ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ: ಮೇ 15ರವರೆಗೆ ವಿಸ್ತರಣೆ

Spread the love

ಆಗುಂಬೆ ಘಾಟ್ ರಸ್ತೆ ಸಂಚಾರ ನಿಷೇಧ: ಮೇ 15ರವರೆಗೆ ವಿಸ್ತರಣೆ

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆ ಯಲ್ಲಿ ಮಾರ್ಚ್ 1ರಿಂದ 31ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ನಿಗದಿತ ಸಮಯದಲ್ಲಿ ದುರಸ್ತಿ ಪೂರ್ಣವಾಗಿಲ್ಲದ್ದರಿಂದ ಮೇ 15ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಲಘು ವಾಹನಗಳಾದ ಸಾಮಾನ್ಯ ಬಸ್, ಜೀಪ್, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್), ದ್ವಿಚಕ್ರ ವಾಹನಗಳು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ (ರಾಷ್ಟ್ರೀಯ ಹೆದ್ದಾರಿ 169) ಮೂಲಕ ಸಂಚರಿಸಬೇಕು. ಭಾರಿ ವಾಹನಗಳಾದ ರಾಜಹಂಸ, ಐರಾವತ ಮತ್ತು ಖಾಸಗಿ ಲಕ್ಷುರಿ ಬಸ್‍ಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳಿಗೆ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಹೊಸಂಗಡಿ-ಸಿದ್ದಾಪುರ-ಕುಂದಾಪುರ-ಉಡುಪಿ (ರಾಜ್ಯ ಹೆದ್ದಾರಿ 52) ಮೂಲಕ ಸಂಚರಿಸಲು ಬದಲಿ ವ್ಯವಸ್ಥೆ ಮಾಡಲಾಗಿದೆ.

ಕಾಮಗಾರಿ ಮುಗಿಯುವ ತನಕ ಅಥವಾ ಮೇ 15– ಈ ಪೈಕಿ ಯಾವುದು ಮೊದಲೋ ಅಲ್ಲಿಯವರೆಗೆ ವಾಹನ ಸಂಚಾರ ನಿಷೇಧ ಜಾರಿಯಲ್ಲಿರುವುದು. ಕಾಮಗಾರಿಗೆ ಅಡಚಣೆಯಾಗದಂತೆ ಸೂಕ್ತ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆಗುಂಬೆಯಲ್ಲಿರುವ ಸರ್ಕಾರಿ ಶಾಲೆ ಮತ್ತು ಎಸ್.ವಿ.ಎಸ್. ಶಾಲೆಗಳಿಗೆ ವಿದ್ಯಾರ್ಥಿಗಳು ಓಡಾಡಬೇಕಾಗಿರುವುದರಿಂದ ಮಿನಿ ಬಸ್‍ಗಳನ್ನು ತೀರ್ಥಹಳ್ಳಿ- ಆಗುಂಬೆ -ಬಿದರಗೋಡು- ಶೃಂಗೇರಿ ಮಾರ್ಗವಾಗಿಯೂ ಮತ್ತು ಸಾಮಾನ್ಯ ಬಸ್‍ಗಳನ್ನು ತೀರ್ಥಹಳ್ಳಿ-ಕಲ್ಮನೆ-ಹೆಗ್ಗೋಡು-ರಾಮಕೃಷ್ಣಾಪುರ-ಕಮ್ಮರಡಿ–ಶೃಂಗೇರಿ ಮಾರ್ಗದಲ್ಲಿಯೂ ಸಂಚರಿಸಲು ಅನುವು ಮಾಡಲಾಗಿದೆ.


Spread the love