ಉಚ್ಚಿಲ ದಸರಾ-2024ಕ್ಕೆ ವೈಭವದ ತೆರೆ; ಕಣ್ಮನ ಸೆಳೆದ ಆಕರ್ಷಕ ಶೋಭಾ ಯಾತ್ರೆ
ಪಡುಬಿದ್ರಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀಕ್ಷೇತ್ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ 10 ದಿನಗಳಿಂದ ನಡೆದ ದಸರಾ ಉತ್ಸವ ನವದುರ್ಗೆಯರ ಸಹಿತ ಶಾರದಾ ಮಾತೆ ವಿಗ್ರಹ ಜಲಸ್ತಂಭನದೊಂದಿಗೆ ಸಮಾಪನಗೊಂಡಿತು.
ಶೋಭಾಯಾತ್ರೆಯ ಪ್ರಯುಕ್ತ ಬೆಳಗ್ಗಿನಿಂದಲೇ ಸಹಸ್ರಾರು ಮಂದಿ ಕ್ಷೇತ್ರಕ್ಕೆ ಬಂದಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಿಗ್ಗೆ 10.30ಕ್ಕೆ ಪಲ್ಲ ಪೂಜೆ ನೆರವೇರಿಸಿ, 11ರಿಂದಲೇ ಅನ್ನಸಂತರ್ಪಣೆ ನಡೆಯಿತು.
ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಸೇವೆ, ಶಾರದಾ ಮಾತೆಗೆ ಮಹಾ ಮಂಗಳಾರತಿ ಜರುಗಿತು.
ಕ್ಷೇತ್ರದ ಪ್ರಧಾನ ತಂತ್ರಿ ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಮಹಾಲಕ್ಷ್ಮಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಪೌರೋಹಿತ್ಯದಲ್ಲಿ ಶನಿವಾರ ಮಹಾಚಂಡಿಕಾಯಾಗ ನಡೆದು ನಾರಿಕೇಳ, ನವಧಾನ್ಯ, ರವಕೆ ಕಣ, ರೇಷ್ಮೆ ಸೀರೆ, ಫಲವಸ್ತುಗಳನ್ನು ಸಮರ್ಪಿಸಿ, ಪೂರ್ಣಾಹುತಿ ನೆರವೇರಿಸಲಾಯಿತು.
ಉಚ್ಚಿಲ ದಸರಾ ರೂವಾರಿ ಜಿ.ಶಂಕರ್, ಶಾಲಿನಿ ಜಿ.ಶಂಕರ್ ಮತ್ತು ಕುಟುಂಬಸ್ಥರು, ದ.ಕ. ಮೊಗವೀರ ಮಹಾಜನ ಸಂಘದ ಜಯ ಸಿ ಕೋಟ್ಯಾನ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಸಾದ್‌ರಾಜ್ ಕಾಂಚನ್, ಪ್ರಮುಖರಾದ ಗುಂಡು ಅಮೀನ್, ಗಿರಿಧರ ಸುವರ್ಣ, ವಾಸುದೇವ ಸಾಲಿಯಾನ್, ಪ್ರಬಂಧಕ ಸತೀಶ್ ಅಮೀನ್ ಪಡುಕರೆ, ಕಾರ್ಯದರ್ಶಿ ಶರಣ್ ಮಟ್ಟು ಇದ್ದರು.
ಉಚ್ಚಿಲ ದಸರಾ ಪ್ರಯುಕ್ತ ರಾತ್ರಿ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹ ಜಲಸ್ತಂಭದ ಕಾರ್ಯಕ್ರಮ ಸುಸೂತ್ರವಾಗಿ ನೆರವೇರುವಂತಾಗಲು ಪ್ರಾರ್ಥಿಸಿ ಕಾಪು ಬೀಚ್‌ನಲ್ಲಿ ಸಮುದ್ರ ಪೂಜೆ ನೆರೆವೇರಿಸಲಾಯಿತು.
ಸೌಹಾರ್ದ ಮೆರೆದ ದಸರಾ: ಉಚ್ಚಿಲ ದಸರಾ ಕಣ್ತುಂಬಿಸಿಕೊಳ್ಳಲು ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರಿಶ್ಚಿಯ್ ಸೇರಿದಂತೆ ಎಲ್ಲಾ ಧರ್ಮದವರೂ ಉಚ್ಚಿಲಕ್ಕೆ ಬಂದಿದ್ದರು. ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಯಲ್ಲಿಯೂ ಮುಸ್ಲಿಂ ಮಹಿಳೆಯರು, ಯುವಕರು, ಪುರುಷರು ಪಾಲ್ಗೊಂಡಿದ್ದರು.
ಹೆಚ್ಚಿದ ವಾಹನ ದಟ್ಟನೆ: ರಾಷ್ಟ್ರೀಯ ಹೆದ್ದಾರಿ 66ರ ಸನಿಹದಲ್ಲೇ ನಡೆಯುತ್ತಿರುವ ಉಚ್ಚಿಲ ದಸರಾ ವೀಕ್ಷಿಸಲು ಜನರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಹೆದ್ದಾರಿಯುದ್ದಕ್ಕೂ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಎರ್ಮಾಳು-ಉಚ್ಚಿಲ-ಮೂಳೂರು ನಡುವೆ ವಾಹನ ಸಂಚಾರ ವ್ಯತ್ಯಯದ ಒತ್ತಡವನ್ನು ನಿಯಂತ್ರಿಸಲು ಪಡುಬಿದ್ರಿ ಠಾಣಾಧಿಕಾರಿ ಪ್ರಸನ್ನ ಕುಮಾರ್ ಎಂ.ಎಸ್. ನೇತೃತ್ವದಲ್ಲಿ ಪೊಲೀಸರು ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿದರು. ಪೊಲೀಸರ ಶ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಡ್ರೋನ್ ಮೂಲಕ ಪುಷ್ಪಾರ್ಚನೆ: ಅಂಬಾರಿ ಹೊತ್ತ ಅಂಬಾರಿಯ ಟ್ಯಾಬ್ಲೊ, ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಕ್ಕೆ ಶಿವಮೊಗ್ಗದ ಡ್ರೋನ್ ಶಿವ ಅವರಿಂದ ಡ್ರೋನ್ ಮೂಲಕ ಪುಷ್ಪಾರ್ಚನೆ ಜರುಗಿತು.
ಮಳೆಯ ಸಿಂಚನ:ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆಯ ವೇಳೆಗೆ ತುಂತುರು ಮಳೆಯಾಯಿತು. ಶೋಭಾಯಾತ್ರೆ ಆರಂಭಗೊಳ್ಳುತ್ತಿದ್ದಂತೆಯೇ ಮಳೆ ಬಿರಿಸುಗೊಂಡಿತು. ವೇಷ ಧಾರಿಗಳು ಸಹಿತ ಟ್ಯಾಬ್ಲೊಗಳಿಗೆ ತೊಂದರೆ ಉಂಟಾಯಿತು.