ಇಬ್ಬನಿ ತಬ್ಬದೆ ಮುದುಡಿದೆ ‘ಹೆಮ್ಮಾಡಿ ಸೇವಂತಿಗೆ’!

Spread the love

ಇಬ್ಬನಿ ತಬ್ಬದೆ ಮುದುಡಿದೆ ‘ಹೆಮ್ಮಾಡಿ ಸೇವಂತಿಗೆ’!

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ರೋಗ ಬಾಧೆ.
ವೈಶಿಷ್ಟ್ಯವುಳ್ಳ ಸೇವಂತಿಗೆ ಬೆಳೆಯಿಂದ ವಿಮುಖರಾಗುತ್ತಿರುವ ಕೃಷಿಕರು.
ಅಪರೂಪದ ಕೃಷಿಯ ಬಗ್ಗೆ ನಡೆಯಬೇಕಿದೆ ಅಧ್ಯಯನ.

ಕುಂದಾಪುರ: ಜನವರಿ ತಿಂಗಳಲ್ಲಿ ಗದ್ದೆಗಳಲ್ಲಿ ನಳನಳಿಸಿ ವಿಶಿಷ್ಟ ಸುವಾಸನೆಯ ಕಂಪು ಬೀರಬೇಕಿದ್ದ ಹೆಮ್ಮಾಡಿ ಸೇವಂತಿಗೆ ದಿನದಿಂದ ದಿನಕ್ಕೆ ಬದಲಾಗುತ್ತಿರುವ ಹವಮಾನ ವೈಪರೀತ್ಯ, ಹಲವು ರೋಗಗಳ ಬಾಧೆ, ಇನ್ನಿತರ ಕಾರಣಗಳಿಂದಾಗಿ ಹೂವು ಅರಳದೆ ಕೃಷಿಕರು ಅಪಾರ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರಿಗಾಗಿಯೇ ಬೆಳೆಯುವ ಹೆಮ್ಮಾಡಿ ಸೇವಂತಿಗೆಯನ್ನು ಸಾಮಾನ್ಯವಾಗಿ ಮಳೆಗಾಲದ ಕೊನೆಯ ಅವಧಿ ಅಗಸ್ಟ್ ಆರಂಭದಲ್ಲಿ ಆರಂಭಿಸುತ್ತಾರೆ. ಪ್ರತಿಕೂಲ ಹವಮಾನ, ಉತ್ತಮ ಚಳಿಯಾದರೆ ಇಬ್ಬನಿ ಹೂವಿನ ಮೊಗ್ಗಿನ ಮೇಲೆರಗಿ ಸರಿಸುಮಾರು ಆರು ತಿಂಗಳ ಬಳಿಕ ಜನವರಿಯ ಮಾರಣಕಟ್ಟೆ ಮಕರ ಸಂಕ್ರಮಣಕ್ಕೆ ಸರಿಯಾಗಿ ಹೂವು ಅರಳುತ್ತದೆ. ಹೂವು ಅರಳಿದ ಬಳಿಕ ಮೊದಲು ಬ್ರಹ್ಮಲಿಂಗೇಶ್ವರ ದೇವರಿಗೆ ಅರ್ಪಿಸಿದ ಜಾತ್ರೆಯಲ್ಲಿ ಹೂವು ಮಾರಾಟ ಮಾಡುತ್ತಾರೆ. ಮಾರಣಕಟ್ಟೆ ಜಾತ್ರೆಯ ಬಳಿಕ ವಿವಿಧ ದೈವಸ್ಥಾನಗಳ ಗೆಂಡ ಸೇವೆ, ಕೋಲ, ಪಾಣಾರಾಟ ಮೊದಲಾದೆಡೆಗಳಲ್ಲಿ ಸೇವಂತಿಗೆ ಹೂವು ಮಾರಾಟವಾಗುತ್ತದೆ.

ಅರಳದ ಸೇವಂತಿಗೆ:
ಜನವರಿ ತಿಂಗಳಲ್ಲಿ ಸೇವಂತಿಗೆ ಹೂವು ಅರಳಿ ಹಳದಿ ಬಣ್ಣಗಳಿಂದ ಹೊದ್ದು ಮಲಗುವ ಹೆಮ್ಮಾಡಿಯ ಆಸುಪಾಸಿನ ಗದ್ದೆಗಳನ್ನು ಕಣ್ತುಂಬಿಕೊಳ್ಳುವುದೇ ಚಂದ. ಆದರೆ ಈ ಬಾರಿ ಸಮಯಕ್ಕೆ ಸರಿಯಾಗಿ ಹೂವು ಅರಳದ ಕಾರಣ ಬೇಡಿಕೆಯೂ ಹೆಚ್ಚಿದೆ. ಬೇಡಿಕೆಯಷ್ಟು ಹೂವು ಅರಳದ ಪರಿಣಾಮ ಬೆಳೆಗಾರರು ದೂರದ ಬೆಂಗಳೂರು, ರಾಮನಗರ ಜಿಲ್ಲೆಗಳಿಂದ ಸೇವಂತಿಗೆ ಹೂವುಗಳನ್ನು ಆಮಧು ಮಾಡಿಕೊಂಡು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.

ಅಕಾಲಿಕ ಮಳೆತಂದ ವರದಾನ:
ಈ ಬಾರಿ ಚಳಿ ಅಷ್ಟೇನು ಇಲ್ಲದ ಪರಿಣಾಮ ಹೂವಿನ ಮೊಗ್ಗು ಅರಳದೆ ಹಾಗೆಯೇ ಉಳಿದುಕೊಂಡಿದೆ. ಕಳೆದ ವಾರದಲ್ಲಿ ಎರಡು-ಮೂರು ಬಾರಿ ಮಳೆಯಾದ್ದರಿಂದ ನೀರು ಮೊಗ್ಗಿನ ಮೇಲೆ ಕೂತು ಒಂದಷ್ಟು ಹೂವು ಅರಳಿದೆ. ಹೀಗೆ ಅರಳಿದ ಅಷ್ಟಿಷ್ಟು ಹೂವುಗಳನ್ನೇ ಕಟಾವು ಮಾಡಿ ಮಾರಾಟ ಮಾಡುವ ತಯಾರಿಯಲ್ಲಿದ್ದಾರೆ.

ಹೆಮ್ಮಾಡಿ ಸೇವಂತಿಗೆ ಫೇಮಸ್:
ಹೆಮ್ಮಾಡಿ ಸೇವಂತಿಗೆಗೆ ತನ್ನದೇ ಆದ ವಿಶೇಷತೆ ಇದೆ. ಗಿಡ ಬೆಳೆಯುವಾಗ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಕಡೆ ದಕ್ಷಿಣಾಭಿಮುಖವಾಗಿ ವಾಲುತ್ತದೆ ಎನ್ನುವುದು ಇಲ್ಲಿನ ರೈತರ ನಂಬಿಕೆ. ಗಾತ್ರದಲ್ಲಿ ಚಿಕ್ಕದಾಗಿದ್ದು, ಗಟ್ಟಿ ಬಾಳಿಕೆಯುಳ್ಳ, ವಿಶಿಷ್ಟ ಸುವಾಸನೆ ಬೀರುವ ಈ ನಾಟಿ ಸೇವಂತಿಗೆ ಕೃಷಿ ಹೆಮ್ಮಾಡಿ ಆಸುಪಾಸು ಬಿಟ್ಟರೆ ಬೇರೆಲ್ಲೂ ಬೆಳೆಯುವುದಿಲ್ಲ. ಮೊದಲು ಹೆಮ್ಮಾಡಿಯ ಮೂಲೆ ಮೂಲೆ ಗದ್ದೆಗಳಲ್ಲೂ ಬೆಳೆಯುತ್ತಿದ್ದ ಸೇವಂತಿಗೆ ಕೃಷಿ ಇಂದು ಅಷ್ಟಿಷ್ಟೋ ಕಾಣುತ್ತಿರುವುದು ಸಂಬಂಧಪಟ್ಟ ಇಲಾಖೆಯ ಅಸಡ್ಡೆಯನ್ನು ಎತ್ತಿ ತೋರಿಸುತ್ತಿದೆ.

ಅಪರೂಪದ ಕೃಷಿಯ ಬಗ್ಗೆ ನಡೆಯಬೇಕಿದೆ ಅಧ್ಯಯನ:
ಆರಂಭದ ದಿನಗಳಲ್ಲಿ ಉತ್ತಮವಾಗಿ ಫಸಲು ನೀಡುತ್ತಿದ್ದ ಸೇವಂತಿಗೆ ಕೃಷಿ ಕಳೆದ ಏಳೆಂಟು ವರ್ಷಗಳಿಂದ ಸೊಳ್ಳೆ ಕಾಟದಿಂದಾಗಿ ಗಿಡಗಳು ಕರಟಿ ಹೋಗುತ್ತಿವೆ. ನುಶಿ ಬಾಧೆಯಿಂದ ಪರಿಹಾರ ತೋಚದೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದ ಬಹುತೇಕ ಕೃಷಿಕರು ಆ ಬಳಿಕ ಸೇವಂತಿಗೆ ಕೃಷಿಯತ್ತ ಒಲವು ತೋರಿಸಿಲ್ಲ. ಸಣ್ಣ ಧೂಳಿನ ಕಣದಂತಿರುವ ಸೊಳ್ಳೆಗಳು ಮೊಗ್ಗಿನ ಅಡಿಭಾಗದಲ್ಲಿ ಕೂತು ಸತ್ವ ಹೀರಿಕೊಳ್ಳುವುದರಿಂದ ಗಿಡ, ಎಲೆಗಳು ಕರಟಿ ಹೋಗಿ ಫಸಲಿಗೆ ತೊಡಕಾಗುತ್ತಿದೆ. ಒಂದೆಡೆ ಸೊಳ್ಳೆ ಬಾಧೆ ಇನ್ನೊಂದೆಡೆ ಹವಮಾನ ವೈಪರೀತ್ಯಗಳಿಂದ ಕಂಗೆಟ್ಟ ಸೇವಂತಿಗೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಆಗಬೇಕಿದೆ. ಈ ಬಗ್ಗೆ ಬ್ರಹ್ಮಾವರದ ಕೃಷಿ ಸಂಶೋಧನಾ ಕೇಂದ್ರ ಅಧ್ಯಯನ ನಡೆಸಿ ಸೇವಂತಿಗೆ ಬೆಳೆಗೆ ಕಂಟಕವಾಗಿರುವ ಕೀಟ ಬಾಧೆಯಿಂದ ಪರಿಹಾರ ಕೊಡಿಸಬೇಕೆನ್ನುವುದು ಬೆಳೆಗಾರರ ಅಂಬೋಣ.

ಕಳೆದ ಎಂಟು ವರ್ಷಗಳಿಂದ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಆರು ತಿಂಗಳು ಗದ್ದೆಯಲ್ಲೇ ಬೀಡು ಬಿಟ್ಟು ಮಗುವಿನಂತೆ ಸಲುಹಿ ಗಿಡಗಳನ್ನು ಪೋಷಿಸಿಕೊಂಡು ಬರುತ್ತೇವೆ. ಆದರೆ ಫಸಲಿನ ಸಮಯದಲ್ಲಿ ಒಂದಲ್ಲಾ ಒಂದು ಬಾಧೆಗಳು ಗಿಡಗಳನ್ನು ಆವರಿಸುತ್ತದೆ. ಈ ಬಾರಿ ರೋಗ ಬಾಧೆಯ ಜೊತೆಗೆ ಹವಮಾನ ವೈಪರಿತ್ಯದಿಂದ ಉಳಿಸಿಕೊಂಡು ಬಂದ ಗಿಡಗಳಲ್ಲಿ ಹೂವು ಅರಳಿಲ್ಲ. ಈ ಎಲ್ಲಾ ಕಾರಣಗಳಿಂದಾಗಿಯೇ ಹಲವಾರು ಮಂದಿ ಸೇವಂತಿಗೆ ಕೃಷಿಯಿಂದ ಹಿಂದೆ ಸರಿದಿದ್ದಾರೆ ಎನ್ನುತ್ತಾರೆ ಸೇವಂತಿಗೆ ಕೃಷಿಕ ಶೇಖರ ಗಾಣಿಗ, ಕಟ್ಟು

ಚಿಗುರು ಮತ್ತು ಮೊಗ್ಗಿಗೆ ತೊಂದರೆ ಕೊಡುವ ಸಣ್ಣ ಗಾತ್ರದ ನೊಣ ಮೊಗ್ಗಿನ ಕೆಳಗಡೆ ಬಂದು ಕೂರುವುದರಿಂದ ಅದರ ಸತ್ವವನ್ನೆಲ್ಲಾ ಹೀರಿ ಮೊಗ್ಗು ಬಾಡುತ್ತದೆ. ಮೊಗ್ಗಿನ ಕೆಳಗಡೆ ಮೊಟ್ಟೆ ಇಟ್ಟು ಮರಿಗಳು ಮೊಗ್ಗಿನ ಬುಡದೊಳಗೆ ಸೇರಿಕೊಂಡು ಗಂಟು ಮಾಡುತ್ತದೆ. ಗಂಟು ಮಾಡುವುದರಿಂದ ಮೊಗ್ಗು ಒಣಗುತ್ತದೆ. ಯಾವ ಕಾರಣಕ್ಕಾಗಿ ಹೀಗಾಗಿದೆ ಮತ್ತು ಹತೋಟಿಯ ಕ್ರಮದ ಬಗ್ಗೆ ಸ್ಥಳಕ್ಕೆ ತೆರಳಿ ಸಂಶೋಧನೆ ಮಾಡಿದ ಬಳಿಕ ಹೇಳಬಹುದು. ಈ ಬಗ್ಗೆ ಕೇಂದ್ರದ ಮುಖ್ಯಸ್ಥರ ಗಮನಕ್ಕೆ ತರುವುದಾಗಿ ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ಕೀಟಶಾಸ್ತ್ರಜ್ಞ ಡಾ. ರೇವಣ್ಣ ಹೇಳಿದ್ದಾರೆ.


Spread the love