ಉಡುಪಿ:- ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು ಎಂದು ಎಂದು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲೆಯ ಬೆಳಪು ನಲ್ಲಿ ರೂ.141.38 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಮಂಗಳೂರು ವಿಶ್ವವಿದ್ಯಾಲಯದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಶಂಕುಸ್ಥಾಪನಾ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರೆತು ಸಮಾಜದಲ್ಲಿ ಪರಿವರ್ತನೆ ಆಗಬೇಕು, ಸಮಾಜದ ಎಲ್ಲಾ ವರ್ಗದ ಜನರ ಮಕ್ಕಳಿಗೆ ಶಿಕ್ಷಣ ಸಿಗಬೇಕು ಇದರಿಂದ ಸಮಾಜದಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ನಿವಾರಣೆ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.
ಬೆಳಪುವಿನಲ್ಲಿ ನಿರ್ಮಾಣಗೊಳ್ಳುವ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ಮಾಣಕ್ಕೆ ಈಗಾಗಲೇ ರೂ.15 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ, ಈ ಕೇಂದ್ರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗೊಳ್ಳುವಂತಹ ಸಂಶೋದನೆಗಳು ಈ ಕೇಂದ್ರದಲ್ಲಿ ನಡೆಯಲಿ, ಕರಾವಳಿ ಪ್ರದೇಶವು ಹೆಚ್ಚಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ್ದು, ಇದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರಿಗೂ ಇದೆ, ಇಲ್ಲಿನ ಜನರ ಬದುಕು ಮತ್ತು ಪರಿಸರ ಕುರಿತು ಈ ಕೇಂದ್ರದಲ್ಲಿ ಸಂಶೋಧನೆಗಳು ನಡೆಯಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ದ ವಿಜ್ಞಾನಿಗಳು ಇಲ್ಲಿ ಬಂದು ಸಂಶೋದನೆ ನಡೆಸುವಂತಾಗಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.
ಅತ್ಯಾಧುನಿಕ ಸಂಶೋಧನಾ ಕೇಂದ್ರದ ಮೂಲಕ ಉನ್ನತ ಶಿಕ್ಷಣ ಪಡೆದು ಯಾವುದೇ ಸವಾಲು ಎದುರಿಸಲು ಸಜ್ಜಾಗಲಿ, ಈ ಭಾಗಕ್ಕೆ ಪ್ರತ್ಯೇಕ ಪಿ.ಜಿ. ಸೆಂಟರ್ ಪ್ರಾರಂಬಿಸುವಂತೆ ಬೇಡಿಕೆ ಇದೆ, ಈ ಕುರಿತಂತೆ ಕುಲಪತಿಗಳು ಕ್ರಮ ಕೈಗೊಳ್ಳಲಿ ಸರಕಾರ ಎಲ್ಲಾ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕರಾವಳಿಯಲ್ಲಿ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ, ಶಾಂತಿ ಕದಡಲು ಯತ್ನಿಸುವವರ ವಿರುದ್ದ ಅತ್ಯಂತ ಕಠಿಣ ಕ್ರಮಗಳನ್ನು ಸಕರ್ಾರ ಕೈಗೊಳ್ಳಲಿದೆ, ಎಲ್ಲ ವರ್ಗದ ಜನರ ರಕ್ಷಣೆಗೆ ಸರ್ಕಾರ ಬದ್ದವಾಗಿದ್ದು, ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿನಯ ಕುಮಾರ್ ಸೊರಕೆ, ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್, ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್, ಶಾಸಕ ಪ್ರಮೋದ್ ಮಧ್ವರಾಜ್, ಮೊಯಿದ್ದೀನ್ ಬಾವಾ, ಐವನ್ ಡಿಸೋಜಾ, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್, ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಬೆಳಪು ಗ್ರಾ.ಪಂ. ಅಧ್ಯಕ್ಷೆ ವಿಮಲಾ ಅಂಚನ್, ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಸ್ವಾಗತಿಸಿದರು. ಕುಲ ಸಚಿವ ಪ್ರೊ.ಪಿ.ಎಸ್. ಯಡಪಡಿತ್ತಾಯ ವಂದಿಸಿದರು. ಡಾ. ಚೆನ್ನಪ್ಪ ಗೌಡ ನಿರೂಪಿಸಿದರು