ಇತಿಹಾಸದಲ್ಲಿಯೇ ಪ್ರಥಮ! ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯರ ದಿನಾಚರಣೆಗೆ ಚಾಲನೆ

Spread the love

ಇತಿಹಾಸದಲ್ಲಿಯೇ ಪ್ರಥಮ! ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಮಂಗಳಮುಖಿಯರ ದಿನಾಚರಣೆಗೆ ಚಾಲನೆ

ಮಂಗಳೂರು: ಮಂಗಳಮುಖಿಯರು ಕೂಡ ನಮ್ಮಂತೆ ಮಾನವರು ಅವರಿಗೂ ಕೂಡ ನಮ್ಮಂತೆಯೇ ಈ ಸಮಾಜದಲ್ಲಿ ಬದುಕುವ ಹಕ್ಕು ಹೊಂದಿದ್ದಾರೆ. ನಾವು ಬದುಕಿದಂತೆ ಅವರಿಗೂ ಕೂಡ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಕವಿತಾ ಸನೀಲ್ ಹೇಳಿದರು.

ಅವರು ಬುಧವಾರ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ಸಮಾಜ ಕಾರ್ಯವಿಭಾಗದ ಸಹಯೋಗ ವೇದಿಕೆ ಹಾಗೂ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ವತಿಯಿಂದ ಕಾಲೇಜಿನ ಮರಿಯಾ ಪೈವಾ ಕೊಸೆರೊ ಸಭಾಂಗಣಲದಲ್ಲಿ ಆಯೋಜಿಸಿದ ಮಂಗಳಮುಖಿಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯು ಕೂಡ ಮಾನವನ ಸೃಷ್ಟಿಯಲ್ಲ ಬದಲಾಗಿ ಭಗವಂತನ ಸೃಷ್ಟಿ ಅದರಂತೆ ಮಂಗಳಮುಖಿಯರೂ ಕೂಡ ಭಗವಂತನ ಸೃಷ್ಟಿ ಇಂದೂ ಸಮಾಜ ಅವರನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಬೇಕಾಗಿದೆ. ಅವರೂ ಕೂಡ ನಮ್ಮ ಹಾಗೆಯೇ ಮಾನವರು ಎಂಬುದನ್ನು ಅರಿತು ಸಮಾಜ ಅವರೊಂದಿಗೆ ಬೆರೆಯುವ ಕೆಲಸ ಮಾಡಬೇಕು. ಅವರ ಅಭಿವೃದ್ಧಿಗಾಗಿ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ನಡೆಸುತ್ತಿರುವ ಕೆಲಸ ನಿಜಕ್ಕೂ ಅಭಿನಂದನಾರ್ಹವಾಗಿದೆ. ಮಂಗಳಮುಖಿಯರೂ ಕೂಡ ಸಮಾಜದಲ್ಲಿ ಗೌರವಯುತವಾಗಿ ಬದಕುವಂತೆ ಮಾಡುವ ನಿಟ್ಟಿನಲ್ಲಿ ಅವರಿಗೂ ಕೂಡ ಸಣ್ಣಪುಟ್ಟ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಮಾಜ ಟ್ರಸ್ಟಿನ ಜೊತೆ ಕೈಜೋಡಿಸಬೇಕಾಗಿದೆ. ಈಗಾಗಲೇ ಕೆಲವು ಮಂದಿ ಮಂಗಳಮುಖಿಯರಿಗೆ ಉದ್ಯೋಗ ದೊರಕಿಸಿಕೊಡಲು ಮುಂದೆ ಬಂದಿದ್ದು, ತಾನೂ ಕೂಡ ಈ ನಗರದ ಮೇಯರ್ ಆಗಿ ಅವರಿಗೆ ಸರಕಾರದ ಹಂತದ ದೊರೆಯುವ ಎಲ್ಲಾ ಸಹಕಾರವನ್ನು ನೀಡಲು ಬದ್ದವಾಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಮಂಗಳಮುಖಿ ಸಂಜನಾ ಅವರು ನಾವು ಕೂಡ ನಿಮ್ಮೆಲ್ಲರಂತೆಯೇ ಮನುಷ್ಯರು. ನಮಗೂ ಇತರರಂತೆ ಸಮಾಜದಲ್ಲಿ ಗೌರವಯುತವಾಗಿ ಬದಕುವ ಹಂಬಲವಿದೆ. ನಮಗೆ ಹೊರಗಿನ ಸಮಾಜದ ಅಗತ್ಯವಿಲ್ಲ. ಒಳಗಿನ ಸಮಾಜವಾಗಿರುವ ವಿದ್ಯಾರ್ಥಿಗಳು ನಮ್ಮ ಬಗ್ಗೆ ಅರಿತುಕೊಂಡು ಅದನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಿದಾಗ ನಮ್ಮ ಬಗ್ಗೆ ಸಮಾಜದಲ್ಲಿರುವ ತಪ್ಪು ತಿಳುವಳಿಕೆಗಳು ದೂರವಾಗುತ್ತವೆ ಎಂದರು.

ಟ್ರಸ್ಟಿನ ಕೋಶಾಧಿಕಾರಿ ಶ್ರೀನಿಧಿ ಅವರು ನಾವು ಟ್ರಸ್ಟಿನ ಸದಸ್ಯರಾಗಿ ಸೇರಿದ ಮೇಲೆ ಸಮಾಜದಲ್ಲಿ ನಮ್ಮನ್ನೂ ಸಹ ಗುರುತಿಸುವವರು ಇದ್ದಾರೆ ಎನ್ನುವ ಭಾವನೆ ಬಂದಿದೆ. ಟ್ರಸ್ಟಿನ ಸದಸ್ಯರಾಗದಂತೆ ಹಲವು ಬಾರಿ ನಮ್ಮ ತಡೆಯಲಾಗುತ್ತಿದೆ ಆದರೆ ನಾವು ಯಾವುದಕ್ಕೂ ಜಗ್ಗದೆ ಟ್ರಸ್ಟಿನ ಸಕ್ರಿಯವಾಗಿದ್ದೇವೆ. ನಮಗೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿಗೆ ಸೇರಿದ ಬಳಿಕ ಆಧಾರ್ ಕಾರ್ಡ್ ಸೇರಿದಂತೆ ಹಲವು ಸೌಲಭ್ಯಗಳು ಪಡೆಯಲು ಸಹಕಾರಿಯಾಗಿದೆ. ಅಲ್ಲದೆ ನಾಯಕರೆನಿಸಿಕೊಂಡವರ ದಬ್ಬಾಳಿಕೆಯಿಂದ ಮುಕ್ತವಾಗಿ ಹೊರಗೆ ಬಂದು ಬದುಕವ ಚಲ ನಮ್ಮಲ್ಲಿ ಬಂದಿದೆ ಇದಕ್ಕೆ ಕಾರಣ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರ ಅವಿರತ ಶ್ರಮವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟಿನ ಸಂಸ್ಥಾಪಕಿ ವಾಯ್ಲೆಟ್ ಪಿರೇರಾ ಅವರು ಟ್ರಸ್ಟ್ ಆರಂಭಿಸಿದ ಬಗೆ, ಬಳಿಕ ಎದುರಿಸಿದ ಸವಾಲುಗಳು ಹಾಗೂ ಮಂಗಳಮುಖಿ ಸದಸ್ಯರಿಗೆ ಟ್ರಸ್ಟಿನ ವತಿಯಿಂದ ದೊರಕಿಸಿದ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ 2016 ಅಗೋಸ್ತ್ 30ರಂದು ಮಂಗಳಮುಖಿಯರ ಅಭಿವೃದ್ಧಿಗಾಗಿ ಆರಂಭಗೊಂಡಿದ್ದು, ದೇಶದಲ್ಲಿ ನಾವು ತಂದೆಯಂದಿರ ದಿನ, ತಾಯಂದಿರ ದಿನ, ಮಕ್ಕಳ ದಿನ, ಪ್ರೇಮಿಗಳ ದಿನವನ್ನು ಆಚರಿಸುತ್ತೇವೆ ಆದರೆ ಎಂದೂ ಕೂಡ ನಾವು ಮಂಗಳಮುಖಿಯರನ್ನು ದಿನದ ಆಚರಣೆಯ ಕುರಿತು ಚಿಂತಿಸಿಲ್ಲ. ಅವರೂ ಕೂಡ ಮಾನವರು, ಅವರನ್ನೂ ಕೂಡ ಸಮಾಜದಲ್ಲಿ ಗುರುತಿಸಬೇಕು, ಗೌರವಿಸುವುದರೊಂದಿಗೆ ಅವರ ಪ್ರತಿಭೆಗಳಿಗೆ ಪ್ರೋತ್ಸಾಹನೀಡಬೇಕು. ಹೆಚ್ಚಿನ ಮಂಗಳಮುಖಿಯರು ಸಮಾಜದ ಇತರ ಜನರೊಂದಿಗೆ ಬೆರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ ಅದಕ್ಕೆ ಕಾರಣ ಮನುಷ್ಯರ ಮನಸ್ಥಿತಿ. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪರಿವರ್ತನ ಚಾರೀಟೇಬಲ್ ಟ್ರಸ್ಟ್ ಮತ್ತು ರೋಶನಿ ನಿಲಯದ ಸಮಾಜ ಕಾರ್ಯ ವಿಭಾಗ ಜೊತೆಯಲ್ಲಿ ಸೇರಿಕೊಂಡು ಪ್ರಥಮ ಬಾರಿಗೆ ಮಂಗಳಮುಖಿಯರ ದಿನಾಚರಣೆಯನ್ನು ಆಚರಿಸಲು ನಿರ್ಧರಿದ್ದು, ಇದನ್ನು ಪ್ರತಿವರ್ಷವೂ ಆಚರಿಸುವುದರೊಂದಿಗೆ ಮಂಗಳಮುಖಿಯರನ್ನು ಗುರುತಿಸಿ, ಅವರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಉದ್ದೇಶವನ್ನು ಟ್ರಸ್ಟು ಇಟ್ಟುಕೊಂಡಿದೆ.

 ಮಂಗಳಮುಖಿಯರ ಜೊತೆ ಕೆಲಸ ಮಾಡುವುದೆಂದರೆ ಅಷ್ಟೇನೂ ಸುಲಭದ ಕೆಲಸವಲ್ಲ. ಮಂಗಳಮುಖಿಯರನ್ನು ಒಗ್ಗೂಡಿಸುವುದು ಮತ್ತು ಅವರುಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟೇನು ಸುಲಭದ ಕೆಲಸವಲ್ಲ. ಅಲ್ಲದೆ ಅವರುಗಳ ಹಿರಿಯರು (ಗುರು) ಎನಿಸಿಕೊಂಡು ಯಾರು ನಗರದಲ್ಲಿ ಮೊದಲು ಬಂದು ನೆಲಿಸಿದ್ದಾರೋ ಅವರುಗಳು ಹಣಕ್ಕಾಗಿ ಕಿರಿಯ ಮಂಗಳಮುಖಿಯರಿಗೆ ತೊಂದರೆ ನೀಡುತ್ತಿದ್ದಾರೆ ಅಲ್ಲದೆ ಬಲವಂತವಾಗಿ ಭಿಕ್ಷೆ ಬೇಡಲು ಮತ್ತು ಲೈಂಗಿಕ ಕೆಲಸಗಳಿಗೆ ತಳ್ಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳ 6000 ಹಣವನ್ನು ಕೂಡ ನೀಡುವಂತೆ ಬೆದರಿಕೆ ಒಡ್ಡತ್ತಾರೆ, ಒಂದು ವೇಳೆ ಅಂತಹ ಕೆಲಸಗಳಿಗೆ ಮತ್ತು ಹಣ ನೀಡಲು ನಿರಾಕರಿಸಿದರೆ ಗೂಂಡಾಗಳಿಂದ ಹೊಡೆಯುವ ಕೆಲಸ ಕೂಡ ನಡೆಯುತ್ತಿದೆ, ಕಳೆದ ವಾರವಷ್ಟೇ ಇಂತಹ ಘಟನೆ ನಡೆದಿದ್ದು, ಟ್ರಸ್ಟಿನ ನೋಂದಾಯಿತ ಇಬ್ಬರ ಸದಸ್ಯರಿಗೆ ಹಣ ನೀಡದ್ದಕ್ಕಾಗಿ ಹೆದರಿಸಿ ಹಲ್ಲೆ ನಡೆಸಿದ್ದಾರೆ ಇದರಿಂದ ಹೆದರಿದ ಅವರು ಟ್ರಸ್ಟಿನೊಂದಿಗೆ ಗುರುತಿಸಿಕೊಳ್ಳಲು ಸಹ ಹೆದರುತ್ತಿದ್ದಾರೆ, ಇದುವರೆಗೂ ಕೂಡ ಮಂಗಳಮುಖಿಯರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಅವರ ಸಹಾಯಕ್ಕೆ ಬಂದಿಲ್ಲ.

ಇಷ್ಟಕ್ಕೆ ನಿಲ್ಲದೆ ಒಂದು ಅಂತರ್ಜಾಲ ಮಾಧ್ಯಮ ಪರಿವರ್ತನ ಚಾರೀಟೇಬಲ್ ಟ್ರಸ್ಟ್ ಆರಂಭಿಸಿರುವುದು ಹಣ ಮಾಡುವ ಉದ್ದೇಶದಿಂದ ಎಂಬ ಸುಳ್ಳು ಆರೋಪ ಮಾಡಿ ಸುದ್ದಿಯನ್ನೂ ಕೂಡ ಪ್ರಕಟಿಸಿತ್ತು. ಸತ್ಯ ಸಂಗತಿ ಏನೆಂದರೆ ಇದುವರೆಗೆ ಟ್ರಸ್ಟಿಗೆ ಒಂದು ನಯಾ ಪೈಸೆ ಕೂಡ ಸರಕಾರ ಅಥವಾ ಸಾರ್ವಜನಿಕರಿಂದ ಬಂದಿಲ್ಲ ಅಥವಾ ಟ್ರಸ್ಟ್ ಕೇಳಲು ಕೂಡ ಹೋಗಿಲ್ಲ. ಇದುವರೆಗೆ ಯಾವುದೇ ಕಾರ್ಯಕ್ರಮ ಮಾಡಿದರೂ ಕೂಡ ಅದನ್ನು ನಾನು ವೈಯುಕ್ತಿಕವಾಗಿ ಭರಿಸಿದ್ದೇನೆಯೇ ಹೊರತು ಯಾರ ಮುಂದೆಯೂ ಕೈಚಾಚಿಲ್ಲ. ಒಳ್ಳೆಯ ಕೆಲಸ ಮಾಡುವಾಗ ಹಿಂದಿನಿಂದ ನಿಂತು ಹೆಸರು ಕೆಡಿಸುವ ಕೆಲಸ ಮಾಡುವವರು ಹಲವಾರು ಮಂದಿ ಇರುತ್ತಾರೆ. ಆದರೆ ಟೀಕೆಗಳಿಗೆ ಅಥವಾ ಸುಳ್ಳು ಆರೋಪಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ನಾನು ನನ್ನ ಮಂಗಳಮುಖಿಯರಿಗೆ ಬೆಂಬಲಿಸುವ ಕೆಲಸವನ್ನು ಸದಾ ಮುಂದುವರಿಸಿಕೊಂಡು ಹೋಗುತ್ತೇವೆ. ಮಂಗಳಮುಖಿಯರಿಗೆ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಸಮಾಜ ಹಾಗೂ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದರು.ಅಲ್ಲದೆ ಮಂಗಳಮುಖಿಯರ ಅಭಿವೃದ್ಧಿಗೆ ಸೇವೆ ನೀಡಲು ಆಸಕ್ತಿ ಇದ್ದವರು ಟ್ರಸ್ಟಿನ ಸದಸ್ಯರಾಗುವಂತೆ ವಿನಂತಿಸಿದರು.

ಕಾರ್ಯಕ್ರಮದಲ್ಲಿ ಮಂಗಳಮುಖಿಯಾಗಿ ಶೈಕ್ಷಣಿಕ ಸಾಧನೆ ಮಾಡುತ್ತಿರುವ ಉಡುಪಿ ಕಾಜೋಲ್ ಅವರಿಗೆ ಸನ್ಮಾನಿಸಲಾಯಿತು. ಅಲ್ಲದೆ ಮಂಗಳಮುಖಿಯರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಕಾಜೋಲ್ ವಾಯ್ಲೆಟ್ ಪಿರೇರಾ ತಮಗೆ ತಾಯಿ ಸಮಾನರಾಗಿದ್ದು, ನಮ್ಮಂತಹ ಮಂಗಳಮುಖಿಯರ ಜೀವನಕ್ಕೆ ಹೊಸ ದಾರಿಯನ್ನು ತೋರಿಸಿದ್ದಾರೆ, ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಆರಂಭವಾಗಿರುವುದರಿಂದ ಮಂಗಳಮುಖಿಯರ ಜೀವನಕ್ಕೆ ತುಂಬಾ ಉಪಯೋಗವಾಗಿದ್ದು, ಇದರಿಂದ ನಮ್ಮ ಜೀವನ ಬದಲಾವಣೆಯಾಗಲು ಸಾಧ್ಯವಾಗಿದೆ. ನನ್ನ ಒಂದೇ ಒಂದು ಆಸೆ ಎಂದರೆ ಒಬ್ಬ ಐಎಎಸ್ ಅಧಿಕಾರಿಯಾಗಬೇಕು ಎನ್ನುವುದು ಅಲ್ಲದೆ ಟ್ರಸ್ಟಿನ ಬೆಂಬಲದೊಂದಿಗೆ ಇದನ್ನು ಸಾಧಿಸಲು ಪ್ರಯತ್ನಿಸುವೆ. ಮಂಗಳಮುಖಿಯರ ದಿನಾಚರಣೆ ಒಂದು ಉತ್ತಮ ಕಾರ್ಯಕ್ರಮ ಇದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಡೆನ್ನಿಸ್ ಮೇರಿ, ರಿಜಿಸ್ಟ್ರಾರ ಡಾ.ಲಕ್ಷ್ಮೀನಾರಾಯಣ ಭಟ್, ಸಹಯೋಗದ ಸಂಯೋಜಕಿ ಅನುಸೂಯ ಶೆಣೈ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪಸ್ಥಿತರಿದ್ದ ಅತಿಥಿಗಳು ಬಟ್ಟೆಯಿಂದ ಸಂಪೂರ್ಣವಾಗಿ ಸುತ್ತಲ್ಪಟ್ಟು ಬಂಧನದಲ್ಲಿದ್ದ ಯುವತಿಯೊಬ್ಬರನ್ನು ಬಂಧಮುಕ್ತಗೊಳಿಸುವ ಮೂಲಕ ವಿಶೇಷ ರೀತಿಯಲ್ಲಿ ಚಾಲನೆ ನೀಡಿದ ಬಳಿಕ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ಸಮಾಜ ಕಾರ್ಯದ ವಿದ್ಯಾರ್ಥಿಗಳು ಮಂಗಳಮುಖಿಯರೊಂದಿಗೆ ಮುಕ್ತವಾಗಿ ಬೆರೆತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Spread the love