನಕೋಗಿಲೆ ಶ್ರೀ ಕೇಶವ ಹೆಗ್ಗಡೆ ಕೊಳಗಿಯವರ ಭಾಗವತಿಕೆಯಲ್ಲಿ ಬಡಗುತಿಟ್ಟಿನ ಪ್ರಾಕಾರದ “ಮಧುರಾ ಮಹಿಂದ್ರ” ಪ್ರಸಂಗ, ಅಬುಧಾಬಿಯಲ್ಲಿ ‘ಕಾತ್ರ್ಯವೀರಾರ್ಜುನ’ ದುಬಾಯಿಯಲ್ಲಿ ಹವ್ಯಕ ಸಮಾಜದ ಆಶ್ರಯದಲ್ಲಿ ‘ಭಸ್ಮಾಸುರ ಮೋಹಿನಿ’ ಪ್ರಸಂಗ ಪ್ರದರ್ಶಿತವಾಗಿದೆ.
ಅರಬ್ ದೇಶದಲ್ಲಿ ಪ್ರಥಮ ಮಹಿಳಾ ತಂಡದ ಯಕ್ಷಗಾನ “ಪಾಂಚಜನ್ಯ”
ಅರಬ್ ದೇಶದಲ್ಲಿ ಸುಮಂಗಲೆಯರು ಒಟ್ಟು ಸೇರಿ ಆಚರಿಸುತ್ತಿರುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ದಶಮಾನೋತ್ಸವ ಅಚರಣೆಯ ಸಂದರ್ಭದಲ್ಲಿ ಪ್ರಥಮಬಾರಿಗೆ ಮಹಿಳಾ ತಂಡದ ಯಕ್ಷಗಾನ “ಪಾಂಚಜನ್ಯ” 2016 ರಲ್ಲಿ ಮಹಿಳಾ ಭಾಗವತರಾದ ಕಾವ್ಯಶ್ರೀ ಅಜೇರು ಇವರ ಭಾಗವತಿಕೆ ಮತ್ತು ದಿವ್ಯಶ್ರೀ ಸುಳ್ಯ ಇವರ ಚಂಡೆ ವಾದನದೊಂದಿಗೆ ಮಹಿಳಾ ಸದಸ್ಯರ ತಂಡದ ಅಭಿನಯದೊಂದಿಗೆ ನಡೆದಿರುವ ಯಕ್ಷಗಾನ ಪ್ರಸಂಗ ಅರಬ್ ದೇಶದಲ್ಲಿ ದಾಖಲೆಯಾಗಿದೆ.
“ಯಕ್ಷಮಿತ್ರರು” ಕಲಾತಂಡದ ಕಲಾವಿದರು
ಯಕ್ಷಮಿತ್ರರು ಕಲಾತಂಡದಲ್ಲಿ ಪ್ರಮುಖರಾದವರು ಶ್ರೀ ಚಿದಾನಂದ ಪೂಜಾರಿ ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ನಾಯಕತ್ವದಲ್ಲಿ ಭವಾನಿ ಶಂಕರ್ ಶರ್ಮಾ, ವೆಂಕಟೇಶ್ ಶಾಸ್ತ್ರಿ, ಕಿಶೋರ್ ಗಟ್ಟಿ ಉಚ್ಚಿಲ, ರವಿ ಉಚ್ಚಿಲ್ ಸುಧಾಕರ್ ತುಂಬೆ, ಗಿರಿಧರ್ ನಾಯಕ್, ಸರ್ವೋತ್ತಮ್ ಶೆಟ್ಟಿ, ಪದ್ಮರಾಜ್ ಎಕ್ಕಾರ್, ವಿಠಲ್ ಶೆಟ್ಟಿ, ಸತೀಶ್ ಶೆಟ್ಟಿ, ದಯಾ ಕಿರೊಡಿಯನ್, ಹಾಗೂ ಪ್ರತಿವರ್ಷ ಶ್ರೀ ವಾಸುದೇವ ಭಟ್ ಮತ್ತು ಶ್ರೀ ವೆಂಕಟೇಶ್ ಶಾಸ್ತ್ರಿಯವರ ಪೌರೊಹಿತ್ಯದಲ್ಲಿ ಚೌಕಿ ಪೂಜೆ ನಡೆಸಿಕೊಂಡು ಬರುತಿದ್ದು ಇನ್ನಿತರ ಹಲವಾರು ಮಂದಿ ಸಹ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಮುಮ್ಮೇಳದಲ್ಲಿ: ಶ್ರೀಯುತರುಗಳಾದ, ಶೇಖರ್ ಡಿ’ ಶೆಟ್ಟಿಗಾರ್ ಕಿನ್ನಿಗೋಳಿ, ಚಿದಾನಂದ ಪೂಜಾರಿ ವಾಮಂಜೂರು, ಭವಾನಿ ಶಂಕರ್ ಶರ್ಮಾ, ಬಾಲಕೃಷ್ಣ ಶೆಟ್ಟಿಗಾರ್ ಕಿನ್ನಿಗೋಳಿ, ಡೋನಿ ಕೊರೆಯಾ, ಗಿರಿಧರ್ ನಾಯಕ್, ಹರೀಶ್ ಎಂ. ಎಸ್. ಕಿಶೋರ್ ಗಟ್ಟಿ ಉಚ್ಚಿಲ, ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಕೃಷ್ಣ ಕುಮಾರ್ ಐಲ್, ಪ್ರಭಾಕರ ಡಿ ಸುವರ್ಣ ಕರ್ನಿರೆ, ರವಿ ಉಚ್ಚಿಲ್, ಸಂದೀಪ್ ಬರ್ಕೆ, ಶೇಖರ್ ಉಪ್ಪಿನಂಗಡಿ, ಗಿರೀಶ್ ನಾರಾಯಣ ಕಾಟಿಪಳ್ಳ, ಸುಬ್ರಹ್ಮಣ್ಯ ಕಾರ್ಕಳ, ಸುಧಾಕರ್ ತುಂಬೆ, ವಸಂತ್ ಶೆರ್ವೆಗಾರ್, ವಾಸು ಬಾಯರ್, ವಿಕ್ರಮ ಶೆಟ್ಟಿ ಕಡಂದಲೆ, ರವಿ ಕೋಟ್ಯಾನ್, ಸತೀಶ ಶೆಟ್ಟಿಗಾರ್ ವಿಟ್ಲ, ಲೋಕೇಶ್ ಪೂಜಾರಿ, ಶರತ್ ಕುಮಾರ್ ಪೂಜಾರಿ, ಕೃಷ್ಣ ರಾಜ ರಾವ್ ಅಬುದಾಭಿ, ಶ್ರೀಮತಿ ಆಶಾ ಕೊರೆಯಾ, ಸಮಂತ ಗಿರೀಶ್ ನಾರಾಯಣ್, ಸೌಮ್ಯ ಧನಂಜಯ, ಶರಣ್ಯ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಮತ್ತುಪ್ರತೀಕ್ ಜಯಾನಂದ ಪಕ್ಕಳ, ಪ್ರಾಪ್ತಿ ಜಯಾನಂದ ಪಕ್ಕಳ, ಅದಿತಿ ದಿನೇಶ್ ಶೆಟ್ಟಿ ಕೊಟ್ಟಿಂಜ, ಆದಿತ್ಯ ದಿನೇಶ್ ಶೆಟ್ಟಿ ಕೊಟ್ಟಿಂಜ, ಅನಿಕೇತ ಬಿ ಯಸ್ ಶರ್ಮ, ಮನಸ್ವಿನಿ ಬಿ ಯಸ್ ಶರ್ಮ, ಯಶಸ್ವಿನಿ ಶೇಖರ್ ಪೂಜಾರಿ. ಇಶಿತಾ ಶೇಖರ್ ಪೂಜಾರಿ, ಸ್ಮøತಿ ಲಕ್ಷ್ಮೀಕಾಂತ ಭಟ್, ಶ್ರೀದೇವಿ ಲಕ್ಷ್ಮೀನಾರಾಯಣ ಶರ್ಮ, ಸುಶಾಂತರಾಮ ಜೆಪ್ಪು, ಸ್ವಾತಿ ಶರತ್ ಸರಳಾಯ, ಅಶೋಕ್ ಶೆಟ್ಟಿ ಕಾರ್ಕಳ, ತನೀಶ್ ಪ್ರಕಾಶ ಪಕ್ಕಳ, ಅನ್ವಿ ಜಗನ್ನಾಥ ಬೆಳ್ಳಾರೆ, ವೈಷ್ಣವಿ ಮನೋಹರ್ ಶೆಟ್ಟಿಗಾರ್, ಸ್ವಾತಿ ಸಂತೋಷ್ ಕಟೀಲು ಹಾಗೂ ಇವರುಗಳೊಂದಿಗೆ ಹತ್ತಾರು ಮಕ್ಕಳು ಅಭಿನಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರೀ ಶೇಖರ್ ಡಿ’ ಶೆಟ್ಟಿಗಾರ್ ಕಿನ್ನಿಗೋಳಿ ಇವರು ತಂಡಕ್ಕೆ ಸೇರ್ಪಡೆಯಾದನಂತರ ಯಕ್ಷಗಾನ ಪ್ರದರ್ಶನಕ್ಕೆ ಶಾಸ್ತ್ರೀಯ ಸ್ಪರ್ಶ ನೀಡಿ ಕ್ರಮಬದ್ಧವಾಗಿ ದುಬಾಯಿಯ ಹವ್ಯಾಸಿ ಕಲಾವಿದರನ್ನು ಉತ್ತಮವಾಗಿ ತಯಾರುಗೊಳಿಸಿ ಹತ್ತಾರು ಮಕ್ಕಳನ್ನು ಸೇರ್ಪಡೆ ಮಾಡಿಕೊಂಡು ವೇದಿಕೆಯಲ್ಲಿ ಪ್ರದರ್ಶನ ನೀಡಲಿಕ್ಕೆ ತಯಾರು ಮಾಡಿದ ಕೀರ್ತಿ ಇವರದ್ದಾಗಿದೆ.
ಕೊಲ್ಲಿ ರಾಷ್ಟ್ರದ ಹಿರಿಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿಯವರು, ಶ್ರೀಯುತರುಗಳಾದ ಶೇಖರ್ ಶೆಟ್ಟಿಯವರು, ಹರೀಶ್ ಶೇರಿಗಾರ್, ಸತೀಶ್ ಮಯ್ಯ, ಮನೋಹರ್ ರಾವ್, ಪ್ರವೀಣ್ ಶೆಟ್ಟಿ, ಗುಣಶೀಲ್ ಶೆಟ್ಟಿ, ಪ್ರೇಂನಾಥ್ ಶೆಟ್ಟಿ, ಸತೀಶ್ ಪೂಜಾರಿ, ಹರೀಶ್ ಬಂಗೇರಾ, ರಘುರಾಂ ಸುಂದರ್ ಶೆಟ್ಟಿ ಹಾಗೂ ಇನ್ನಿತರ ಹಲವಾರು ಕಲಾಪೋಷಕರು ಯಕ್ಷಮಿತ್ರರ ಉತ್ಸಾಹಕ್ಕೆ ನೀರೆರೆದು ಪೋಷಿಸಿಕೊಂಡು ಬರುತ್ತಿದ್ದಾರೆ.
ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿರುವ ಅಭಿಮಾನಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಒಂದು ಸಾವಿರದ ಇನ್ನೂರಕಿಂತಲೂ ಹೆಚ್ಚು ಆಸನ ವ್ಯವಸ್ತೆ ಇರುವ ಹವಾನಿಯಂತ್ರಿತ ದುಬಾಯಿ ಇಂಡಿಯನ್ ಹೈಸ್ಕೂಲ್ – ಶೇಖ್ ರಾಶೀದ್ ಬೃಹತ್ ಸಭಾಂಗಣದಲ್ಲಿ ಯಕ್ಷಗಾನ ಪ್ರದರ್ಶವನ್ನು ನಡೆಸಿಕೊಂಡು ಬರುತಿದ್ದು, ಯು.ಎ.ಇ.ಯ ವಿವಿಧ ಭಾಗಗಳಿಂದ ಕಲಾಭಿಮಾನಿಗಳು ನಿರಂತರವಾಗಿ ಪಾಲ್ಗೊಂಡು, ಗಲ್ಫ್ ನಾಡಿನಲ್ಲಿ ಯಕ್ಷಗಾನ ಕಲೆಯನ್ನು ತಮ್ಮ ಪೂರ್ಣ ಸಹಕಾರ, ಬೆಂಬಲ, ಪ್ರೋತ್ಸಾಹದೊಂದಿಗೆ ಯಶಸ್ವೀ ಹೆಜ್ಜೆಗೆ ಕೈಜೋಡಿಸಿದ್ದಾರೆ.
ಹಿಂದಿನ ತಲೆಮಾರಿನಿಂದ ಶಾಸ್ತ್ರೀಯವಾಗಿ ನಡೆದುಕೊಂಡು ಬರುತ್ತಿರುವ ಯಕ್ಷಗಾನ ಕಲೆಯನ್ನು ಯಕ್ಷಮಿತ್ರರು ಮುಂದಿನ ಪೀಳಿಗೆಗೆ ಸೇತುವೆಯಾಗಿ, ಕಲೆಯನ್ನು ಶಾಸ್ತ್ರೀಯವಾಗಿಯೇ ಉಳಿಸಿಕೊಂಡು ಮುನ್ನಡೆಸುವಂತಾಗಲಿ ಎಂದು ನಮ್ಮೆಲ್ಲರ ಹಾರೈಕೆಗಳು.
ಕೊಲ್ಲಿನಾಡಿನಲ್ಲಿ ನಡೆಯುವ ಜ್ಞಾನ ಯಜ್ಞದ ಯಕ್ಷಗಾನ ಕಲೆಗೆ, ಕಲಾವಿದರಿಗೆ, ಆಯೋಜಕರಿಗೆ, ಪ್ರಾಯೊಜಕರಿಗೆ ಗಲ್ಫ್ ನಾಡಿನ ಸಮಸ್ಥ ಅನಿವಾಸಿ ಕನ್ನಡಿಗರ ತುಳು ಅಭಿಮಾನಿಗಳ ಪರವಾಗಿ ಅಭಿನಂದನೆಗಳು.
“ಯಕ್ಷಗಾನಂ ಗೆಲ್ಗೆ ಯಕ್ಷಗಾನಂ ಬಾಳ್ಗೆ”
ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ