ಆತಂಕ ಶುರು: ಕೊರೋನಾ ಸಂಖ್ಯೆ ಗಣನೀಯ ಹೆಚ್ಚಳ; ದೇಶದಲ್ಲಿ 9ನೇ ಸ್ಥಾನಕ್ಕೇರಿದ ಕರ್ನಾಟಕ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕರ್ನಾಟಕ ದೇಶದ ಸೋಂಕಿತ ರಾಜ್ಯಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದೆ.
ರಾಜ್ಯದಲ್ಲಿ ಒಟ್ಟು 6516 ಕೊರೋನಾ ಪ್ರಕರಣಗಳು ವರದಿಯಾಗಿದ್ದು, 79 ಮಂದಿ ಮೃತಪಟ್ಟಿದ್ದಾರೆ. ಒಟ್ಟು 3440 ಮಂದಿ ಗುಣಮುಖರಾಗಿದ್ದು, 2997 ಸಕ್ರಿಯ ಪ್ರಕರಣಗಳಿವೆ.
ದೇಶದ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರದಲ್ಲಿ ಶನಿವಾರ ಬೆಳಗ್ಗೆಯವರೆಗೆ ಒಟ್ಟು 1.01 ಲಕ್ಷ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 3717 ಮಂದಿ ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದ ಸಾರ್ವಜನಿಕ ಮಾಹಿತಿ ಕೇಂದ್ರ ಟ್ವಿಟರ್ ನಲ್ಲಿ ಈ ಪಟ್ಟಿ ಬಿಡುಗಡೆಗೊಳಿಸಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,08,993ಕ್ಕೇರಿಕೆಯಾಗಿದ್ದು, 8,884 ಮಂದಿ ಮೃತಪಟ್ಟಿದ್ದಾರೆ. 1,54,330 ಮಂದಿ ಗುಣಮುಖರಾಗಿದ್ದು, 1,45,779 ಸಕ್ರಿಯ ಪ್ರಕರಣಗಳಿವೆ ಎಂದು ವರದಿ ತಿಳಿಸಿದೆ.
ತಮಿಳುನಾಡು 40,998 ಪ್ರಕರಣಗಳು, 367 ಸಾವುಗಳಿಂದ ಎರಡನೇ ಅತಿ ಹೆಚ್ಚು ಸೋಂಕಿತ ರಾಜ್ಯವಾಗಿದ್ದರೆ, ದೆಹಲಿ 36,824 ಪ್ರಕರಣಗಳು ಮತ್ತು 1214 ಸಾವುಗಳಿಂದ ಮೂರನೇ ಸ್ಥಾನದಲ್ಲಿದೆ.
ಗುಜರಾತ್‌ 22,527 ಪ್ರಕರಣಗಳು ಮತ್ತು 1415 ಸಾವುಗಳಿಂದ ನಾಲ್ಕನೇ ಹಾಗೂ ಉತ್ತರಪ್ರದೇಶ 12616 ಪ್ರಕರಣಗಳು ಮತ್ತು 365 ಸಾವುಗಳಿಂದ ಐದನೇ ಸ್ಥಾನದಲ್ಲಿದೆ.
ನಂತರ, ರಾಜಸ್ತಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿವೆ. 9ನೇ ಸ್ಥಾನದಲ್ಲಿ ಕರ್ನಾಟಕ ಮತ್ತು 10ನೇ ಸ್ಥಾನದಲ್ಲಿ ಹರಿಯಾಣ ರಾಜ್ಯಗಳಿವೆ.
ಮೇಘಾಲಯ, ಡಿಯು ಮತ್ತು ಡಾಮನ್ ಕೇಂದ್ರಾಡಳಿತ ಪ್ರದೇಶಗಳು ಅತಿ ಕಡಿಮೆ ಸೋಂಕಿತರಿರುವ ರಾಜ್ಯಗಳಾಗಿವೆ ಎಂದು ಪಿಐಬಿ ತಿಳಿಸಿದೆ.