ಅಸಂಘಟಿತ ಮೀನುಗಾರ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮನವಿ
ಉಡುಪಿ: ಅಸಂಘಟಿತ ಮೀನುಗಾರ ಮಹಿಳೆಯರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಒಬಿಸಿ ಘಟಕ ಅಧ್ಯಕ್ಷ ಯತೀಶ್ ಕರ್ಕೇರಾ ಅವರ ನೇತೃತ್ವದಲ್ಲಿ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ಮೀನು ಮಾರುಕಟ್ಟೆ ಇದ್ದರೂ ಕೂಡ ಕೆಲವೊಂದು ಅಸಂಘಟಿತ ಮೀನುಗಾರ ಮಹಿಳೆಯರು ಮಾರುಕಟ್ಟೆಯಲ್ಲಿ ಸೂಕ್ತ ಸ್ಥಳವಕಾಶ ಸಿಗದೆ ಕೆಲವೊಂದು ಕಡೆಯಲ್ಲಿ ರಸ್ತೆಯಲ್ಲಿಯೇ ಮೀನು ಮಾರಾಟ ಮಾಡುತ್ತಿದ್ದು ಅಂತಹ ಮಹಿಳೆಯರಿಗೆ ಮೀನು ಮಾರಾಟ ಮಾಡದಂತೆ ನಗರಸಭೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ.
ಮೀನು ಮಾರಾಟ ಮಾಡುವುದು ಪ್ರತಿಯೊಬ್ಬ ಮೀನುಗಾರ ಮಹಿಳೆಯರ ಹಕ್ಕಾಗಿದ್ದು ಅವರಿಗೆ ಮಾರುಕಟ್ಟೆಯಲ್ಲಿ ಸೂಕ್ತ ಸ್ಥಳಾವಕಾಶ ಸಿಗದೆ ರಸ್ತೆ ಬದಿಯಲ್ಲಿ ಒಬ್ಬೊಬ್ಬರಾಗಿ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಲಾಕ್ ಡೌನ್ ಸಮಯದಲ್ಲಿ ಮೀನುಗಾರ ಮಹಿಳೆಯರು ಸೂಕ್ತ ದಿನಗೂಲಿ ಲಭಿಸದೆ ಪರದಾಡಿದ್ದಾರೆ. ಈಗಷ್ಟೇ ಮೀನು ಹಿಡಿದು ಅದನ್ನು ಅವರಿಗೆ ಸೂಕ್ತ ವ್ಯಾಪಾರ ಸಿಗುವ ಸ್ಥಳದಲ್ಲಿ ಮಾರಾಟ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಒಂದು ವೇಳೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದಾದರೆ ಅಂತಹ ಅಸಂಘಟಿತ ಮೀನುಗಾರ ಮಹಿಳೆಯರಿಗೆ ಸರ್ಕಾರ ಮತ್ತು ನಗರಸಭೆ ಸೂಕ್ತ ವ್ಯವಸ್ಥೆ ಮಾಡಬೇಕಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ಯುವ ನಾಯಕ ರಹೆಮಾನ್ ಹಾಗೂ ಅಸಂಘಟಿತ ಮಹಿಳಾ ಮೀನುಗಾರರು ಉಪಸ್ಥಿತರಿದ್ದರು.