ಆತ್ಮಹತ್ಯೆಗೆ ಯತ್ನಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಯೋಗಾನಂದ್
ಮಂಡ್ಯ: ಆರೋಗ್ಯ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀರಂಗಪಟ್ಟಣದ ಡಿವೈಎಸ್ಪಿ ಯೋಗೇಂದ್ರ ನಾಥ್(52) ಅವರು ಭಾನುವಾರ ಬೆಳಿಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶೀರಂಗಪಟ್ಟಣ ಹೊರವಲಯದ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ವಾಸವಿದ್ದ ಅವರು ತಮ್ಮ ಮನೆಯಲ್ಲೇ ಹರಿತವಾದ ಆಯುಧದಿಂದ ಮುಂಗೈನ ನರ ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
1996 ರ ಬ್ಯಾಚಿನಲ್ಲಿ ಪಿಎಸ್ಐ ಆಗಿ ಪೊಲೀಸ್ ಇಲಾಖೆಯಲ್ಲಿ ವೃತ್ತಿಜೀವನ ಆರಂಭಿಸಿದ ಯೋಗೇಂದ್ರ ನಾಥ್ ಅವರು ಹಲವು ಜಿಲ್ಲೆಗಳಲ್ಲಿ ಪಿಎಸ್ಐ ಸರ್ಕಾರಿ ಕೆಲಸ ನಿರ್ವಹಿಸಿದ್ದರು. ಈ ನಡುವೆ ಬಡ್ತಿ ಯೊಂದಿಗೆ ಡಿವೈಎಸ್ಪಿ ಆಗಿದ್ದ ಯೋಗೇಂದ್ರ ಅವರು, ಕಳೆದ ಒಂದು ವರ್ಷದ ಹಿಂದಷ್ಟೇ ಶ್ರೀರಂಗಪಟ್ಟಣ ಡಿವೈಎಸ್ಪಿ ವರ್ಗಾವಣೆ ಬಂದಿದ್ದರು.
ಬಿಪಿ, ಶುಗರ್ ನ ಜೊತೆಗೆ ನೆನಪಿನ ಶಕ್ತಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಯೋಗೇಂದ್ರ ಅವರನ್ನು ಮೈಸೂರಿನ ನಾರಾಯಣ ಹೃದಯಾಲಯ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಯೋಗೇಂದ್ರ ನಾಥ್ ಅವರ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ, ಘಟನೆ ಸಂಬಂಧ ಮಾಹಿತಿ ಸಂಗ್ರಹಿಸಿದ್ದಾರೆ.