ಅಹ್ಮದ್ ಅನ್ವರ್ – ಒಂದು ನೆನಪು’ ಸಾರ್ವಜನಿಕ ಸಂತಾಪ ಸಭೆ
ಇತ್ತೀಚೆಗೆ ನಿಧನರಾದ ಕವಿ, ಬರಹಗಾರ, ಛಾಯಾಚಿತ್ರ ಪತ್ರಕರ್ತ `ದಿವಂಗತ ಅಹ್ಮದ್ ಅನ್ವರ್ – ಒಂದು ನೆನಪು’ ಸಾರ್ವಜನಿಕ ಸಂತಾಪ ಸಭೆಯು ಮುಸ್ಲಿಮ್ ಲೇಖಕರ ಸಂಘದ ಆಶ್ರಯದಲ್ಲಿ ನಗರದ ರವೀಂದ್ರ ಕಲಾಭವನದಲ್ಲಿ ಬುಧವಾರ ನಡೆಯಿತು.
ಸಂಘದ ಅಧ್ಯಕ್ಷ ಉಮರ್ ಯು.ಎಚ್. ಮಾತನಾಡಿ, ಅಹ್ಮದ್ ಅನ್ವರ್‍ರ ಸಾಹಿತ್ಯದಲ್ಲಿ ಸಾರಸ್ವತ ಲೋಕದ ಪಕ್ವತೆಗಿಂತ ಮಾನವತೆಯ ತುಡಿತ ಎದ್ದು ಕಾಣುತ್ತಿವೆ. ಅನಾರೋಗ್ಯದಿಂದ ಹಾಸಿಗೆ ಹಿಡಿದ ಬಳಿಕವೂ ಬರೆಯುವ ಹುಮ್ಮಸ್ಸು ಇತ್ತು. ಬರೆಯುವ ಶಕ್ತಿ ಕಳೆದುಕೊಂಡರೂ ಕೂಡ ತನ್ನ ಪತ್ನಿಯ ಮೂಲಕ ಬರೆಯಿಸುತ್ತಿದ್ದುದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಸಾಹಿತಿ ರಹೀಂ ಟೀಕೆ ಮಾತನಾಡಿ, ಅಹ್ಮದ್ ಅನ್ವರ್‍ರ ಅಗಲಿಕೆ ನಿರೀಕ್ಷಿತವಾಗಿದ್ದರೂ ಕೂಡ ಆ ಕಟು ವಾಸ್ತವವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಲ್ಕೈದು ವರ್ಷದಿಂದ ಅವರು ಸಂಘರ್ಷದ ಬದುಕು ಸಾಗಿಸುತ್ತಿದ್ದರು. ಚೇತರಿಕೆಯ ಮಧ್ಯೆ ಸಾಹಿತ್ಯ ಕೃತಿಗಳಿಗೆ ಪ್ರತಿಕ್ರಿಯಿಸುವ ಮನಸ್ಸು ಇತ್ತು ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞÂ, ಲೇಖಕ ರಶೀದ್ ವಿಟ್ಲ, ಪತ್ರಕರ್ತರಾದ ಎನ್.ವಿ. ಪೌಲೋಸ್, ಶಹನಾಝ್ ಎಂ., ಎ.ಕೆ.ಕುಕ್ಕಿಲ, ಮುಹಮ್ಮದ್ ಆರಿಫ್, ಅಹ್ಮದ್ ಅನ್ವರ್ ಅವರ ಪುತ್ರ ಸಲ್ಮಾನ್ ಮಾತನಾಡಿದರು.
ಅನಸ್ ಮುಹಿಯ್ಯುದ್ದೀನ್ ಕಿರಾಅತ್ ಪಠಿಸಿದರು. ಮುಹಮ್ಮದ್ ಇರ್ಶಾದ್ ವೇಣೂರು ಭಾವಾನುವಾದ ವಾಚಿಸಿದರು. ಕೆ.ಎಂ. ಶರೀಫ್ ದುಆ ಮಾಡಿದರು. ಸಂಘದ ಉಪಾಧ್ಯಕ್ಷ ಬಿ.ಎ. ಮುಹಮ್ಮದಲಿ ಕಾರ್ಯಕ್ರಮ ನಿರೂಪಿಸಿದರು. ಅಹ್ಮದ್ ಅನ್ವರ್ ರಚಿಸಿದ `ನೀನಾರಿಗಾದೆ ಮಾನವ’ ಪದ್ಯವನ್ನು ಕವಿ ಹುಸೈನ್ ಕಾಟಿಪಳ್ಳ ಹಾಡಿದರು.