ಉಡುಪಿ: ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ ಆರಂಭ
ಉಡುಪಿ: ಮೂಲಭೂತ ಸೌಕರ್ಯಗಳ ಬೇಡಿಕೆ ಹಾಗೂ ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳು ಎರಡನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಇಂದು ಉಡುಪಿಯೂ ಸೇರಿದಂತೆ ಎಲ್ಲಾ ತಾಲೂಕು ಕಚೇರಿಗಳ ಎದುರು ಪ್ರಾರಂಭಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ರಾಜ್ಯವ್ಯಾಪಿಯಾಗಿ ಈ ಮುಷ್ಕರ ನಡೆಯುತ್ತಿದೆ. ಈ ಹಿಂದೆ ವೃಂದದ ವತಿಯಿಂದ ಕೈಗೊಂಡ ಮುಷ್ಕರದ ಯಾವುದೇ ಬೇಡಿಕೆಗಳನ್ನು ಈಡೇರಿಸದ ಕಾರಣ ಇದೀಗ 2ನೇ ಹಂತದ ಮುಷ್ಕರವನ್ನು ರಾಜ್ಯವ್ಯಾಪಿ ಪ್ರಾರಂಭಿಸ ಲಾಗಿದೆ ಎಂದು ಸಂಘದ ಉಡುಪಿ ಜಿಲ್ಲಾಧ್ಯಕ್ಷ ಭರತ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಸ್. ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿರುವ 165 ಮಂದಿ ಗ್ರಾಮ ಆಡಳಿತ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಏಳು ತಾಲೂಕು ಕಚೇರಿಗಳ ಮುಂದೆ ಇಂದಿನಿಂದ ಮುಷ್ಕರ ಪ್ರಾರಂಭಿಸಿರುವುದರಿಂದ ಗ್ರಾಪಂ ಮಟ್ಟದಲ್ಲಿ ಕಂದಾಯ ಇಲಾಖೆಯ ಸೇವೆಗಳಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ಇವರು ನೀಡುವ ಎಲ್ಲಾ ಗ್ರಾಮಾಡಳಿತ ಸೇವೆಗಳು ಇಂದಿನಿಂದ ಸ್ಥಗಿತಗೊಂಡಿವೆ.
ಈ ಮೊದಲು 2024ರ ಸೆ.26ರಿಂದ ಅ.3ರವರೆಗೆ ರಾಜ್ಯಾದ್ಯಂತ ಮುಷ್ಕರ ನಡೆಸಲಾಗಿತ್ತು. ಆಗ ಮುಷ್ಕರನಿರತರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರಕಾರ ನೀಡಿತ್ತು. ಆದರೆ ಈವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿ ಸದ ಹಿನ್ನೆಲೆಯಲ್ಲಿ ಇಂದಿನಿಂದ ಮತ್ತೆ ಎರಡನೇ ಹಂತದ ಮುಷ್ಕರವನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಬಾರಿ ಮುಷ್ಕರದ ವೇಳೆ ಅ.3ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಲಾಗಿತ್ತು.ಹೀಗಾಗಿ ಅಂದೇ ರಾಜ್ಯವ್ಯಾಪಿ ಮುಷ್ಕರವನ್ನು ಕೈಬಿಡಲಾಗಿತ್ತು. ಆದರೆ ನಂತರ ಸರಕಾರವು ಈ ವೃಂದದ ನೌಕರರ ಬೇಡಿಕೆಗಳ ವಿಚಾರ ವಾಗಿ ಯಾವುದೇ ತೃಪ್ತಿಕರ ಕ್ರಮಗಳನ್ನು ಕೈಗೊಂಡಿಲ್ಲ ಹಾಗೂ ಬೇಡಿಕೆಗಳನ್ನು ಈಡೇರಿಸಿಲ್ಲ. ಬದಲಾಗಿ ಮುಷ್ಕರದ ಪೂರ್ವದ ಅವಧಿಗಿಂತಲೂ ಹೆಚ್ಚಿನ ಕಾರ್ಯದ ಒತ್ತಡ ನಮ್ಮ ಮೇಲೆ ಉಂಟಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ರಾಜ್ಯವ್ಯಾಪಿ ಮುಷ್ಕರ ಅನಿವಾರ್ಯವಾಗಿದ್ದು, ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಪ್ರಮೋದ್ ಎಸ್. ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳು ಸರಕಾರದ ಮುಂದೆ ಇಟ್ಟಿರುವ ಬೇಡಿಕೆಗಳಲ್ಲಿ ಕಚೇರಿಯ ಬಳಕೆಗೆ ಗುಣಮಟ್ಟ ಮೊಬೈಲ್, ಲ್ಯಾಪ್ಟಾಪ್ ನೀಡುವುದು, ಸುಸಜ್ಜಿತ ಕೊಠಡಿಯ ನಿರ್ಮಾಣ, ಮಹಿಳಾ ನೌಕರರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಸೇರಿವೆ.
ನಮ್ಮ ಪ್ರಮುಖ ಬೇಡಿಕೆ ಮೂಲಭೂತ ಸೌಕರ್ಯಗಳನ್ನು ನೀಡುವು ದಾಗಿದೆ. ನಮ್ಮೆಲ್ಲಾ ಸೇವೆಗಳು ಆನ್ಲೈನ್ನಲ್ಲೇ ನಡೆಯುವುದರಿಂದ ಕೆಲಸಕ್ಕೆ ನಮ್ಮ ಗುಣಮಟ್ಟದ ಕಂಪ್ಯೂಟರ್ (ಲ್ಯಾಪ್ಟಾಪ್) ಹಾಗೂ ಸುಸಜ್ಜಿತ ಮೊಬೈಲ್ ಗಳನ್ನು ನೀಡಬೇಕು. 21ಮೊಬೈಲ್ ಆ್ಯಪ್ಗಳಲ್ಲಿ ನಾವು ಕೆಲಸ ಮಾಡಬೇಕು. ಇದಕ್ಕೆ ಉತ್ತಮ ಗುಣಮಟ್ಟ ಮೊಬೈಲ್ ನೀಡುವಂತೆ ಕೇಳುತಿದ್ದೇವೆ. ಕುಳಿತು ಕೆಲಸ ಮಾಡಲು ಸುಸಜ್ಜಿತ ಕೊಠಡಿ ಒದಗಿಸಬೇಕಿದೆ ಎಂದು ಪ್ರಮೋದ್ ತಿಳಿಸಿದರು.
ಈಗ ನಾವು ಕೆಲಸಕ್ಕಾಗಿ ಹೆಚ್ಚಾಗಿ ತಾಲೂಕು ಕಚೇರಿಗಳಲ್ಲೇ ಇರುವುದರಿಂದ ನಿಯೋಜಿತ ಗ್ರಾಪಂಗಳಲ್ಲಿ, ಗ್ರಾಮಗಳಲ್ಲಿ ಜನರಿಗೆ ಬೇಕಾದಾಗ ಲಭ್ಯವಾಗಲು ಸಾಧ್ಯವಾಗುತ್ತಿಲ್ಲ. ಇದು ತಪ್ಪಿ ನಾವು ಗ್ರಾಮಗಳಲ್ಲೇ ಇದ್ದು ಕೆಲಸ ಮಾಡಲು ಅವಕಾಶವಾಗಬೇಕು ಎಂದರು.
ಅಲ್ಲದೇ ಸರಕಾರ ಇತ್ತೀಚೆಗೆ ವಿಎಗಳ ಅಂತರ್ಜಿಲ್ಲಾ ವರ್ಗಾವಣೆಯನ್ನು ರದ್ದುಗೊಳಿಸಿದೆ. ಇದರಿಂದ ಸಾಕಷ್ಟು ಮಂದಿಗೆ ತೊಂದರೆಗಳಾಗುತ್ತಿವೆ. ನಿವೃತ್ತಿ ಯ ಸಂದರ್ಭದಲ್ಲಿ ತಮ್ಮ ಊರಿನ ಪಕ್ಕದಲ್ಲಿ ಕೆಲಸ ಮಾಡುವ ಅವಕಾಶದಿಂದ ವಂಚಿತ ರಾಗಿದ್ದೇವೆ. ಅಸ್ವಸ್ಥ ಹೆತ್ತವರ ಜೊತೆ ಇರಲು ಸಾಧ್ಯವಾಗದೇ ತೀವ್ರ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುತಿದ್ದೇವೆ. ಹೀಗಾಗಿ ಅಂತರ್ಜಿಲ್ಲಾ ವರ್ಗಾವಣೆಯನ್ನು ಮತ್ತೆ ಪ್ರಾರಂಭಿಸಬೇಕು.
ಉಡುಪಿ ಜಿಲ್ಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಇನ್ನೊಂದು ಸಮಸ್ಯೆ ಎದುರಿಸುತಿದ್ದಾರೆ. ನಿಯೋಜಿತ ಗ್ರಾಮಗಳಲ್ಲಿ ಗ್ರಾಮಸ್ಥರ ಮಧ್ಯೆ ಕೆಲಸ ಮಾಡಬೇಕಿದ್ದ ವಿಎಗಳಲ್ಲಿ 45 ಮಂದಿಯನ್ನು ಕಚೇರಿಗಳಿಗೆ ನಿಯೋಜಿಸಲಾಗಿದೆ. ಇವರಲ್ಲಿ 14 ಮಂದಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಳಿದವರು ಎಸಿ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿದ್ದಾರೆ. ಹೀಗಾಗಿ ಹಲವರಿಗೆ 2-3 ಗ್ರಾಮಗಳ ಜವಾಬ್ದಾರಿಯನ್ನು ವಹಿಸಲಾಗುತ್ತಿದೆ.
ಸರಕಾರ ಈಗಾಗಲೇ ಎರಡು ಬಾರಿ ಸುತ್ತೋಲೆ ಹೊರಡಿಸಿ ಎಲ್ಲರನ್ನು ಗ್ರಾಮಗಳಿಗೆ ನಿಯೋಜಿಸುವಂತೆ ಸೂಚಿಸಿದ್ದರೂ, ಅದು ಕಾರ್ಯಗತಗೊಳ್ಳುತ್ತಿಲ್ಲ. ಇದರಿಂದ ವಿಎಗಳ ಸೇವೆ ಗ್ರಾಮಗಳಿಗೆ ಸಿಗುತ್ತಿಲ್ಲ. ಇರುವವರ ಮೇಲೆ ಒತ್ತಡ ಬೀಳುತ್ತಿದೆ. ಇದು ತಪ್ಪಬೇಕಾಗಿದೆ ಎಂದವರು ತಿಳಿಸಿದ್ದಾರೆ.
ಜಿಲ್ಲೆಯ 225 ಗ್ರಾಮಗಳಲ್ಲಿ ಒಟ್ಟು 165 ಮಂದಿ ಗ್ರಾಮ ಆಡಳಿತ ಅಧಿಕಾರಿಗಳಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ ತಾಲೂಕು ಕಚೇರಿಗಳ ಎದುರು ಪ್ರಾರಂಭಿಸಿದ ಮುಷ್ಕರ ಮೂರು ದಿನಗಳ ಕಾಲ ಅಲ್ಲಿ ಮುಂದುವರಿ ಯಲಿದೆ. ಈ ಅವಧಿಯಲ್ಲಿ ಸರಕಾರ ಬೇಡಿಕೆಯನ್ನು ಈಡೇರಿಸದಿದ್ದರೆ ಆ ಬಳಿಕ ಕೇಂದ್ರ ಸಂಘದ ನಿರ್ಣಯದಂತೆ ಅದು ಜಿಲ್ಲಾ ಮಟ್ಟದಲ್ಲಿ ನಂತರ ರಾಜ್ಯಮಟ್ಟದಲ್ಲಿ ನಡೆಸಲು ನಿರ್ಧರಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಎಸ್. ತಿಳಿಸಿದ್ದಾರೆ.