ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿ ಮೋದಿಯವರ ಜನಪರ ಯೋಜನೆ- ಶಾಸಕ ಕಾಮತ್

Spread the love

ಆಯುಷ್ಮಾನ್ ಭಾರತ್ ಯೋಜನೆಗೆ ಪ್ರಧಾನಿ ಮೋದಿಯವರ ಜನಪರ ಯೋಜನೆ- ಶಾಸಕ ಕಾಮತ್

ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ದಾರರು) ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಐದು ಲಕ್ಷ ರೂಪಾಯಿಯ ವರೆಗಿನ ಆರೋಗ್ಯ ಸುರಕ್ಷೆಯನ್ನು ನೀಡುವ ಕೇಂದ್ರ ಸರಕಾರದ ಯೋಜನೆ ಆಯುಷ್ಮಾನ್ ಯೋಜನೆಯನ್ನು ವಿದೇಶಗಳು ಕೂಡ ಕೊಂಡಾಡುತ್ತಿರುವುದು ನರೇಂದ್ರ ಮೋದಿಯವರ ಆಡಳಿತವನ್ನು ವಿಶ್ವವೇ ಮೆಚ್ಚಿಕೊಂಡಿರುವುದಕ್ಕೆ ಸಾಕ್ಷಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಹತ್ತು ಕೋಟಿ ಕುಟುಂಬಗಳ ಐವತ್ತು ಕೋಟಿ ನಾಗರಿಕರು ಪ್ರತಿ ವರ್ಷ ಆರೋಗ್ಯಕ್ಕೆ ಸಂಬಂಧಪಟ್ಟ ಇನ್ಯೂರೆನ್ಸ್ ಸ್ಕೀಮ್ ಒಳಗೆ ಬರಲಿದ್ದಾರೆ. ಇದು ಒಟ್ಟು ಭಾರತದ ಜನಸಂಖ್ಯೆಯ 40% ಆಗಿರುವುದಲ್ಲದೆ, ನಗದುರಹಿತ ವ್ಯವಸ್ಥೆಯ ಮೂಲಕ ರೋಗಿಗಳು ಸರಕಾರಿ ಮತ್ತು ಸರಕಾರ ಅಂಗೀಕರಿಸಿದ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ಫಲಾನುಭವಿಗಳನ್ನು 2011 ರ ಜನಗಣತಿಯ ಆಧಾರದ ಮೇಲೆ ನಾಗರಿಕರ ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ರಾಷ್ಟ್ರದಾದ್ಯಂತ ನಡೆದ ಜನಗಣತಿ ಪ್ರಕಾರ ಫಲಾನುಭವಿಗಳ ಆರ್ಥಿಕ ಮಟ್ಟ, ಸರಾಸರಿ ವಾರ್ಷಿಕ ಆದಾಯ, ಅಕ್ಷರತೆ, ಉದ್ಯೋಗ, ಶೌಚಾಲಯ, ಕುಡಿಯು ನೀರು ಮತ್ತು ವಿದ್ಯುತ್ ಸಂಪರ್ಕ ಹಾಗೂ ಸಕ್ರಮ ಆಧಾರ್ ಕಾರ್ಡ್ ಎಲ್ಲಾ ಪರಿಗಣಿಸಿ ಫಲಾನುಭವಿಗಳನ್ನು ಪಟ್ಟಿ ಮಾಡಿ ಅವರ ಮನೆಗಳಿಗೆ ಅಂಚೆ ಕಚೇರಿಯ ಮೂಲಕ ಆಯುಷ್ಮಾನ್ ಕಾರ್ಡ್ ತಲುಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಫಲಾನುಭವಿಗಳಿಗೆ ಈ ಕಾರ್ಡ್ ಈಗಾಗಲೇ ತಲುಪಿದೆ. ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಮನೆಮನೆಗೂ ತಲುಪಿಸುವಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ ಮತ್ತು ಇಲಾಖೆಯೊಂದಿಗೆ ಚರ್ಚಿಸಿ ಯೋಜನೆ ಸಾಕಾರಗೊಳ್ಳುವಲ್ಲಿ ಶ್ರಮಿಸಿದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದರು. ಈಗಾಗಲೇ ಕಾರ್ಡ್ ಲಭಿಸಿರುವವರು ಅಥವಾ ಮುಂದೆ ತಮ್ಮ ಮನೆಗೆ ಅಂಚೆಯ ಮೂಲಕ ಆಯುಷ್ಮಾನ್ ಕಾರ್ಡ್ ಬಂದ ತಕ್ಷಣ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಅಥವಾ ಜಿಲ್ಲಾ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಆಯುಷ್ಮಾನ್ ಯೋಜನೆಯ ಲಾಭಾಂಶಗಳನ್ನು ಪಡೆಯುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಶಾಸಕರು ಹೇಳಿದ್ದಾರೆ.

ಯಾವುದೇ ಸಾಮಾನ್ಯ ಜ್ವರದಿಂದ ಹಿಡಿದು ಕ್ಯಾನ್ಸರ್, ಮಾನಸಿಕ ರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆಯಿಂದ ಮೊದಲ್ಗೊಂಡು ಪ್ಲಾಸ್ಟಿಕ್ ಸರ್ಜರಿ, ನರರೋಗಕ್ಕೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಯಿಂದ ಪ್ರಾರಂಭವಾಗಿ ಹೃದಯರೋಗಕ್ಕೆ ಸಂಬಂಧಪಟ್ಟ ಚಿಕಿತ್ಸೆಗಳನ್ನು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಆದರೆ ಐದು ಲಕ್ಷದವರೆಗೆ ಎಪಿಎಲ್ ಆದರೆ 1.5 ಲಕ್ಷದ ತನಕ ನಿಶ್ಚಿಂತೆಯಿಂದ ಪಡೆದುಕೊಳ್ಳಬಹುದು. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಸರಕಾರಿ ಆಸ್ಪತ್ರೆಗಳು ಮತ್ತು 30 ಖಾಸಗಿ ಆಸ್ಪತ್ರೆಗಳಲ್ಲಿ ನಾಗರಿಕರು ಇದರ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆ ಅಪ್ಪಟ ಕೇಂದ್ರ ಸರಕಾರದ್ದು ಆಗಿದ್ದು, ಆದರೆ ಇದು ತಮ್ಮ ಯೋಜನೆಯಂತೆ ರಾಜ್ಯದಲ್ಲಿ ಸರಕಾರಿ ವಾಹನಗಳ ಮೇಲೆ, ಸರಕಾರಿ ಬಸ್ಸುಗಳ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಈ ಯೋಜನೆಯ ಹೆಸರಿನೊಂದಿಗೆ ತಮ್ಮ ಫೋಟೋ ಹಾಕಿಸಿ ಅದು ರಾಜ್ಯ ಸರಕಾರದ್ದು ಎಂದು ಜನರಲ್ಲಿ ಸುಳ್ಳು ಭ್ರಮೆ ಹುಟ್ಟಿಸಲು ರಾಜ್ಯದ ಸಮ್ಮಿಶ್ರ ಸರಕಾರ ಪ್ರಯತ್ನಿಸುತ್ತಿದೆ. ಇದು ನೈತಿಕತೆಯ ಅದ:ಪತನ, ನಾಚಿಕೆಗೇಡಿನ ವಿಷಯ  ಎಂದು ಶಾಸಕ ಕಾಮತ್ ತಿಳಿಸಿದರು.


Spread the love