ಇದು ಪರಪ್ಪನ ಅಗ್ರಹಾರವಲ್ಲ ಬದಲು ಮಂಗಳೂರು ಕಾರಾಗೃಹದಲ್ಲಿ ಕೂಡ ಕೈದಿಗಳಿಗಿದೆ ಬಾಡೂಟ ವ್ಯವಸ್ಥೆ!
ಮಂಗಳೂರು: ರಾಜ್ಯದ ಪ್ರಮುಖ ಕಾರಾಗೃಹವಾದ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾಥಿತ್ಯದ ಕುರಿತು ನಿಷ್ಠಾವಂತ ಅಧಿಕಾರಿ ರೂಪಾ ಡಿ ಸರಕಾರಕ್ಕೆ ವರದಿ ಸಲ್ಲಿಸಿದ ಪರಿಣಾಮ ವರ್ಗಾವಣೆಗೊಂಡ ಬೆನ್ನಲ್ಲೇ ದಕ ಜಿಲ್ಲೆಯ ಕಾರಾಗೃಹದಲ್ಲಿ ಕೈದಿಗಳು ಬಾಡೂಟ ಮಾಡುತ್ತಿರುವ ಮೊಬೈಲ್ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ರಾಜ್ಯದಲ್ಲಿ ಜೈಲುಗಳ ಅವ್ಯವಸ್ಥೆಯನ್ನು ಮತ್ತೊಮ್ಮೆ ತೆರೆದುಕೊಂಡಿದೆ.
ಮಂಗಳೂರು ಜೈಲಿಗೆ ಆಗಾಗ್ಗೆ ಗಾಂಜಾ, ಮೊಬೈಲ್, ಸಿಮ್ ಕಾರ್ಡುಗಳು ಪತ್ತೆಯಾದ ಸುದ್ದಿಗಳೊಂದಿಗೆ ಕೈದಿಗಳಿಗೆ ಬಾಡೂಟ, ಗುಂಡು, ತುಂಡಿನ ವ್ಯವಸ್ಥೆಯೂ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಆದರೆ ಜೈಲಿನ ಅಧಿಕಾರಿಗಳು ಇದನ್ನು ತಳ್ಳಿ ಹಾಕುತ್ತಿದ್ದರು ಆದರೆ ಅದನ್ನು ಸತ್ಯ ಎಂಬವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊಗಳು ಒಂದು ರೀತಿಯ ಸಾಕ್ಷಿ ಒದಗಿಸಿದರೊಂದಿಗೆ ಆತಂಕಕ್ಕೂ ಕಾರಣವಾಗಿದೆ.
ಪ್ಲಾಸ್ಟಿಕ್ ಚೀಲದ ಮೂಲಕ ಮಾಂಸಾಹಾರ ಜೈಲಿನೊಳಗೆ ರವಾನೆಯಾಗಿರುವುದು ಈ ಫೋಟೊ ಮೂಲಕ ಸ್ಪಷ್ಟವಾಗುತ್ತಿದ್ದು, ಆರು ಮಂದಿ ಆರೋಪಿಗಳು ಊಟದ ಜೊತೆಗೆ ಫೋಟೊಗೆ ಪೋಸ್ ಕೊಡುತ್ತಿರುವುದನ್ನು ಸ್ಷಷ್ಟವಾಗಿ ಫೋಟೊದಲ್ಲಿ ಕಾಣಿಸುತ್ತದೆ.
ನಗರದ ಹಳೆ ಜೈಲಿನ ಕೊಠಡಿ ಒಳಗಡೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡುತ್ತಿರುವ ದೃಶ್ಯ ಇದಾಗಿದ್ದು, ಇದಕ್ಕೆ ಜೈಲು ಸಿಬಂದಿಗಳೇ ಅವಕಾಶ ಕಲ್ಪಿಸಿರುವುದು ಮೇಲ್ನೋಟದಲ್ಲಿ ಭಾಸವಾಗುತ್ತಿದೆ. ಊಟ ಮಾಡುತ್ತಿರುವ ದೃಶ್ಯವನ್ನು ಒಳಗಡೆ ಇರುವ ಕೈದಿಗಳೇ ತೆಗೆದಿದ್ದು, ಮೊಬೈಲ್ ಕೂಡ ಇಟ್ಟುಕೊಂಡಿರುವುದು ಕೂಡ ಸಾಬೀತಾಗುತ್ತದೆ.
ಕಾರಾಗೃಹದಲ್ಲಿ ಈ ಹಿಂದೆಯೂ ಕುಖ್ಯಾತ ಕ್ರಿಮಿನಲ್ ಆರೋಪ ಹೊತ್ತ ರಶೀದ್ ಮಲಬಾರಿ ಇದ್ದ ವೇಳೆ ಕೂಡ ಬಾಡೂಟ ಹಾಗೂ ಪಾರ್ಟಿಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ವ್ಯಕ್ತವಾಗಿತ್ತು. ಮಂಗಳೂರು ಜೈಲಿನಲ್ಲಿ ಪ್ಲಾಸ್ಟಿಕ್ ಚೀಲಗಳ ಮೂಲಕ ಬೇಯಿಸಿದ ಆಹಾರ ಪದಾರ್ಥಗಳು ಯಾವ ರೀತಿಯಲ್ಲಿ ರವಾನೆಯಾಗುತ್ತಿದೆ ಎನ್ನುವುದಕ್ಕೆ ಜೈಲಿನ ಅಧಿಕಾರಿಗಳೇ ಉತ್ತರಿಸಿಬೇಕಾಗಿದೆ.