ಉಡುಪಿ: ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಸ್ಥಾಪಕ ನಾಡೋಜ ಡಾ ಜಿ ಶಂಕರ್ ತಮ್ಮ 60 ನೇ ಹುಟ್ಟುಹಬ್ಬವನ್ನು ಕ್ಯಾನ್ಸರ್ ಮತ್ತು ಕಿಡ್ನಿ ತೊಂದರೆಯಿಂದ ಬಳಲುತ್ತಿರುವ ಅಶಕ್ತ ರೋಗಿಗಳಿಗೆ, ವೃದ್ಧಾಶ್ರಮ, ಅನಾಥಾಶ್ರಮ ಹಾಗೂ ವಿಶೇಷ ಶಾಲೆಗಳಿಗೆ ನೆರವು ನೀಡುವ ಮೂಲಕ ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು.
ಕಾರ್ಯಕ್ರಮವನ್ನು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಜಸ್ಟಿಸ್ ಎಸ್. ಆರ್. ನಾಯಕ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿ ಜಗತ್ತಿನಲ್ಲಿ ಬಹುಮಂದಿ ತಮಗಾಗಿ, ತಮ್ಮ ಕುಟುಂಬಕ್ಕಾಗಿ, ಸ್ನೇಹಿತ, ಸಂಬಂಧಿಗಳಿಗಾಗಿ ಬದುಕುತ್ತಾರೆ, ದುಡಿಯುತ್ತಾರೆ, ಗಳಿಸುತ್ತಾರೆ. ಹೀಗೆ ಗಳಿಸುವವರು ಸ್ವಾರ್ಥಿಗಳಾಗುತ್ತಾರೆ. ಆದರೆ ಜಿ.ಶಂಕರ್ ಜಾತಿ, ಕೋಮುಗಳನ್ನು ಮೀರಿ ಎಲ್ಲ ವರ್ಗದವರನ್ನೂ ಒಂದೇ ರೀತಿಯಲ್ಲಿ ಕಂಡು ತಮ್ಮ ಗಳಿಕೆಯನ್ನು ಅವರಿಗಾಗಿ ಮೀಸಲಿಡುತ್ತಿದ್ದಾರೆ. ಬದುಕುವ ಹಕ್ಕಿನಿಂದ ವಂಚಿತರಾದವರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲಾ ಜಾತಿಯವರ ಸೇವೆ ಮಾಡುವ ಮೂಲಕ ವಿಶ್ವಮಾನವ, ನಿಜವಾದ ಬಸವಣ್ಣನಂತೆ ಜಿ. ಶಂಕರ್ ಕಾಣಿಸುತ್ತಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ ಜಿ ಶಂಕರ್ 60 ವರ್ಷಗಳ ಬದುಕಿನಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಎಲ್ಲಾ ಸಾಧನೆಗಳಿಗೆ ತಂದೆ-ತಾಯಿಯವರು ಕಲಿಸಿದ ಸಂಸ್ಕಾರವೇ ಕಾರಣವಾಗಿದೆ. ದೇವರು ಕೊಟ್ಟದ್ದರಲ್ಲಿ ಹಂಚಿ ತಿನ್ನಬೇಕು ಎನ್ನುವ ಮನೋಭಾವವನ್ನು ಹೊಂದಿದ್ದು, ಎಲ್ಲರೂ ಇದನ್ನೇ ಪಾಲಿಸಬೇಕು ಎಂದರು. ಹುಟ್ಟಿದ ಊರಿನ ಮಣ್ಣಿನ ಋಣವನ್ನು ಈಗಾಗಲೇ ತೀರಿಸಿದ್ದು, ನನ್ನ ಕರ್ಮಭೂಮಿಯಾದ ಉತ್ತರ ಕರ್ನಾಟಕ ಋಣವನ್ನು ಕೂಡ ತೀರಿಸಲು ಮರೆಯುವುದಿಲ್ಲ ಎಂದರು.
ಎ.ವಿ.ಬಾಳಿಗ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ ಭಂಡಾರಿ ಮಾತನಾಡಿ, ಹಣವಂತರು ಈ ರೀತಿಯಾಗಿ ತಮ್ಮ ಹುಟ್ಟಿದಹಬ್ಬವನ್ನು ಇತರರಿಗೆ ಸಹಾಯ ಮಾಡುವ ಮೂಲಕ ಆಚರಿಸಿದರೆ ಸಮಾಜದ ಬೆಳವಣಿಗೆಗೆ ಪೂರಕವಾಗುತ್ತದೆ.ಖಾಯಿಲೆಗಳು ಎಲ್ಲರಿಗೂ ಬರುತ್ತದೆ. ಸಕಾರಾತ್ಮಕ ಚಿಂತನೆಯ ಜೊತೆಗೆ ವೈದ್ಯರ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್, ಕಿಡ್ನಿ ತೊಂದರೆ ಹಾಗೂ ಇತರ ಖಾಯಿಲೆಗಳಿಂದ ಬಳಲುತ್ತಿರುವ 1,000ಕ್ಕೂ ಅಧಿಕ ಮಂದಿಗೆ, ವಿಶೇಷ ಮಕ್ಕಳ ಶಾಲೆ, ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಸಹಾಯಧನ ವಿತರಿಸಲಾಯಿತು. ಅಲ್ಲದೆ ಚಿಕ್ಕಮಗಳೂರು ಜಿಲ್ಲೆ ತರಿಕೆರೆಯ ಲಿಂಗರಾಜು-ವೀಣಾ ದಂಪತಿ ಪುತ್ರಿ ಅನಾರೋಗ್ಯ ಪೀಡಿತ ನಾಲ್ಕರ ಬಾಲೆ ರಮ್ಯಾರ ವೈದ್ಯಕೀಯ ವೆಚ್ಚಕ್ಕೆ ಟ್ರಸ್ಟ್‍ನಿಂದ 1 ಲಕ್ಷ ರೂ. ನೀಡುವುದಾಗಿ ಡಾ. ಜಿ. ಶಂಕರ್ ಘೋಷಣೆ ಮಾಡಿದರು.
ಡಾ. ಜಿ.ಶಂಕರ್ ಪತ್ನಿ ಶಾಲಿನಿ ಶಂಕರ್, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲ ಸಚಿವ ಡಾ. ಸಚ್ಚಿದಾನಂದ, ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಸರ್ಜಿಕಲ್ ಆಂಕೋಲಜಿ ವಿಭಾಗದ ಅಸೋಸಿಯೇಟ್ ಪೆÇಫೆಸರ್ ಮತ್ತು ಮುಖ್ಯಸ್ಥ ಡಾ. ರೋಹನ್‍ಚಂದ್ರ ಗಟ್ಟಿ, ಕೆಎಂಸಿ ಮಣಿಪಾಲದ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ಪ್ರಭು, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಸದಾನಂದ ಬಳ್ಕೂರು ಉಪಸ್ಥಿತರಿದ್ದರು.
ಶ್ಯಾಮಿಲಿ ಶಂಕರ್ ಸ್ವಾಗತಿಸಿ, ಆಶಿಕಾ ಆನಂದ್ ವಂದಿಸಿನದರು. ರಾಘವೇಂದ್ರ ಕಾಂಚನ್ ಕಾರ್ಯಕ್ರಮ ನಿರೂಪಿಸಿದರು.