ಉಡುಪಿ : ಅಂತರ್ ರಾಜ್ಯ ವಾಹನ ಕಳ್ಳರ ಬಂಧನ – ರೂ. 23.75 ಲಕ್ಷ ಮೊತ್ತದ ಸೊತ್ತು ವಶ

Spread the love

ಉಡುಪಿ : ಅಂತರ್ ರಾಜ್ಯ ವಾಹನ ಕಳ್ಳರ ಬಂಧನ – ರೂ. 23.75 ಲಕ್ಷ ಮೊತ್ತದ ಸೊತ್ತು ವಶ

ಉಡುಪಿ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2016 ರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ಟೆಂಪೋ, ಕಾರುಗಳನ್ನು ಕಳವು ಮಾಡಿ ತಮಿಳುನಾಡಿಗೆ ಮಾರಾಟ ಮಾಡುತ್ತಿದ್ದ ಅಂತರ್ರಾಜ್ಯ ವಾಹನ ಕಳ್ಳರ ತಂಡವನ್ನು ಬಂಧಿಸಿ ಕಳವು ಮಾಡಿದ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತರವರ ನೇತೃತ್ವದ ತಂಡ ಯಶಸ್ವಿಯಾಗಿರುತ್ತದೆ.

ಬಂಧಿತರನ್ನು ಶಿವಮೊಗ್ಗ ಜಿಲ್ಲೆ ಟಿಪ್ಪು ನಗರ ನಿವಾಸಿ ಸಯ್ಯದ್ ಮಜರ್ ಪಾಷಾ (23), ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ನಿವಾಸಿ ಕೆ ಎಲಿಯಾಸ್ ಯಾನೆ ಬಾಬು (58), ಶಿವಮೊಗ್ಗ ಜಿಲ್ಲೆ ಟಿಪ್ಪು ನಗರ ನಿವಾಸಿ ಸಯ್ಯದ್ ಮೆಹಬೂಬ್ ಪಾಷಾ (57) ಮತ್ತು ತಮಿಳುನಾಡು ಮೆಟ್ಟುಪಾಳ್ಯ ನಿವಾಸಿ ಜಿಯಾವುಲ್ ಹಕ್ (37) ಎಂದು ಗುರುತಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಶಾ ಜೇಮ್ಸ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರಚಂದ್ರರವರ ನಿರ್ದೇಶನದಂತೆ ಸಹಾಯಕ ಪೊಲೀಸ್ ಅಧೀಕ್ಷಕರಾದ ಕೆ. ಕೃಷ್ಣಕಾಂತ್ರವರ ಮಾರ್ಗದರ್ಶನದಲ್ಲಿ ಮಹೇಶ್ ಪ್ರಸಾದ್ ಸಿಪಿಐ ಕಾಪುರವರ ನೇತೃತ್ವದ ಈ ತಂಡ ಕಾರ್ಯಾಚರಣೆಯನ್ನು ನಡೆಸಿರುತ್ತದೆ.

ಈ ಕುರಿತು ಕಾಪುವಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಪೊಲೀಸ್ ಅಧೀಕ್ಷಕರಾದ ಕೆ. ಕೃಷ್ಣಕಾಂತ್ 2018 ಡಿಸೆಂಬರ್ 1 ರಂದು ರಾತ್ರಿ ವೇಳೆಯಲ್ಲಿ ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಾಜಿ ಟ್ರೇಡರ್ಸ್ ಅಂಗಡಿಯ ಎದುರುಗಡೆ ನಿಲ್ಲಿಸಿದ್ದ ಕೆಎ20ಬಿ9170 ನಂಬ್ರದ ಮಹೀಂದ್ರ ಬೊಲೊರೋ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕೆ. ಲಕ್ಷ್ಮೀನಾರಾಯಣ ಭಂಡಾರ್ಕರ್ ಎಂಬವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. 2019 ಜೂನ್ 16ರಂದು ಕಾಪು ಠಾಣಾ ವ್ಯಾಪ್ತಿಯ ಕಟಪಾಡಿ ಕಲ್ಲಾಪು ಬಳಿ ನಿಲ್ಲಿಸಿದ್ದ ಮೊಹಮ್ಮದ್ ರಕೀಬ್ ಎಂಬವರ ಮಹೀಂದ್ರ ಪಿಕ್ಅಪ್ ವಾಹನ ಕೆಎ19ಸಿ8184 ನೇದನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕುಂದಾಪುರ ಹಾಗೂ ಕಾಪು ಠಾಣಾ ವ್ಯಾಪ್ತಿಗಳಲ್ಲಿ ವಾಹನಗಳು ಕಳವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳವಾದ ವಾಹನ ಹಾಗೂ ಆರೋಪಿಗಳ ಪತ್ತೆಯ ಬಗ್ಗೆ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ತಂಡವು ಆರೋಪಿಗಳ ಹಾಗೂ ವಾಹನಗಳ ಪತ್ತೆಯ ಬಗ್ಗೆ ಹುಬ್ಬಳ್ಳಿ, ಧಾರವಾಡ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತು ಹೊರ ರಾಜ್ಯವಾದ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಸಂಚರಿಸಿ ವಾಹನ ಕಳ್ಳರ ಬಗ್ಗೆ ಮತ್ತು ಕಳವಾದ ವಾಹನದ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿರುತ್ತಾರೆ. ಉಡುಪಿ ಜಿಲ್ಲೆಯ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ, ಶಿವಮೊಗ್ಗ ಜಿಲ್ಲೆಯಲ್ಲಿ, ತುಮಕೂರು ಜಿಲ್ಲೆಗಳಲ್ಲಿ ವಾಹನಗಳನ್ನು ಕಳ್ಳತನ ಮಾಡಿದ ವಾಹನ ಚೋರರ ತಂಡ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿರುತ್ತಾರೆ.


ದಿನಾಂಕ 19/07/2019 ರಂದು ರಾತ್ರಿ ಪಿ.ಎಸ್.ಐ. ಕಾಪುರವರಾದ ಶ್ರೀ ಜಯ, ಪ್ರೊಬೇಷನರಿ ಪಿ.ಎಸ್.ಐ. ಸದಾಶಿವ ಹಾಗೂ ಸಿಬ್ಬಂದಿಯವರು ಕಟಪಾಡಿ ಚೆಕ್ಪೋಸ್ಟ್ನಲ್ಲಿ ಚೆಕ್ ಮಾಡಿಕೊಂಡಿರುವಾಗ ದಿನಾಂಕ 20/07/2019 ರಂದು 00:30 ಗಂಟೆ ಸಮಯಕ್ಕೆ ಉಡುಪಿ ಕಡೆಯಿಂದ ಒಂದು ಇಂಡಿಕಾ ಕಾರು ಬರುತ್ತಿದ್ದು, ಕಾರಿನಲ್ಲಿ ನಾಲ್ಕು ಜನರು ಇದ್ದು, ಕಾರಿನ ದಾಖಲಾತಿಯ ಬಗ್ಗೆ ವಿಚಾರಿಸಲಾಗಿ ಕಾರಿಗೆ ಯಾವುದೇ ದಾಖಲಾತಿ ಇರದೇ ಇದ್ದು, ಸಂಶಯಗೊಂಡ ಪಿ.ಎಸ್.ಐ.ರವರು ಸಿಪಿಐ ಕಾಪುರವರಿಗೆ ಮಾಹಿತಿ ನೀಡಿದಂತೆ ಸಿಪಿಐ ಕಾಪುರವರು ಕಟಪಾಡಿ ಚೆಕ್ಪೋಸ್ಟ್ಗೆ ಹೋಗಿ ಅಲ್ಲಿದ್ದ ನಾಲ್ವರನ್ನು ಕೂಲಂಕುಷವಾಗಿ ವಿಚಾರಿಸಲಾಗಿ ತಾವು ನಾಲ್ವರು ಕರಾವಳಿಯಲ್ಲಿ ಯಾವುದಾದರೂ ಪಿಕ್ಅಪ್ ವಾಹನ ಕಳವು ಮಾಡಿಕೊಂಡು ಹೋಗಲು ಸಂಚುಮಾಡಿ ಬಂದಿರುವುದಾಗಿ ತಿಳಿಸಿರುತ್ತಾರೆ. ಅಲ್ಲಿಯ ಕಾರಿನ ಬಗ್ಗೆ ಕೇಳಲಾಗಿ ನೋಂದಣಿ ಸಂಖ್ಯೆ ಕೆಎ20ಎಬಿ8799 ಇದ್ದು, ಕಾರಿನೊಳಗೆ ಬೇರೆ ನಂಬ್ರ ಪ್ಲೇಟ್ ಕೆಎ04ಎಬಿ9279 ಇದ್ದು, ಈ ಬಗ್ಗೆ ಆರೋಪಿತರಲ್ಲಿ ವಿಚಾರಿಸಲಾಗಿ ಸದ್ರಿ ನಂಬರ್ ಪ್ಲೇಟ್ ಅಸಲಿ ನಂಬರ್ ಪ್ಲೇಟ್ ಎಂದು ಕಾರಿಗೆ ಹಾಕಿದ ನಂಬ್ರ ಪ್ಲೇಟ್ನ್ನು ಬದಲಾಯಿಸಿರುವುದಾಗಿ ತಿಳಿಸಿರುತ್ತಾರೆ. ಅವರುಗಳ ಹೆಸರು, ವಿಳಾಸ ಕೇಳಲಾಗಿ 1) ಸಯ್ಯದ್ ಮಜರ್ ಪಾಷಾ (23), 2) ಪಿ.ಕೆ. ಎಲಿಯಾಸ್ ಯಾನೆ ಬಾಬು (58), 3) ಸಯ್ಯದ್ ಮೇಹಬೂಬ್ ಪಾಷಾ. (57) ಮತ್ತು 4) ಜಿಯಾವುಲ್ ಹಕ್ (37), ತಂದೆ ಶೌಕತ್ ಅಲಿ ಎಂದು ತಿಳಿದುಬಂದಿದ್ದು, ಆರೋಪಿತರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ ಇಂಡಿಕಾ ಕಾರು, ನಕಲಿ ನಂಬರ್ ಪ್ಲೇಟ್ಗಳು, ಕೀ ಗೊಂಚಲು, 5 ಮೊಬೈಲ್ ಫೋನ್ಗಳನ್ನು ಸ್ವಾಧೀನಪಡಿಸಿರುತ್ತಾರೆ.

ತನಿಖೆಯನ್ನು ಮುಂದುವರಿಸಿ ಕಾಪು ಠಾಣಾ ಅಪರಾಧಕ್ಕೆ ಸಂಬಂಧಿಸಿದ ರೂಪಾಯಿ 1,50,000/- ಅಂದಾಜು ಮೌಲ್ಯದ ಬೊಲೆರೋ ಪಿಕ್ಅಪ್ ವಾಹನವನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕು ಹೊನ್ನೆಕುಡಿ ಗ್ರಾಮದ ಹಂತ್ವಾನೆ ಎಂಬಲ್ಲಿಂದ ಸ್ವಾಧೀನಪಡಿಸಿಕೊಂಡಿದ್ದು, ಬಳಿಕ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಮುಂದಿನ ತನಿಖೆಯನ್ನು ಕೈಗೊಂಡ ಸಿಪಿಐ ಕಾಪುರವರು ಆರೋಪಿತರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ತಮಿಳುನಾಡು ರಾಜ್ಯದ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಮ್ನಲ್ಲಿ ಆರೋಪಿ ಜಿಯಾವುಲ್ ಹಕ್ನ ಬಾಬ್ತು ಗುಜರಿ ಅಂಗಡಿಯಲ್ಲಿ ಇರಿಸಲಾಗಿದ್ದ 4 ಮಹೀಂದ್ರ ಬೊಲೆರೋ ಪಿಕ್ಅಪ್ ವಾಹನಗಳನ್ನು, 5 ಅಶೋಕ್ ಲೈಲ್ಯಾಂಡ್ ದೋಸ್ತ್ ವಾಹನಗಳನ್ನು, 1 ಟೊಯೋಟ ಕ್ವಾಲಿಸ್, 1 ಮಾರುತಿ 800 ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಸಯ್ಯದ್ ಮಜರ್ ಪಾಷಾ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಕಲಿ ಕೀ ಬಳಸಿ ಕಾರು ಮತ್ತು ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡಿ ಎಲಿಯಾಸ್ ಮತ್ತು ತಮಿಳುನಾಡಿನ ಜಿಯಾಉಲ್ ಹಕ್ಗೆ ಮಾರಾಟ ಮಾಡುತ್ತಿದ್ದು, ಈತನು ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಠಾಣೆಯ 2 ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸಿದ್ದು, ಇನ್ನೂ ಹಲವಾರು ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಕೆ. ಎಲಿಯಾಸ್ ಯಾನೆ ಬಾಬು ಕದ್ದ ವಾಹನಗಳನ್ನು ಸ್ವೀಕರಿಸುವವನಾಗಿದ್ದು, ತಮಿಳುನಾಡು ಮತ್ತು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದು, ಹಲವಾರು ಕಳವು ಪ್ರಕರಣಗಳು ಮತ್ತು ಶ್ರೀಗಂಧ ಕಳವು ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

ಸಯ್ಯದ್ ಮೆಹಬೂಬ್ ಪಾಷಾ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನಕಲಿ ಕೀ ಬಳಸಿ ಕಾರು ಮತ್ತು ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡಿ ಎಲಿಯಾಸ್ ಮತ್ತು ತಮಿಳುನಾಡಿನ ಜಿಯಾಉಲ್ ಹಕ್ಗೆ ಮಾರಾಟ ಮಾಡುತ್ತಿದ್ದು, ಈತನು ಭದ್ರಾವತಿ ಠಾಣೆಯಲ್ಲಿ ಶ್ರೀಗಂಧ ಕಳವು ಪ್ರಕರಣದಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿದ್ದು, ಇನ್ನೂ ಹಲವಾರು ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.
ಜಿಯಾವುಲ್ ಹಕ್ ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ಕದ್ದವಾಹನಗಳನ್ನು ನಂಬರ್ ಪ್ಲೇಟ್, ಎಂಜಿನ್ ನಂಬರ್, ಚಾಸಿಸ್ ನಂಬರ್, ಬಣ್ಣ ಬದಲಿಸಿ ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದು, ಕರ್ನಾಟಕ ಮತ್ತು ಇತರ ರಾಜ್ಯಗಳ ವಿವಿಧ ಮಾದರಿಯ ಕಳವು ವಾಹನಗಳನ್ನು ಖರೀದಿಸಿ ವ್ಯಾಪಾರ ಜಾಲ ಹೊಂದಿರುತ್ತಾನೆ.

ಬಂಧಿತರಿಂದ ಕಾಪು, ಶಿವಮೊಗ್ಗ ದೊಡ್ಡಪೇಟೆ, ತೀರ್ಥಹಳ್ಳಿ ಮತ್ತು ಕುಂದಾಪುರ ಠಾಣಾ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 4 ಬೊಲೆರೋ ಪಿಕ್ ಅಪ್ ವಾಹನಗಳು. ಶಿವಮೊಗ್ಗ, ಶಿವಮೊಗ್ಗ ತುಂಗ ನಗರ, ಶಿವಮೊಗ್ಗ ವಿನೋಬ ನಗರ, ಶಿವಮೊಗ್ಗ ದೊಡ್ಡಪೇಟೆ ಮತ್ತು ತುಮಕೂರು ನಗರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 5 ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನಗಳು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ 1 ಕ್ವಾಲಿಸ್ ಕಾರು. ಆರೋಪಿತರು ಕೃತ್ಯದ ಸಮಯ ಬಳಸುತ್ತಿದ್ದ 1 ಟಾಟಾ ಇಂಡಿಕಾ ಕಾರು ನಕಲೀ ಕೀಗಳು, 5 ಮೊಬೈಲ್ ಫೋನ್ಗಳು ಮತ್ತು ನಕಲಿ ನಂಬರ್ ಪ್ಲೇಟ್ಗಳು. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 23,75,000/- ಆಗಬಹುದು.

ಮಹೇಶ್ ಪ್ರಸಾದ್, ವೃತ್ತ ನಿರೀಕ್ಷಕರು ಕಾಪು ವೃತ್ತರವರು ಈ ವಿಶೇಷ ಕಾರ್ಯಾಚರಣೆಯ ತಂಡದಲ್ಲಿ ಕೆ.ಜಯ ಪಿ.ಎಸ್.ಐ.ಕಾಪು, ಪ್ರೊಬೇಷನರಿ ಪಿಎಸ್ಐರವರಾದ ಉದಯರವಿ, ಸದಾಶಿವ ಗವರೋಜಿ, ಮಹದೇವ ಬೋಸ್ಲೆ ಹಾಗೂ ಸಿಬ್ಬಂದಿಯವರಾದ ಪ್ರವೀಣ್ ಕುಮಾರ್, ರಾಜೇಶ್, ರವಿಕುಮಾರ್, ಸುಧಾಕರ್ ಬಿಜೂರು, ಜಗದೀಶ್, ರುದ್ರೇಶ, ಶಶಿಧರ, ರಘು, ಸಂದೇಶ್, ಸಂದೀಪ್ ಶೆಟ್ಟಿ, ರಾಘವೇಂದ್ರ ಜೋಗಿ, ಪ್ರಕಾಶ, ಶರಣಪ್ಪ, ಮಂಜುನಾಥ, ಪರಶುರಾಮ ಹಾಗೂ ರಾಜೇಂದ್ರ ರವರು ಭಾಗವಹಿಸಿರುತ್ತಾರೆ.


Spread the love