ಆಸ್ತಿ ತೆರಿಗೆ ಹೆಚ್ಚಳ ವಿರೋಧ ಬಿಜೆಪಿಯಿಂದ ವ್ಯಾಪಕ ಪ್ರತಿಭಟನೆ
ಮಂಗಳೂರು: ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ನಾಗರಿಕರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯ ಭಾರವನ್ನು ಹೆಚ್ಚಿಸಿರುವುದನ್ನು ವಿರೋಧಿಸಿ ಬುಧವಾರ ಬಿಜೆಪಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಯ ಎದುರು ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ್ ಕಾಮತ್ ರಾಜ್ಯ ಸರಕಾರದ ಸುತ್ತೋಲೆ ಪ್ರಕಾರ ಸ್ವಯಂಘೋಷಿತ ಆಸ್ತಿ ತೆರಿಗೆ ಹೆಚ್ಚಿಸದಿದ್ದರೆ ಅನುದಾನ ಕಡಿತವಾಗುತ್ತೆ ಎಂದು ಸಮಜಾಯಿಷಿಕೆ ಕೊಡುತ್ತಿರುವ ಪಾಲಿಕೆಯ ಆಡಳಿತರೂಢ ಕಾಂಗ್ರೆಸ್ ಹಾಗಾದರೆ ಇಷ್ಟು ದಿನ ಸುಮ್ಮನೆ ಮಲಗುವ ಬದಲು ಜಿಲ್ಲೆಯ ಸಚಿವರನ್ನು, ಶಾಸಕರ ನಿಯೋಗದೊಂದಿಗೆ ಹೋಗಿ ರಾಜ್ಯ ಸರಕಾರವನ್ನು ಮನವೊಲಿಸುವ ಕೆಲಸ ಮಾಡಬಹುದಿತ್ತು. ಅದು ಮಾಡದೇ ಈಗ ಕಾನೂನು ಎಂದು ಹೇಳಿ ಜನರ ದಾರಿ ತಪ್ಪಿಸುತ್ತಿದೆ ಎಂದು ಹೇಳಿದರು. ಚುನಾವಣೆಯ ಸಂದರ್ಭದಲ್ಲಿ ದಿನಕ್ಕೊಂದು ಸುದ್ದಿಗೋಷ್ಟಿ ಕರೆದು ತಾವು ಅಧಿಕಾರಕ್ಕೆ ಬಂದರೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ ಆಗುವುದಿಲ್ಲ ಎಂದು ಡಂಗುರ ಸಾರುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಸ್ವತ: ಜನಾರ್ಧನ ಪೂಜಾರಿಯವರೇ ಕ್ಷಮೆಯಾಚಿಸುವಂತೆ ವರ್ತಿಸಿರುವುದು ನಗರದ ಜನರಿಗೆ ಮಾಡಿರುವ ವಿಶ್ವಾಸದ್ರೋಹ, ಚುನಾವಣೆಯ ಸಂದರ್ಭದಲ್ಲಿ ಭರವಸೆ ಕೊಡುವಾಗ ಪಾಲಿಕೆಯ ಹಿರಿಯ ಸದಸ್ಯರು ಆಗಿರುವ ಮೇಯರ್ ಹರಿನಾಥ್ ಅವರಿಗೆ ರಾಜ್ಯ ಸರಕಾರದಿಂದ ಈ ರೀತಿ ತೆರಿಗೆ ಹೆಚ್ಚಳದ ಸುತ್ತೊಲೆ ಬರಬಹುದೆಂಬ ಸಾಮಾನ್ಯ ಜ್ಞಾನ ಇರಲಿಲ್ಲವೇ ಎಂದು ವೇದವ್ಯಾಸ ಕಾಮತ್ ಪ್ರಶ್ನಿಸಿದರು.
ಮನಪಾ ವಿಪಕ್ಷ ನಾಯಕಿ ರೂಪಾ ಡಿ ಬಂಗೇರ ಮಾತನಾಡಿ ಹಿಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಜಾರಿಗೊಳಿಸಲು ಸರ್ವಸಿದ್ಧತೆ ನಡೆಸಿಯಾಗಿತ್ತು. ಅದರ ಪ್ರಕಾರ ತೆರಿಗೆ ಹೆಚ್ಚಳ ಹೇಗೆ ಮಾಡಬಹುದೆಂಬ ಅಡಿಪಾಯ ಕಾಂಗ್ರೆಸ್ ಹಾಕಿ ಆಗಿತ್ತು. ಆದರೆ ಚುನಾವಣೆಯಲ್ಲಿ ಗೆದ್ದು ಬಿಜೆಪಿಯ ಗಣೇಶ್ ಹೊಸಬೆಟ್ಟು ಮೇಯರ್ ಆಗಿ ಅಧಿಕಾರ ಸ್ವೀಕರಿಸಿದಾಗ ಜನ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕಟ್ಟಲು ಶುರು ಮಾಡಿದ್ದರು. ಹಾಗಿರುವಾಗ ಬಿಜೆಪಿ ಈ ಯೋಜನೆಯನ್ನು ತಂದದ್ದು ಎಂದು ಸುಳ್ಳು ಹೇಳುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು. ನೀರಿನ ದರವನ್ನು ಕೂಡ ಇವರು ಹೆಚ್ಚಳ ಮಾಡಲು ಹೊರಟಿರುವುದು ಜನರ ಮೇಲೆ ಮಾಡುವ ಹಗಲು ದರೋಡೆ ಎಂದು ಅವರು ವ್ಯಾಖ್ಯಾನಿಸಿದರು.
ಪಾಲಿಕೆಯಲ್ಲಿ ಬಿಜೆಪಿಯ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಯಾವ ರೀತಿಯಲ್ಲಿ ಕುತಂತ್ರದ ರಾಜಕಾರಣ ಮಾಡುತ್ತಿದೆ ಎನ್ನುವುದಕ್ಕೆ ಪ್ರಪ್ರಥಮವಾಗಿ ಅಮೃತ ಯೋಜನೆಯಡಿ ಕುಡಿಯುವ ನೀರಿಗಾಗಿ ಕೇಂದ್ರ ಸರಕಾರ ಕೊಟ್ಟ 160 ಕೋಟಿ ರೂಪಾಯಿ ಅನುದಾನದಲ್ಲಿ 55 ಕೋಟಿ ರೂಪಾಯಿಯನ್ನು ರಾಜ್ಯ ಸರಕಾರ ಕೊಟ್ಟಿದ್ದು ಎಂದು ಸುಳ್ಳು ಹೇಳಿ ಆ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಿರುವ ಶಾಸಕರಾದ ಜೆ ಆರ್ ಲೋಬೊ ಹಾಗೂ ಮೊಯ್ದೀನ್ ಬಾವ ಆ ಹಣದ ಲೆಕ್ಕಪತ್ರ ನೀಡಲಿ ಎಂದು ಆಗ್ರಹಿಸಿದರು.
ಪಾಲಿಕೆಯ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ ಪ್ರಸ್ತುತ ಪಾಲಿಕೆ ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು ಏರಿಸಿದೆ. ನೀರಿನ ಕರ ಹೆಚ್ಚಳ ಮಾಡುತ್ತಿದೆ, ಇತ್ತ ಡ್ರೈನೇಜ್ ಸಮಸ್ಯೆಗೆ ಉತ್ತರ ಸಿಕ್ಕಿಲ್ಲ. ಈ ನಡುವೆ ಆಶ್ರಯ ಯೋಜನೆಯಲ್ಲಿ ಬಡವರ ಪ್ರತಿ ಮನೆಗೆ ಕೇಂದ್ರ ಸರಕಾರ ಒಂದೂವರೆ ಲಕ್ಷ ಅನುದಾನ ಕೊಡುತ್ತಿದ್ದರೂ ಅದನ್ನು ಮುಚ್ಚಿ ಹಾಕಿ ಇಂದಿರಾ ಗಾಂಧಿ ಹೆಸರಿನ ಯೋಜನೆ ಎಂದು ಸುಳ್ಳು ಹೇಳಿ ಕೇಂದ್ರ ಸರಕಾರದ ಕೊಡುಗೆಯನ್ನು ಕಡೆಗಣಿಸಿ ಶಾಸಕ ಜೆ ಆರ್ ಲೋಬೋ ಯೋಜನೆಯನ್ನು ಹೈಜಾಕ್ ಮಾಡಿ ತಮಗೆ ಮೈಲೇಜ್ ಸಿಗುವ ಹಾಗೆ ಮಾಡುತ್ತಿದ್ದಾರೆ. ಇನ್ನು ಪಾಲಿಕೆಯ ವ್ಯಾಪ್ತಿಯಲ್ಲಿ ತಲೆ ಎತ್ತಿರುವ ಅಸಂಖ್ಯಾತ ಅನಧಿಕೃತ ಹೋರ್ಡಿಂಗ್ಸ್ ನಿಂದ ಪಾಲಿಕೆಗೆ ಬರುವ ಕೋಟ್ಯಾಂತರ ರೂಪಾಯಿ ಆದಾಯ ಸೋರಿಕೆ ಆಗುತ್ತಿದೆ, ಅದರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಮಾತನಾಡಿ, ಒಂದು ಕಡೆ ಕೇಂದ್ರ ಸರಕಾರ ಕೊಡುತ್ತಿರುವ ಸ್ಮಾರ್ಟ ಸಿಟಿ ಯೋಜನೆ ಮತ್ತು ಇತರ ಯೋಜನೆಗಳ ಅನುದಾನವನ್ನು ತನ್ನದು ಎಂದು ಹೇಳುತ್ತಿರುವ ಕಾಂಗ್ರೆಸ್ ಮತ್ತೊಂದೆಡೆ ತನ್ನದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ತೆರಿಗೆಯ ಭಾರವನ್ನು ಹಾಕಿ ಕಾನೂನಿನ ಕಡೆ ಬೆರಳು ತೋರಿಸುತ್ತಿರುವುದು ಕಾಂಗ್ರೆಸ್ಸಿದ್ದು ಷಂಡತನ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೋನಪ್ಪ ಭಂಡಾರಿ, ಉಪಮೇಯರ್ ಸುಮಿತ್ರಾ ಕೆ, ರವಿಶಂಕರ್ ಮಿಜಾರ್, ಕ್ಯಾ|ಬ್ರಿಜೇಶ್ ಚೌಟ, ಜಿತೇಂದ್ರ ಕೊಟ್ಟಾರಿ, ನಿತಿನ್ ಕುಮಾರ್, ಮನಪಾ ಸದಸ್ಯರಾಗಿರುವ ಸುರೇಂದ್ರ, ವಿಜಯ ಕುಮಾರ್ ಶೆಟ್ಟಿ, ರಾಜೇಂದ್ರ, ಪೂರ್ಣಿಮಾ, ದಿವಾಕರ, ಜಯಂತಿ ಆಚಾರ್, ಮೀನಾ ಕರ್ಕೇರಾ, ಗುಣಶೇಖರ್ ಶೆಟ್ಟಿ, ಹೇಮಲತಾ ಸಾಲಿಯಾನ್, ಪಕ್ಷದ ಪ್ರಮುಖರಾಗಿರುವ ಶ್ರೀನಿವಾಸ್ ಶೇಟ್, ಅನಿಲ್ ರಾವ್, ಪೂಜಾ ಪೈ, ಜಗದೀಶ್ ಶೆಟ್ಟಿ, ಸಂದೀಪ್ ಶೆಟ್ಟಿ, ಸದಾನಂದ ನಾವರ, ಗ್ಲಾಡ್ವಿನ್ ಡಿಸಿಲ್ವ, ಉಮಾನಾಥ ಅಮೀನ್, ಪ್ರವೀಣ್ ಕೊಡಿಯಾಲ್ ಬೈಲ್, ದೀಪಕ್ ಪೈ, ಜೇಮ್ಸ್ ಡಿಸೋಜಾ, ರವೀಂದ್ರ ಕುಮಾರ್, ವಿನಯ ನೇತ್ರ ಉಪಸ್ಥಿತರಿದ್ದರು. ಸತೀಶ್ ಪ್ರಭು ಪಾಲಿಕೆ ಮತ್ತು ಮೇಯರ್ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಾಸ್ಕರ್ ಚಂದ್ರ ಶೆಟ್ಟಿ ನಿರೂಪಿಸಿದರು. ಅಶೋಕ್ ಕೃಷ್ಣಾಪುರ ಧನ್ಯವಾದ ಅರ್ಪಿಸಿದರು. ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.