ಉಡುಪಿ: ನಾಲ್ಕು ವರ್ಷಗಳ ಹಿಂದೆ (2011ರ ಮೇ 20ರಂದು) ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶರಾವತಿ ಸರ್ಕಲ್ ಸಮೀಪ ನಡೆದ ಭೀಕರ ರಸ್ತೆ ಅಪಘಾತಕ್ಕೆ ಬಲಿಯಾದ ಕಾಪುವಿನ ಸೈಯದ್ ನೂರುಲ್ಲಾ ಕುಟುಂಬಕ್ಕೆ ಉಡುಪಿಯ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ನ್ಯಾಯಾಲಯ ಒಟ್ಟು 40.35 ಲಕ್ಷ ರೂ. ಪರಿಹಾರ ಮೊತ್ತದೊಂದಿಗೆ ಶೇ.8ರ ದರದಲ್ಲಿ ಬಡ್ಡಿ ಪಾವತಿಸುವಂತೆ ಆದೇಶ ಹೊರಡಿಸಿದೆ.
ಪ್ರಕರಣದ ಹಿನ್ನಲೆ: ದುಬೈಯಲ್ಲಿ ಉದ್ಯೋಗಿ ಯಾಗಿದ್ದ ಕಾಪು ಕೊಪ್ಪಲಂಗಡಿಯ ನಿವಾಸಿ ಸೈಯದ್ ನೂರುಲ್ಲಾ ವಿಮಾನದಲ್ಲಿ ಮುಂಬೈಗೆ ಬಂದು ಅಲ್ಲಿಂದ ಬಸ್ಸಿನ ಮೂಲಕ ಕಾಪುವಿಗೆ ಪ್ರಯಾಣಿಸುತ್ತಿದ್ದಾಗ ಹೊನ್ನಾವರದಲ್ಲಿ ಈ ಅಪಘಾತ ನಡೆದಿತ್ತು.
ಮುಂಬೈಯಿಂದ ಕಾಪುಗೆ ಬರುತ್ತಿದ್ದ ನೂರುಲ್ಲಾರಿದ್ದ ಮಂಗಳಾ ಟ್ರಾವೆಲ್ಸ್ ಬಸ್, 2011ರ ಮೇ 20ರ ಮುಂಜಾನೆ 5:30ರ ಸುಮಾರಿಗೆ ಪ್ರಯಾಣಿಕರನ್ನು ಇಳಿಸುವ ಸಲು ವಾಗಿ ಹೊನ್ನಾವರದ ಶರಾವತಿ ಸರ್ಕಲ್ ಬಳಿ ರಾ.ಹೆದ್ದಾರಿಯಲ್ಲಿ ನಿಲ್ಲಿಸಿತ್ತು. ಈ ಸಂದರ್ಭ ದಲ್ಲಿ ಬಸ್ನಲ್ಲಿದ್ದ ಇಬ್ಬರು ಪ್ರಯಾಣಿಕರು, ಬಸ್ನ ನಿರ್ವಾಹಕನ ಸಹಾಯದಿಂದ ತಮ್ಮ ಲಗೇಜನ್ನು ಇಳಿಸಿಕೊಳ್ಳುತ್ತಿದ್ದರು. ಇವರ ಜತೆಗೆ ಬಸ್ಸಿನಿಂದ ಇಳಿದಿದ್ದ ಸೈಯದ್ ನೂರುಲ್ಲಾ ತಮ್ಮ ಲಗೇಜಿನ ಮೇಲೆ ನಿಗಾ ವಹಿಸುವ ಸಲುವಾಗಿ ಬಸ್ಸಿನ ಹಿಂಬದಿಯಲ್ಲಿ ನಿಂತಿದ್ದರು. ಇದೇ ಸಂದರ್ಭ ಕಾರವಾರ ಕಡೆಯಿಂದ ಅತೀ ವೇಗದಿಂದ ಬಂದ ಲಾರಿ, ಬಸ್ನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಅಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸೈಯದ್ ನೂರುಲ್ಲಾ ಕುಟುಂಬ ಉಡುಪಿ ಸಿವಿಲ್ ಜಡ್ಜ್ ಹಿರಿಯ ವಿಭಾಗ ಮತ್ತು ಉಡುಪಿಯ ಹೆಚ್ಚುವರಿ ವಾಹನ ಪರಿಹಾರ ನ್ಯಾಯಾಧಿಕರಣದಲ್ಲಿ ವಕೀಲರ ಮೂಲಕ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿತ್ತು. ತೀವ್ರ ಕುತೂಹಲದಿಂದ ಕೂಡಿದ್ದ ಈ ಪ್ರಕರಣದ ವಿಚಾರಣೆಯ ವೇಳೆ ಎರಡೂ ಕಡೆಯ ವಾದ-ವಿವಾದಗಳನ್ನು ಆಲಿಸಿದ ಉಡುಪಿ ನ್ಯಾಯಾಲಯ, ಲಾರಿ ಚಾಲಕನ ನಿರ್ಲಕ್ಷತನದಿಂದಲೇ ಅಪಘಾತ ನಡೆದಿರು ವುದು ಕಂಡು ಬಂದಿರುವುದರಿಂದ ಲಾರಿಯ ಮಾಲಕ ಹಾಗೂ ವಿಮಾ ಕಂಪೆನಿ ಬಜಾಜ್ ಅಲೆಯನ್ಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಮೃತನ ಕುಟುಂಬಕ್ಕೆ ಒಟ್ಟು 40.35 ಲಕ್ಷ ರೂ. ಪರಿಹಾರ ಹಾಗೂ 2011ರ ಆಗಸ್ಟ್ 27ರಿಂದ ಪರಿಹಾರದ ಮೊತ್ತ ಪಾವತಿಸುವ ದಿನದವರೆಗೆ ಶೇ.8ರ ಬಡ್ಡಿ ನೀಡುವಂತೆ ಆದೇಶಿಸಿದೆ.
ಸೈಯದ್ ನೂರುಲ್ಲಾ ದುಬೈಯಲ್ಲಿ ಪಡೆಯುತ್ತಿದ್ದ ಸಂಬಳ, ಅವರನ್ನೇ ಅವಲಂಬಿಸಿ ಊರಿನಲ್ಲಿದ್ದ ತಂದೆ-ತಾಯಿ, ಪತ್ನಿ ಹಾಗೂ ಪುಟ್ಟಮಕ್ಕಳ ಭವಿಷ್ಯವನ್ನು ಗಮನದಲ್ಲಿರಿಸಿ ಉಡುಪಿಯ ಸಿವಿಲ್ ಜಡ್ಜ್ (ಹಿರಿಯ ವಿಭಾಗ) ನ್ಯಾಯಾಲಯದ ನ್ಯಾಯಾಧೀಶೆ ಕೆ.ಎ. ನಾಗಜ್ಯೋತಿ ಮಹತ್ವಪೂರ್ಣ ಆದೇಶ ಹೊರಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾವರ ನ್ಯಾಯಾಲಯ, ಲಾರಿಯ ಚಾಲಕನೇ ಈ ಅಪಘಾತಕ್ಕೆ ಕಾರಣವೆಂದು ತೀರ್ಪು ನೀಡಿರುವುದನ್ನೂ ಅವರು ಪರಿಹಾರ ನಿರ್ಧರಿಸುವ ವೇಳೆ ಪರಿಗಣಿಸಿದ್ದರು.
ಸೈಯದ್ ನೂರುಲ್ಲಾ ಕುಟುಂಬದ ಪರ ಉಡುಪಿಯ ಯುವ ನ್ಯಾಯವಾದಿಗಳಾದ ಅಸದುಲ್ಲಾ ಕಟಪಾಡಿ ಮತ್ತು ರಾಜೇಶ್ ಎ.ಆರ್. ವಾದಿಸಿದ್ದರು.