ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಡಿಂಡಿಮ
ವಿದ್ಯಾಗಿರಿ: ಎಂದೆಂದಿಗೂ ಕನ್ನಡವಾಗಿರು ಎಂದರೆ ಭಾಷೆ ಮಾತ್ರ ಅಲ್ಲ. ಅದು ನಾಡಿಗಾಗಿ ನುಡಿಗಾಗಿ ನೆಲಕ್ಕಾಗಿ, ಪರಿಸರಕ್ಕಾಗಿ ತೋರಿಸ ತಕ್ಕಂತ ಎಲ್ಲಾ ರೀತಿಯ ಕಾಳಜಿಯು ಕನ್ನಡ ಎಂದು ಶ್ರೀ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯುತ್ತ ಕಾಲೇಜಿನ ಕುಲಸಚಿವರಾದ ಡಾ. ಬಿ ಪಿ ಸಂಪತ್ ಕುಮಾರ್ ಅಭಿಪ್ರಾಯ.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಸ್ಕøತಿ ಅಧ್ಯಯನ ಕೇಂದ್ರ, ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ವಿದ್ಯಮಾನದಲ್ಲಿ ಕನ್ನಡ ಮಾಧ್ಯಮಗಳು ಅವನತಿ ಹೊಂದುತಿವೆ. ಅದಕ್ಕೆ ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ನಮಗೆ ಕನ್ನಡದ ಬಗೆಗಿರುವ ಕೀಳರಿಮೆಯ ಕಾರಣ ಎಂದು ವಿಷಾಧ ವ್ಯಕ್ತಪಡಿಸಿದರು. ಅಲ್ಲದೇ ನಮ್ಮ ಅಸ್ತಿತ್ವ ಇರುವುದು ಭಾಷೆಯಲ್ಲಿ, ಒಂದು ಭಾಷೆಯ ಜತೆ ಸಂಸ್ಕøತಿ ಇದೆ, ಭಾಷೆ ಅಸ್ತಿತ್ವ ಕಳೆದುಕೊಂಡರೆ, ಸಂಸ್ಕøತಿ ಮತ್ತು ಚಿಂತನೆಯನ್ನು ತೊರೆದಂತೆ ಎಂದರು. ಜ್ಞಾನ, ಭಾವ ಮತ್ತು ಬುದ್ದಿ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಲು ಮತ್ತು ಸಾಹಿತ್ಯಕ್ಕೆ ಮರುಜೀವ ನೀಡಲು ಇಂತಹ ಕಾರ್ಯಕ್ರಮ ಅತ್ಯಗತ್ಯ ಎಂದು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ಸಾಂಸ್ಕøತಿಕ ನಾಡನ್ನು ಕಟ್ಟುವ ಗುರಿ ಇಟ್ಟುಕೊಂಡಿದೆ. ಶಿಸ್ತು ಮತ್ತು ಅಚ್ಚುಕಟ್ಟಾದ ಈ ಆವರಣದಲ್ಲಿ ನಿಮ್ಮನ್ನು ನೀವು ಪ್ರೋತ್ಸಾಹಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಈ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಎಲ್ಲರಿಗೂ ತಲುಪಿಸುವ ಅವಿರತಪ್ರಯತ್ನ ನಮ್ಮದಾಗಬೇಕು, ಕನ್ನಡದ ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಆದ್ದರಿಂದ ಕನ್ನಡಕ್ಕೆ ನಮ್ಮನ್ನು ನಾವು ಮೂಡಿಪಾಗಿರಿಸಬೇಕು ಎಂದರು. ಕಾಲೇಜಿನ ಕನ್ನಡ ಬಳಗದ ಕಾರ್ಯವೈಖರಿಯನ್ನು ಕೊಂಡಾಡಿದರು.
ಆಳ್ವಾಸ್ ಕನ್ನಡ ಸಂಸ್ಕøತಿ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಕೃಷ್ಣರಾಜ ಕರಬ ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ರಕ್ಷಚಂದ್ರರ ಅನಾಮಿಕಳಾಗಿ, ರುಚಿತಾಳ ಭಾವತರಂಗ, ಉಮಾಶ್ರೀಯ ಮೌನಿಯಾದಳು ಸತಿ ಮತ್ತು ನನ್ನ ಕವಿತೆ, ನಂದಿನಿ ಹಾಗೂ ಕೀರ್ತನಾಳ ಎರಡು ಮನದ ಮಾತು, ಸ್ನೇಹಳ ಚಿಲಮೆ ಹಾಗೂ ರಮ್ಯಳ ನಮ್ಮಯ ಮನದ ಅಂಗಳದಿ ಹಸ್ತಪ್ರತಿಗಳನ್ನು ಬಿಡುಗಡೆಗೊಳಿಸಲಾಯಿತು.
71ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯಲ್ಲಿ ನಡೆದ ಪೆರೆಡ್ನಲ್ಲಿ ಭಾಗವಹಿಸಿದ ಆಳ್ವಾಸ್ ಕಾಲೇಜಿನ ಮಾನವಿಕಾ ವಿಭಾಗದ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಅಂಗವಾಗಿ ಛದ್ಮ ವೇಷ, ನೃತ್ಯ ಸ್ಪರ್ಧೆ, ಸಮೂಹ ಗೀತೆ, ಏಕಪಾತ್ರಾಭಿನಯ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮತ್ತು ಹಿಂದಿ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ಉಪಸ್ಥಿತರಿದ್ದರು.
ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುರಿಯನ್, ಪ್ರೊ. ಹರೀಶ್ ಟಿ.ಜಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಯೋಗೀಶ ಕೈರೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರೂಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.