ಅಲೋಶೀಯಸ್ ಕಾಲೇಜಿನಲ್ಲಿ ಅಂತರ್ ಧರ್ಮೀಯ ವಿಚಾರಗೋಷ್ಟಿ
ಮಂಗಳೂರು : ಸಂತ ಅಲೋಶೀಯಸ್ ಕಾಲೇಜು ಮಂಗಳೂರು ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿವಿಧ ಧರ್ಮಗಳಲ್ಲಿನ ಶಾಂತಿ ಪ್ರೀತಿಯ ಕುರಿತಾದಂತೆ ಅಂತರ್ ಧರ್ಮೀಯ ವಿಚಾರಗೋಷ್ಟಿಯು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಕಲಾವಿಭಾಗದ ಪ್ರಾಂಶುಪಾಲರದಾರ ಆಲ್ವನ್ ಡೆಸ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಯಾನಂದ ಕೋಟ್ಯಾನ್ ಮಾತನಾಡಿ ಎಲ್ಲರೂ ಅಡೆತಡೆಗಳನ್ನು ಮೀರಿ ಬದುಕಬೇಕಾಗಿದೆ. ಹಿಂದು ಎಂದರೆ ಒಂದು ಧರ್ಮವಲ್ಲ ಅದೋಂದು ಜೀವನ ಶೈಲಿಯಾಗಿದೆ. ಧರ್ಮದ ಮರ್ಮವನ್ನು ಅರಿತು ಬಾಳುವುದು ಸೂಕ್ತ ಎಂದರು.
ಬಳಿಕ ಮಾತನಾಡಿದ ಮನ್ನಾ ಮಹಮ್ಮದ್ ಧರ್ಮಗಳೆಲ್ಲವೂ ಒಳಿತನ್ನು ಪ್ರತಿಪಾದಿಸುತ್ತದೆ. ಪ್ರೀತಿ, ವಿಶ್ವಾಸ, ಸ್ನೇಹ ಹಾಗೂ ಸಹಬಾಳ್ವೆಯನ್ನು ಇಸ್ಲಾಂ ಧರ್ಮದಂತೆ ಎಲ್ಲಾ ಧರ್ಮಗಳೂ ಪ್ರತಿಪಾದಿಸುತ್ತದೆ. ಗಲಭೆಗಳನ್ನು ಎಬ್ಬಿಸದೆ ಒಬ್ಬರನ್ನೊಬ್ಬರು ಅರಿತು ಬಾಳಬೇಕು ಎಂದರು.
ವಂ. ಪ್ರದೀಪ್ ಸಿಕ್ವೇರಾ ಮಾತನಾಡಿ, ಧರ್ಮಗಳಲ್ಲಿನ ಆಚಾರ, ವಿಚಾರ, ಧರ್ಮಗಳು ಪ್ರತಿಪಾದಿಸುವ ಶಾಂತಿ, ಪ್ರೀತಿ ಮತ್ತು ಮಾನವೀಯತೆ, ಧರ್ಮಗಳನ್ನು ಅವಲಂಬಿಸಿ ಬದುಕುವ ಹಾದಿ ಹಾಗೂ ಜೀವನ ಪಾಠದ ಕುರಿತು ತಿಳಿ ಹೇಳಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯಾ ಶೆಟ್ಟಿ, ಜಯಲಕ್ಷ್ಮೀ ಆಳ್ವಾ, ಪ್ರೇಮ ಡಿಸೋಜಾ ಮತ್ತಿತರು ಉಪಸ್ಥಿತರಿದ್ದರು.
ಜಾಯ್ಸನ್ ಅತಿಥಿಗಳನ್ನು ಪರಿಚಯಿಸಿದರು. ಶರಣ್, ಮಹೇಶ್ ಕಾರ್ಯಕ್ರಮ ನಿರೂಪಿಸಿದರು. ಮಿಷೇಲ್ ಡಿಸೋಜ ವಂದಿಸಿದರು.