ಆ್ಯಸಿಡ್ ದಾಳಿ : ಗೃಹಸಚಿವರ ರಾಜೀನಾಮೆಗೆ ದಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಗ್ರಹ
ಮಂಗಳೂರು: ಕರಾವಳಿಯಲ್ಲಿ ಒಂದು ಘೋರ ಕೃತ್ಯ ಜರುಗಿದ್ದು, ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ರಾಜ್ಯದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ಪರೀಕ್ಷೆ ನಡೆಯುತ್ತಿದ್ದು, ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಇಂತಹದೊಂದು ಪೈಶಾಚಿಕ ಕೃತ್ಯ ನಡೆದಿದೆ. ಕೇರಳದ ಮಣಪುರಂ ಮೂಲದ 23 ವರ್ಷದ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಆ್ಯಸಿಡ್ ದಾಳಿ ಮಾಡಿರುತ್ತಾನೆ. ಈ ವೇಳೆ ಪಕ್ಕದಲ್ಲಿ ಕುಳಿತ್ತಿದ್ದ ಇಬ್ಬರು ವಿದ್ಯಾರ್ಥಿನಿಯರೂ ಸಹ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಈ ಘಟನೆಯನ್ನು ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ನಂದನ್ ಮಲ್ಯ ತಿಳಿಸಿದ್ದಾರೆ.
ಕಾಂಗ್ರೇಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ. ಗ್ಯಾರಂಟಿ ಆಸೆ ಒಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲ ಆಗಿದೆ. ಅದರ ಜೊತೆಗೆ ರಾಜ್ಯದ ಕಾನೂನು ಸುವ್ಯವಸ್ಥೆಯೂ ಹಾಳಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನೂ ರಕ್ಷಿಸುವ, ಕುಕ್ಕರ್ ಬಾಂಬ್ ಇಟ್ಟವರನ್ನು ಬ್ರದರ್ಸ್ ಅನ್ನುವ, ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಕ್ಯಾಮರಾ ಇಟ್ಟವರನ್ನ ರಕ್ಷಿಸುವ ಸರಕಾರದಿಂದಲೇ ಇಂತಹ ಘಟನೆಗಳು ಹೆಚ್ಚಾಗುತ್ತಿದೆ.
23 ವರ್ಷದ ಯುವಕನ ಕೈಗೆ ಅಷ್ಟು ಸುಲಭವಾಗಿ ಆ್ಯಸಿಡ್ ಸಿಕ್ಕಿದ್ದು ಹೇಗೆ? ಕಾಲೇಜಿನ ವಿದ್ಯಾರ್ಥಿಯೇ ಅಲ್ಲದ ಅವನಿಗೆ ಕಾಲೇಜಿನ ಸಮವಸ್ತ್ರ ಕೊಟ್ಟಿದ್ದು ಯಾರು? ಹಾಡುಹಗಲೇ ಇಂತಹ ಘಟನೆ ನಡೆದರೆ ಶಾಲಾ ಕಾಲೇಜಿಗೆ ಮಕ್ಕಳನ್ನು ಪೋಷಕರು ಯಾವ ಧೈರ್ಯದಿಂದ ಕಳಿಸೋದಕ್ಕೆ ಸಾಧ್ಯ? ಗೃಹಲಕ್ಷ್ಮೀ ಯೋಜನೆ ಕೊಡ್ತೀವಿ ಅನ್ನುವ ಕಾಂಗ್ರೇಸ್ಗೆ ಈ ವಿದ್ಯಾರ್ಥಿನಿಯರ ರಕ್ಷಣೆ ಮುಖ್ಯವಾಗಿಲ್ಲವೇ? ದೈರ್ಯವಾಗಿ ಪ್ರಶ್ನಿಸುತ್ತಿದ್ದೇವೆ ಗೃಹಮಂತ್ರಿಗಳು ಉತ್ತರಿಸಬೇಕು. ಬಂದಿತ ಆರೋಪಿ ಯಾರು? ಅವನ ಹಿನ್ನೆಲೆ ಏನು? ಅನ್ನೋದನ್ನ ಕೂಲಂಕುಷವಾಗಿ ತನಿಖೆ ನಡೆಸಿ ತಕ್ಕ ಶಿಕ್ಷೆಯನ್ನು ನೀಡಬೇಕು ಜೊತೆಗೆ ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನೂ ಭರಿಸಿ, ಪರಿಹಾರವನ್ನೂ ನೀಡಬೇಕು. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಿದರೇ ಗೃಹಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.