ಅಲ್-ಅಕ್ಸಾದಲ್ಲಿ ಇಸ್ರೇಲಿನ ದುರಹಂಕಾರದ ವಿರುದ್ಧ ಎದ್ದು ನಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

Spread the love

ಅಲ್-ಅಕ್ಸಾದಲ್ಲಿ ಇಸ್ರೇಲಿನ ದುರಹಂಕಾರದ ವಿರುದ್ಧ ಎದ್ದು ನಿಲ್ಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಹೊಸದಿಲ್ಲಿ: ಆಕ್ರಮಿತ ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಅಧಿಕಾರಿಗಳಿಂದ ಹೇರಲಾಗಿರುವ ಹೊಸದಾದ ತೀವ್ರ ನಿರ್ಬಂಧಗಳು ಮತ್ತು ಪವಿತ್ರ ಮಸ್ಜಿದ್‍ಗೆ ತೆರಳುವ ಫೆಲೆಸ್ತೀನಿಯರ ಮೇಲಿನ ದೌರ್ಜನ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಇ.ಅಬೂಬಕರ್ ತೀವ್ರವಾಗಿ ಖಂಡಿಸಿದ್ದಾರೆ.

ವರದಿಗಳ ಪ್ರಕಾರ, ಫೆಲೆಸ್ತೀನಿಯರಿಗೆ ಅಲ್ ಅಕ್ಸಾ ಮಸೀದಿಗೆ ಪ್ರವೇಶ ನಿರಾಕರಿಸಲಾಗಿದೆ ಮತ್ತು ಅಲ್ಲಿರುವ ಇಸ್ಲಾಮೀ ವಕ್ಫ್‍ಗಳ ಕಾರ್ಯಾಲಯಗಳನ್ನು ಮುಚ್ಚಲಾಗಿದೆ. ಇಸ್ರೇಲ್ ಸೇನೆಯು ಕಬ್ಬಿಣದ ತಡೆಬೇಲಿಯ ಮೂಲಕ ಹಳೆಯ ನಗರಗಳನ್ನು ಸಂಪೂರ್ಣವಾಗಿ ಮುಚ್ಚಿದೆ ಮತ್ತು ಜೆರುಸಲೇಂ ನಿವಾಸಿಗಳನ್ನು ಅದರೊಳಗೆ ಪ್ರವೇಶಿಸುವುದನ್ನು ತಡೆಯಲಾಗಿದೆ.

ಅಲ್ಲಿ ಯಹೂದಿ ನಿವಾಸಿಗಳು ಶಾಂತಿ ಭಂಗ ಮಾಡಿದ್ದಾರೆ ಮತ್ತು ಅವರ ಅಕ್ರಮ ಅತಿಕ್ರಮಣದ ಕಾರಣದಿಂದಾಗಿ ಮಸೀದಿಯ ಸುತ್ತಮುತ್ತಲೂ ಹಿಂಸಾತ್ಮಕ ಘರ್ಷಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ಇಸ್ರೇಲ್ ಪ್ರಸಕ್ತ ಪರಿಸ್ಥಿತಿಯನ್ನು ನೆಪವಾಗಿಟ್ಟುಕೊಂಡು ಅಲ್ಲಿ ತನ್ನ ನಿಯಂತ್ರಣ ಸಾಧಿಸಲು ಬಯಸುತ್ತಿದೆ ಮತ್ತು ಜೆರುಸಲೇಂನಿಂದ ಫೆಲೆಸ್ತೀನಿ ಮುಸ್ಲಿಮರನ್ನು ಬಲವಂತವಾಗಿ ಹೊರಹಾಕುವ ಮೂಲಕ ಜೆರುಸಲೇಮನ್ನು ಯಹೂದಿ ನಗರವಾಗಿ ಬದಲಿಸುವ ಜಾರಿಯಲ್ಲಿರುವ ಅದರ ಪ್ರಯತ್ನವು ಹೆಚ್ಚುತ್ತಿದೆ.

ಅಲ್ ಅಕ್ಸಾ ಮಸೀದಿಯಲ್ಲಿ ವಿಶ್ವಾಸಿಗಳ ಹಕ್ಕುಗಳ ಉಲ್ಲಂಘನೆ ಮತ್ತು ಯಹೂದಿ ರಾಜ್ಯದ ದೌರ್ಜನ್ಯದ ವಿರುದ್ಧ ಜಗತ್ತಿನಾದ್ಯಂತ ಎಲ್ಲಾ ಮುಸ್ಲಿಮರು ತಮ್ಮ ಮೌನ ಮುರಿದು ಬೀದಿಗಿಳಿಯಬೇಕು. ತಮ್ಮ ತೃತೀಯ ಪವಿತ್ರ ಸ್ಥಳ, ಪ್ರಥಮ ಕಿಬ್ಲಾ ಮತ್ತು ಪ್ರವಾದಿ(ಸ)ಯವರ ರಾತ್ರಿ ಪಯಣದ ಗಮ್ಯಸ್ಥಳದ ಉಲ್ಲಂಘನೆ ಮತ್ತು ಅಪಹಾಸ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನರು ತಮ್ಮ ಸರಕಾರಗಳ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಇ.ಅಬೂಬಕರ್‍ರವರು ಒತ್ತಾಯಿಸಿದ್ದಾರೆ.

ಫೆಲೆಸ್ತೀನ್ ಜನತೆಯ ವಿರುದ್ಧ ಅಂತಾರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕು ಉಲ್ಲಂಘನೆಗಾಗಿ ಇಸ್ರೇಲ್‍ನ್ನು ಉತ್ತರದಾಯಿಯನ್ನಾಗಿ ಮಾಡಲು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿರುವ ಪಾಪ್ಯುಲರ್ ಫ್ರಂಟ್ ಚೆಯರ್‍ಮ್ಯಾನ್, ಪ್ರಸಕ್ತ ನಡೆಯುತ್ತಿರುವ ಇಸ್ರೇಲ್‍ನ ಎಲ್ಲಾ ಆಕ್ರಮಣವನ್ನು ತಡೆಯಲು ಮಧ್ಯಪ್ರವೇಶಿಸಬೇಕು ಮತ್ತು ಅಕ್ರಮ ವಸಾಹತಿನ ಮೂಲಕ ಫೆಲೆಸ್ತೀನ್ ಭೂಮಿಯನ್ನು ಕಳವು ಮಾಡುವುದನ್ನು ತಡೆಯಬೇಕು ಎಂದು ವಿಶ್ವಸಂಸ್ಥೆಯನ್ನು ಆಗ್ರಹಿಸಿದ್ದಾರೆ.


Spread the love