ಇಂದು ದೇವಶಿಲ್ಪಿ ವಿಶ್ವಕರ್ಮ ಜಯಂತಿ
ಕರ್ನಾಟಕ ಸರಕಾರವು ವಿಶ್ವಕರ್ಮ ಜಯಂತಿಯನ್ನು ಸರಕಾರದ ವತಿಯಿಂದ ಆಚರಿಸಲು ನಿರ್ಧರಿಸಿ, ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ಹಾಗೂ 176 ತಾಲೂಕು ಕೇಂದ್ರಗಳಲ್ಲಿ ಸದ್ರಿ ಆಚರಣೆಗೆ ಸುತ್ತೋಲೆ ಹೊರಡಿಸಿದೆ. ಇದಕ್ಕಾಗಿ ಒಟ್ಟು ರೂ. 69 ಲಕ್ಷ ಬಿಡುಗಡೆಗೊಳಿಸಿದೆ. ಹಿಂದುಳಿದ ವಿಶ್ವಕರ್ಮ ಸಮುದಾಯವನ್ನು ಗುರುತಿಸಿ, ದೇವಶಿಲ್ಪಿ ವಿಶ್ವಕರ್ಮ ಜಯಂತಿಯನ್ನು ಆಚರಿಸುವ ಮೂಲಕ ಸಮುದಾಯದ ಜನರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಪ್ರಯತ್ನಕ್ಕೆ ಮುಂದಾದ ಸರಕಾರಕ್ಕೆ ಹಾಗೂ ಅದಕ್ಕಾಗಿ ಪ್ರಯತ್ನಿಸಿದ ಸಮಾಜದ ಮುಂದಾಳುಗಳಿಗೆ ರಾಜ್ಯದ 50 ಲಕ್ಷ ವಿಶ್ವಕರ್ಮ/ವಿಶ್ವಬ್ರಾಹ್ಮಣರ ಪರವಾಗಿ ಅಭಿನಂದನೆಗಳು.
ವಿದ್ವಾಂಸರಾದ ನಾ.ಭಾ. ಚಂದ್ರಶೇಖರ ಆಚಾರ್ಯರು ಬಹಳ ಹಿಂದೆ ‘ಯಾರು ವಿಶ್ವಕರ್ಮ’? ಪುಸ್ತಕ ಬರೆದಿದ್ದಾರೆ. ವಿಶ್ವಕರ್ಮನ ನೆಲೆ ಹಿನ್ನೆಲೆಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. ವಿಶ್ವಕರ್ಮನ ಬಗ್ಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಿಳಿದಿರಬೇಕು. ಆದರೆ ಅನೇಕರಿಗೆ ಭಗವಂತನ ಅಗಾಧತೆಯ ಸರಿಯಾದ ಪರಿಜ್ಞಾನ ಇಲ್ಲದಿರುವುದು ವಿಷಾದನೀಯ. ಈಗಲಾದರೂ ಎಲ್ಲರೂ ವಿಶ್ವಕರ್ಮನ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಪ್ರಯತ್ನಿಸುವುದು ಅವಶ್ಯಕ.
ಉತ್ತರ ಭಾರತದಲ್ಲಿ ಬಹಳ ಹಿಂದಿನಿಂದಲೂ ವಿಶ್ವಕರ್ಮ ಜಯಂತಿಯನ್ನು ಕನ್ಯಾ ಸಂಕ್ರಮಣದಂದು ಆಚರಿಸುತ್ತಾ ಬಂದಿದ್ದಾರೆ. ಅಲ್ಲಿ ವಿಶ್ವಕರ್ಮನು ಎಲ್ಲರ ದೇವರು; ನಮ್ಮಲ್ಲಿ ಗಣಪತಿ ಇದ್ದ ಹಾಗೆ. ಕನ್ಯಾ ಸಂಕ್ರಮಣದಂದೇ ದಕ್ಷಿಣಭಾರತದಲ್ಲಿ ವಿಶ್ವಕರ್ಮನ ಆರಾಧನೆಯು ವಿಶ್ವಕರ್ಮ ಸಮುದಾಯದ ಮಠ-ಮಂದಿರ-ಸಂಘ-ಸಂಸ್ಥೆಗಳಲ್ಲಿ ಯಜ್ಞ/ಹವನ/ಪೂಜೆಯ ಮೂಲಕ ‘ವಿಶ್ವಕರ್ಮ ಪೂಜಾ ಮಹೋತ್ಸವ’ ಎಂದು ಆಚರಣೆಗೆ ಬಂದಿರುವುದು ಉತ್ತರ ಭಾರತದ ಆಚರಣೆಗಳ ಪ್ರಭಾವದಿಂ ಉತ್ತರದ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆ ನಡೆಯಲ್ಪಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜರಗುವ ಪರಬ್ರಹ್ಮ ವಿಶ್ವಕರ್ಮನ ಆರಾಧನೆಯಲ್ಲಿ ವಿಶ್ವಬ್ರಾಹ್ಮಣ ಸಮುದಾಯ ತೊಡಗಿದೆ.
ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದಾದ್ಯಂತ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಮಾನ್ಯ ನಂಜುಂಡಿ ವಿಶ್ವಕರ್ಮ ನೇತೃತ್ವದಲ್ಲಿ ನಡೆಯಲ್ಪಟ್ಟು ಸರಕಾರಕ್ಕೆ ಹಲವಾರು ಬಾರಿ ಸಲ್ಲಿಸಿದ ಮನವಿಯ ಪರಿಣಾಮವಾಗಿ ಸರಕಾರವು ಈ ವರ್ಷದಿಂದ ವಿಶ್ವಕರ್ಮ ಜಯಂತಿ ಘೋಷಣೆ ಮಾಡಿರಲು ಒಂದು ಕಾರಣವಾಗಿರಬಹುದು. ಹಾಗೆಯೇ ರಾಜ್ಯದ ಜಾತಿವಾರು ಜನಸಂಖ್ಯೆಯಲ್ಲಿ ವಿಶ್ವಬ್ರಾಹ್ಮಣರು ಅತ್ಯಂತ ಗಣನೀಯ ಹೆಚ್ಚಳ ಕಂಡುಬಂದಿರುವುದು ಇನ್ನೊಂದು ಕಾರಣಎನ್ನುವುದು ಪ್ರಸಕ್ಕತ ಸತ್ಯ. ಒಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದಿಯಾಗಿ ಸರಕಾರದ ಸಂಪೂರ್ಣ ಜನನಾಯಕರಿಗೆ ಸಮುದಾಯ ಅಭಿನಂದನೆಗಳನ್ನು ಸಮರ್ಪಿಸುತ್ತಿದೆ.
ವಿಶ್ವಂ ಕೃತ್ಸ್ನಂ ಕರ್ಮ ಕ್ರಿಯಾ ವ್ಯಾಪಾರೋ ಯಸ್ಯ ಸಃ ವಿಶ್ವಕರ್ಮಾ ಎಂದು ಪಾಣಿನೀ ಸೂತ್ರದಲ್ಲಿ ವಿಶ್ವಕರ್ಮಾ ಎಂಬ ಪದದ ವ್ಯುತ್ಪತ್ತಿಯನ್ನು ಹೇಳಲಾಗಿದೆ. ಹಾಗೆಯೇ ವಿಶ್ವವಿಷಯಾಣಿ ಸೃಷ್ಟಿ ಸ್ಥಿತಿ ಸಂಹಾರ ರೂಪಾಣಿ ಯಸ್ಯಾಸೌ ವಿಶ್ವಕರ್ಮಾ ಎಂದು ಋಗ್ವೇದದಲ್ಲಿ ಬರುವಂತಹ ವಿಶ್ವಕರ್ಮಾ ಎನ್ನುವ ಶಬ್ದದ ಕುರಿತಾಗಿ ಸಾಯಣಾಚಾಂ ರು ಭಾಷ್ಯವನ್ನು ಬರೆದಿದ್ದಾರೆ. ಅಂದರೆ ಈ ವಿಶ್ವದ ಸೃಷ್ಟಿ, ಸ್ಥಿತಿ, ಲಯಾದಿ ಸಕಲ ಕರ್ಮಗಳೂ ಯಾರಿಂದ ಆಗುತ್ತಿವೆಯೋ ಅವನನ್ನೇ (ಆ ಪರಬ್ರಹ್ಮವನ್ನೇ) ವಿಶ್ವಕರ್ಮ ಎಂದು ವ್ಯಾಖ್ಯಾನಿಸಲಾಗಿದೆ. ವಿಶ್ವದಲ್ಲಿ ಕ್ಷಣ ಕ್ಷಣಕ್ಕೂ ನಾವು ಕಾಣುತ್ತಿರುವ ಅಥವಾ ಕಾಣಲು ಅಸಾಧ್ಯವಾಗಿರುವ ಎಲ್ಲಾ ಕರ್ಮ, ಕ್ರಿಯೆ, ವ್ಯಾಪಾರ, ವ್ಯವಹಾರಗಳಿಗೆ ಅಧಿಷ್ಠಾನವಾಗಿರುವ, ಮಾತು, ಮನಸ್ಸು, ಬುದ್ಧಿಗಳಿಗೆ ಅತೀತವಾಗಿರುವ ತತ್ತ್ವವನ್ನೇ ಋಷಿಗಳು “ವಿಶ್ವಕರ್ಮಾ” ಎಂದು ಸಂಬೋಧಿಸಿದ್ದಾರೆ. ಆ ನಿಟ್ಟಿನಲ್ಲಿ ‘ವಿಶ್ವಕರ್ಮ’ ಎನ್ನುವುದು ಅಂಕಿತನಾಮವಲ್ಲ. ಅನ್ವರ್ಥ ನಾಮ
ಸನಾತನ ಪರಂಪರೆಯಲ್ಲಿ ಮೂರು ಪ್ರಮುಖ ‘ವಿಶ್ವಕರ್ಮ’ರನ್ನು ಗುರುತಿಸಬಹುದು. ವೇದ ಸೂಕ್ತಗಳಲ್ಲಿ ಉಲ್ಲೇಖಿತನಾದ ‘ಪರಬ್ರಹ್ಮ ವಿಶ್ವಕರ್ಮ’, ವೇದದ ವಿಶ್ವಕರ್ಮ ಸೂಕ್ತದ ಮಂತ್ರದೃಷ್ಟಾರ ‘ಭೌವನ ವಿಶ್ವಕರ್ಮ ಋಷಿ’ ಹಾಗೂ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟ ‘ದೇವಶಿಲ್ಪಿ ವಿಶ್ವಕರ್ಮ’.
‘ಭೌವನ ವಿಶ್ವಕರ್ಮ ಋಷಿ’ ವಿಶ್ವಕರ್ಮ ತತ್ವದ ಪ್ರತಿಪಾದಕ ಹಾಗೂ ಜನಾಂಗದ ಮೂಲಗುರು. ಐತರೇಯ ಬ್ರಾಹ್ಮಣರ ಪ್ರಕಾರ ಭುವನನ ಪುತ್ರನಾದ ಭೌವನ ವಿಶ್ವಕರ್ಮನು ಪ್ರಾಚೀನ ಚಕ್ರವರ್ತಿಗಳಲ್ಲಿ ಒಬ್ಬನು. ಈತನು ರಾಜಸೂಯ ಯಾಗವನ್ನು ಮಾಡಿ, ‘ಐಂದ್ರಾಭಿಷೇಕ’ ಮಾಡಿಸಿಕೊಂಡ ವಿವರ ಲಭ್ಯ. ಭೌವನ ವಿಶ್ವಕರ್ಮನು ಕಂಡುಕೊಂಡ ಪರಬ್ರಹ್ಮ ವಿಶ್ವಕರ್ಮನ ಆತ್ಮಯಜ್ಞ ಅನುಪ್ರವೇಶ ತತ್ವಗಳು ವಿಶ್ವಕರ್ಮ ಸೂಕ್ತದಲ್ಲಿ ಲಭ್ಯ.
ದೇವಶಿಲ್ಪಿ ವಿಶ್ವಕರ್ಮ ಅಷ್ಟ ವಸುಗಳಲ್ಲಿ ಒಬ್ಬನಾದ ಪ್ರಭಾಸ ಮತ್ತು ಬೃಹಸ್ಪತಿಯ ಸಹೋದರಿ, ಯೋಗಾಸಕ್ತ ದಂಪತಿಗಳ ಸುಪುತ್ರ. ಈತನು 17 ಶಿಲ್ಪ ಶಾಸ್ತ್ರಗಳ ಕರ್ತೃ ಹಾಗೂ ನಾಗರ ವಾಸ್ತುಶೈಲಿಯ ಪ್ರವರ್ತಕ. ರಾವಣನಿಗೆ ಲಂಕೆಯನ್ನು, ಕೃಷ್ಣನಿಗೆ ದ್ವಾರಕೆಯನ್ನು ನಿರ್ಮಿಸಿಕೊಟ್ಟ, ರುಕ್ಮಿಣಿಗೆ ಬಾಲಕೃಷ್ಣ (ಉಡುಪಿ ಕೃಷ್ಣ) ಮೂರ್ತಿ ಕಡೆದುಕೊಟ್ಟ ಶಿಲ್ಪಿಗಳು ದೇವಶಿಲ್ಪಿ ವಿಶ್ವಕರ್ಮನ ಪರಂಪರೆಯವರು.
.
“ಪರಬ್ರಹ್ಮ ವಿಶ್ವಕರ್ಮನ ಮಹೋತ್ಸವವನ್ನು ಮಾರ್ಗಶಿರ ತ್ರಯೋದಶಿಯಂದು ನಡೆಸಬೇಕು. ಭೌವನ ವಿಶ್ವಕರ್ಮನ ಜಯಂತಿಯನ್ನು ಚೈತ್ರ ಶುದ್ಧ ಪಂಚಮಿಯಂದು ಹಾಗೂ ದೇವಶಿಲ್ಪಿ ವಿಶ್ವಕರ್ಮ ಜಯಂತಿಯನ್ನು ಕನ್ಯಾಸಂಕ್ರಮಣದಂದು ನಡೆಸಬೇಕೆನ್ನುವುದಕ್ಕೆ ಆಧಾರಗಳಿವೆ” ಎಂದು ಬೆಂಗಳೂರಿನ ಡಾ. ನಿರಂಜನ ಆಚಾರ್ಯರು ಅಭಿಪ್ರಾಯಪಡುತ್ತಾರೆ. ಸಣ್ಣ ಮಕ್ಕಳು ಹಾಗೂ ಸಾಮಾನ್ಯರಿಗಾಗಿ ‘ಪರಬ್ರಹ್ಮ ವಿಶ್ವಕರ್ಮ’, ‘ಭೌವನ ವಿಶ್ವಕರ್ಮ’ ಹಾಗೂ ‘ದೇವಶಿಲ್ಪಿ ವಿಶ್ವಕರ್ಮ’ ಈ ಕುರಿತಾಗಿ ಸರಳ ಪುಸ್ತಕಗಳನ್ನು ಪ್ರಕಟಿಸುವುದು ಸಮಂಜಸ.
ಈ ಬಾರಿ 16.09.2016 ರಂದು (ಕನ್ಯಾ ಸಂಕ್ರಮಣ) ಸಮಾಜದ ಮಠ-ಮಂದಿರ ಸಂಘ ಸಂಸ್ಥೆಗಳಲ್ಲಿ ಶ್ರದ್ಧಾ ಭಕ್ತಿಯಿಂದ ಪರಬ್ರಹ್ಮ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಆಚರಿಸಿ, 17.09.2016 ರಂದು ಸರಕಾರದ ವತಿಯಿಂದ ಹಮ್ಮಿಕೊಂಡಿರುವ ದೇವಶಿಲ್ಪಿ ವಿಶ್ವಕರ್ಮ ಜಯಂತಿ ಆಚರಣೆಗೆ ಸಮಸ್ತ ವಿಶ್ವಬ್ರಾಹ್ಮಣ ಸಮುದಾಯ ಕೈ ಜೋಡಿಸಲು ಬದ್ಧರಾಗಬೇಕು.
ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಆಚರಣೆಯ ಸಂದರ್ಭ ವಿಶ್ವಕರ್ಮ ತತ್ವ ಸಂದೇಶಗಳ ಜಾಥಾ ನಡೆಸುವುದು ಸೂಕ್ತ. “ವಿಶ್ವಕರ್ಮನ ಆರಾಧನೆ ಸಾರ್ವಜನಿಕವಾಗಿ ನಡೆಬೇಕು; ವಿಶ್ವಕರ್ಮ ಜನಾಂಗಕ್ಕೆ ಮಾತ್ರ ಸೀಮಿತವಾಗಬಾರದು. ಸಾರ್ವಜನಿಕರಲ್ಲಿ ವಿಶ್ವಕರ್ಮ ತತ್ವದ ಅರಿವಾದಾಗ ದೇಶದ ಅಭ್ಯುದಯ” ವಿದ್ವಾಂಸರಾದ ಹೆಚ್.ಕೆ. ರಾಮಚಂದ್ರರಾಯರ ಅಭಿಪ್ರಾಯ ಚಿಂತನಯೋಗ್ಯ.
ಎಲ್ಲರಿಗೂ ಪರಬ್ರಹ್ಮ ವಿಶ್ವಕರ್ಮನ ಅಂಶವಾದ ದೇವಶಿಲ್ಪಿ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
I need that book yaaru vishwakarma where I can get that book plzz help me