ಉಡುಪಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಶೋಸಿಯೇಶನ್ ವತಿಯಿಂದ ಮಾರ್ಚ್ 1 ರಂದು ಟೈಲರ್ಸ್ ಕ್ಷೇಮ ನಿಧಿ ಮಂಡಳಿ ಸೇರದಂತೆ ಹಲವಾರು ಬೇಡಿಕೆಯನ್ನು ಮುಂದಿರಿಸಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಯವ ತನಕ ಶಾಂತಿಯುತ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಸಂಘದ ಅಧ್ಯಕ್ಷ ವಿಲಯಂ ಬಿ ಮಚಾದೊ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಳೆದ 16 ವರ್ಷದಿಂದ ರಾಜ್ಯದಾದ್ಯಂತ ಏಕರೂಪದ ಸಂಘಟನೆಯಾದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಶೋಶಿಯೇಶನ್ ಸರಕಾರದ ಮುಂದೆ ಟೈಲರ್ಸ್ ಕ್ಷೇಮ ನಿಧಿ ಮಂಡಳಿ ಸೇರಿದಂತೆ ಹಲವಾರು ಬೇಡಿಕೆಯನ್ನು ಮುಂದಿರಿಸಿಕೊಂಡು ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ಹೋರಾಟಗಳನ್ನು ನಡೆಸಿಕೊಂಡು ಬಂದಿದೆ.
2009 ರಲ್ಲಿ ಸರಕಾರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚಿಸಿ ಆರಂಭದಲ್ಲಿ ಹೊಲಿಗೆ ಕೆಲಸಗಾರರನ್ನು ಮತ್ತು 8 ವಿವಿಧ ಕಾರ್ಮಿಕರನ್ನು ಒಳಪಡಿಲಸಾಗಿದ್ದು, ಈಗ 43 ನಾನಾ ವರ್ಗದ ಕಾರ್ಮಿಕರನ್ನು ಇದರಲ್ಲಿ ಸೇರಿಸಲಾಗಿದೆ.
2010 ಮತ್ತು 11 ರಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ನ್ಯಾಷನಲ್ ಪೆನ್ಶನ್ ಲೈಟ್ ಸ್ವಾವಂಲಬನ್ ಎನ್ನುವ ಯೋಜನೆಯೊಂದನ್ನು ಜಾರಿ ಮಾಡಿ ಈ ಯೋಜನೆಯಲ್ಲಿ 18 ವರ್ಷ ದಿಂದ 60 ವರ್ಷ ವಯಸ್ಸಿನ ಅಸಂಘಟಿತ ಕಾರ್ಮಿಕರು, ಅವರ ಖಾತೆಗೆ ಕೇಂದ್ರ ಸರಕಾರ 1000 ಮತ್ತು ರಾಜ್ಯ ಸರಕಾರ 1200 ಜಮಾ ಮಾಡುವ ಯೋಜನೆಯಲ್ಲಿ 10000 ಟೈಲರ್ಸ್ ಸದಸ್ಯರು ಇದರಲ್ಲಿ ಹಣ ಪಾವತಿ ಮಾಡಿದ್ದರು. ಮತ್ತು 60 ವರ್ಷ ಕಳೆದವರು ಈ ಯೋಜನೆಯಲ್ಲಿ ಹಣ ತೊಡಗಿಸಿಕೊಂಡವರು ಇದರ ಪ್ರಯೋಜನೆಯನ್ನು ಪಡೆದಿದ್ದರು.
ಆದರೆ ಜನವಿ 1 ರಿಂದ ಹೊಸ ಸದಸ್ಯರ ಸೇರ್ಪಡೆಯನ್ನು ತಡೆಹಿಡಿದ್ದಿದ್ದು, 40 ವರ್ಷ ವಯಸ್ಸಿನ ಕೆಳಗಿನ ಪ್ರತಿಯೊಬ್ಬರನ್ನು ಆಟಲ್ ಪಿಂಚಣಿ ಯೋಜನೆಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸುತ್ತದೆ. ಮತ್ತು 40 ವರ್ಷ ದಾಟಿದವರನ್ನು ಈ ಯೋಜನೆಗೆ ಸೇರಿಸಿಕೊಳ್ಳುವುದನ್ನು ತಡೆಯಿಡಿಯಲಾಗಿದ್ದು, ಇದರಿಂದ ಸದಸ್ಯರಲ್ಲಿ ಗೊಂದಲ ಉಂಟಾಗಲು ಕಾರಣವಾಗಿದೆ.
ನಮ್ಮ ಬೇಡಿಕೆಯಾದ ನ್ಯಾಷನಲ್ ಪೆನ್ಶನ್ ಸ್ಕೀಮ್ ಲೈಟ್ ಸ್ವಾವಲಂಬನ್ ಯೋಜನೆಯನ್ನು ಆರಂಭದಲ್ಲಿ ಇದ್ದ ರೀತಿಯಲ್ಲೇ ಮುಂದುವರೆಸಿಕೊಂಡು ಹೋಗುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಸಮಿತಿಯ 6 ವಿಧಾನಸಭಾ ಕ್ಷೇತ್ರದ 45 ವಲಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿಕೊಂಡು ಮಣಿಪಾಲ್ ಟೈಗರ್ ಸರ್ಕಲಿನಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಅರ್ಪಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಯುಗಾನಂದ ಶೆಟ್ಟಿ, ಖಜಾಂಚಿ ರಾಮಚಂದ್ರ, ರಾಜ್ಯ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಂಡಿಮಠ ಶಿವರಾಮ್ ಆಚಾರ್ಯ ಉಪಸ್ಥಿತರಿದ್ದರು.