ಉಡುಪಿ: ಕೊರೊನಾ ಭೀತಿ ನಡುವೆ ಮುಂದೂಡಲ್ಪಟ್ಟ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಆರಂಭ
ಉಡುಪಿ: ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಉಡುಪಿ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಜಿಲ್ಲೆಯ 27 ಕೇಂದ್ರಗಳಲ್ಲಿ 13563 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಉಡುಪಿ ಜಿಲ್ಲೆಯಲ್ಲಿ ನೊಂದಾಯಿಸಿಕೊಂಡಿದ್ದ 1344 ವಿದ್ಯಾರ್ಥಿಗಳು ಹೊರಜಿಲ್ಲೆಗಳಲ್ಲಿ ಪರೀಕ್ಷೆ ಬರೆಯುತ್ತಾರೆ. ಹಾಗೂ ಹೊರ ಜಿಲ್ಲೆಗಳ 163 ಮಂದಿ ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಹೊರ ರಾಜ್ಯದ 23 ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಈ ಪಾಸ್ ನೀಡಲಾಗಿದೆ.
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ನಿಷೇಧಿತ ಪ್ರದೇಶ ಘೋಷಿಸಿದ್ದು ಜೆರಾಕ್ಸ್ ಅಂಗಡಿ ಮುಚ್ಚಿಸಲು ಹಾಗೂ ಭದ್ರತಾ ವ್ಯವಸ್ಥೆ ಒದಗಿಸಲು ಆದೇಶಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಕರೋನಾ ಮಾರ್ಗಸೂಚಿ ಕಡ್ಡಾಯವಾಗಿದ್ದು ಸಾಮಾಜಿಕ ಅಂತರ ಸಹಿತ ಪಾಲನೆ ಹಾಗೂ ಸ್ಯಾನಿಟೈಸರ್, ಮಾಸ್ಕ್ ಬಳಕೆಗೆ ಸೂಚಿಸಲಾಗಿದೆ. ಶೀತ ಜ್ವರ ಇರುವ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಕ್ವಾರಂಟೈನ್ ಕೇಂದ್ರವಾಗಿ ಬಳಸಿಕೊಂಡಿಲ್ಲ. ಎಲ್ಲಾ ಕೇಂದ್ರಗಳನ್ನೂ ಈಗಾಗಲೇ ಸ್ಯಾನಿಟೈಸ್ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಲು ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಒಟ್ಟು 69 ಮಾರ್ಗಗಳಲ್ಲಿ 91 ಕೆಎಸ್ಆರ್ಟಿಸಿ ಬಸ್ ಗಳನ್ನು ಬಳಸಲಾಗಿದೆ.