ಉಚ್ಚಿಲ ದಸರಾ 2024ಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ವಿದ್ಯುಕ್ತ ಚಾಲನೆ
ಕಾಪು: ದೇಶ ವಿದೇಶಗಳ ಭಕ್ತಾಭಿಮಾನಿಗಳ ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತಾಭಿಮಾನಿಗಳ ಸಹಕಾರ ಸಹಯೋಗದೊಂದಿಗೆ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ-2024 ವೈಭವಕ್ಕೆ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಅವರು ಅ.3ರಂದು ಚಾಲನೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದ. ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಡಾ. ಜಿ. ಶಂಕರ್ ಮಾತನಾಡಿ, ತೃತೀಯ ವರ್ಷದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾವನ್ನು ಜನಾಕರ್ಷಣೆಯ ಉತ್ಸವವನ್ನಾಗಿಸುವ ಉದ್ದೇಶದೊಂದಿಗೆ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿನ ಮೀನುಗಾರಿಕೆ ಯೋಜನೆಗಳ ಮಾಹಿತಿ, ಸಾಂಪ್ರಧಾಯಿಕ ಮೀನುಗಾರಿಕಾ ಪರಿಕರಗಳ ಪ್ರದರ್ಶನ, ಅಕ್ವೇರಿಯಂ ಮೀನುಗಳ ಪ್ರದರ್ಶನ, ಕಲಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನಕ್ಕೆ ಒತ್ತು ನೀಡಲಾಗಿದೆ. ಈ ಮೂಲಕ ಉಚ್ಚಿಲ ದಸರಾವನ್ನು ವಿಶ್ವವಿಖ್ಯಾತಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಶತಮಾನೋತ್ಸವದ ಸವಿನೆನಪಿನಲ್ಲಿ ನಿರ್ಮಿಸಲಾದ ನವೀಕೃತ ಕಾರ್ಯಾಲಯವನ್ನು ಉದ್ಘಾಟಿಸಿದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಉಚ್ಚಿಲ ದಸರಾ ವೈಭವದ ಮೂಲಕವಾಗಿ ದೇಶ ವಿದೇಶಗಳ ಜನರ ಗಮನ ಉಚ್ಚಿಲದತ್ತ ಕೇಂದ್ರಿತವಾಗುತ್ತಿದೆ. ಈ ಮೂಲಕ ಉಚ್ಚಿಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಘಟನಾ ಶಕ್ತಿಯು ಮೇಳೈಸುತ್ತಿದೆ. ಇಲ್ಲಿನ ಅಚ್ಚುಕಟ್ಟುತನ ಮತ್ತು ಕಾರ್ಯಕ್ರಮಗಳ ವೈವಿಧ್ಯತೆಯು ಇತರರಿಗೆ ಮಾದರಿಯಾಗಲಿದೆ ಎಂದರು.
‘ಉಡುಪಿ ಉಚ್ಚಿಲ ದಸರಾ ಉತ್ಸವ 2024’ ಪ್ರಯುಕ್ತ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಸ್ತು ಪ್ರದರ್ಶನವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಉದ್ಘಾಟಿಸಿದರು.
ಅಭಿನಂದನೆ : ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.
ಶಾರದೆ, ನವದುರ್ಗೆಯರ ವಿಗ್ರಹ ಪ್ರತಿಷ್ಠೆ : ಕ್ಷೇತ್ರದ ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಉಪಾಧ್ಯಾಯ ಅವರ ಪೌರೋಹಿತ್ಯದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಸಹಸ್ರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಯುವ ದಸರಾ ಪ್ರಯುಕ್ತ ಯುವ ನೃತ್ಯೋತ್ಸವ ಸ್ಪರ್ಧೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್., ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ನಿರ್ದೇಶಕಿ ಪೂರ್ಣಿಮಾ, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ದ. ಕ. ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕ್ಷೇತ್ರಾಡಳಿತ ಸಮಿತಿ ಮಾಜಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಮಾಜಿ ಅಧ್ಯಕ್ಷ ಗುಂಡು ಬಿ. ಅಮೀನ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಉಷಾ ರಾಣಿ, ನಾಲ್ಕು ಪಟ್ಣ ಮೊಗವೀರ ಮಹಾಸಭಾದ ಅಧ್ಯಕ್ಷ ಮನೋಜ್ ಕಾಂಚನ್, ನಾಲ್ಕು ಪಟ್ಣ ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಮುಖರಾದ ಚೇತನ್ ಬೇಂಗ್ರೆ, ಸುಜಿತ್ ಸಾಲ್ಯಾನ್ ಮೂಲ್ಕ್ಕಿ, ನಾರಾಯಣ ಸಿ. ಕರ್ಕೇರ, ಸುಧಾಕರ ಕುಂದರ್, ದಿನೇಶ್ ಎರ್ಮಾಳು, ಮೋಹನ್ ಬಂಗೇರ, ಶಿವಕುಮಾರ್ ಮೆಂಡನ್, ಗೌತಮ್ ಕೋಡಿಕಲ್, ರವೀಂದ್ರ ಶ್ರೀಯಾನ್, ಕೇಶವ ಎಂ. ಕೋಟ್ಯಾನ್, ನಾರಾಯಣ ಕುಂದರ್ ಕಲ್ಮಾಡಿ, ರತ್ನಾಕರ ಸಾಲ್ಯಾನ್, ಲೋಕೇಶ್ ಮೆಂಡನ್, ಸತೀಶ್ ಸಾಲ್ಯಾನ್ ಎರ್ಮಾಳು, ಯತೀಶ್ ಕಿದಿಯೂರು, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕೆರೆ ಮೊದಲಾದವರು ಉಪಸ್ಥಿತರಿದ್ದರು.