ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ; ಚಿತ್ತ ಜೆಡಿಎಸ್ ನತ್ತ?
ಉಡುಪಿ: ಮಾಜಿ ಸಚಿವ, ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಜಾತ್ಯತೀತ ಜನತಾದಳ ಸೇರಲಿದ್ದಾರೆಯೇ? ಹಾಗೆಂಬ ಮಾತು ಉಡುಪಿಯಲ್ಲಿ ದಟ್ಟವಾಗಿ ಹರಿದಾಡುತ್ತಿದೆ. ಅದನ್ನು ಪರೋಕ್ಷವಾಗಿ ಸ್ವತಃ ಪ್ರಮೋದ್ ಕೂಡಾ ಸೋಮವಾರ ಸಮರ್ಥಿಸಿದ್ದಾರೆ. ಆದರೆ ಸದ್ಯ ಬೆಂಗಳೂರಿನಲ್ಲಿರುವ ಪ್ರಮೋದ್ ಅವರು, ಜೆಡಿಎಸ್ ಪಕ್ಷಕ್ಕೆ ಸೇರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ್ದಾರೆ.
ಮೈತ್ರಿ ನಿಯಮದಂತೆ ಈಗಾಗಲೇ ಉಡುಪಿ- ಚಿಕ್ಕಮಗಳೂರು ಕ್ಷೇತ್ರ ಜೆಡಿಎಸ್ ಪಾಲಾಗಿರುವ ಜೊತೆ ಜೊತೆಗೇ ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬೇಕೆನ್ನುವ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ ಮತ್ತು ಪ್ರಯತ್ನ ಸಾಗುತ್ತಿದೆಯಾದರೂ ಆ ಯತ್ನ ಸಫಲವಾಗದ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆಗೊಂಡು ಸ್ಪರ್ಧೆ ನೀಡುವ ಯೋಚನೆಯಲ್ಲಿದ್ದಾರೆ.
ಜೆಡಿಎಸ್ಗೆ ಸ್ಪರ್ಧೆಗೆ ಅವಕಾಶ ಲಭಿಸಿದೆಯಾದರೂ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ. ಮಾಜಿ ಸಂಸದ, ಹಾಲಿ ಬಿಜೆಪಿ ನಾಯಕ ಜಯಪ್ರಕಾಶ ಹೆಗ್ಡೆ ಅವರನ್ನು ಜೆಡಿಎಸ್ಗೆ ಸೆಳೆಯುವ ಯತ್ನ ಮಾಡಲಾಯಿತಾದರೂ ಅದು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಪ್ರಮೋದ್ ಜೆಡಿಎಸ್ ಸೇರ್ಪಡೆಯಾದಲ್ಲಿ ಪಕ್ಷಕ್ಕೆ ಬಲ ಬಂದೀತು ಎಂಬುದು ಜೆಡಿಎಸ್ ಲೆಕ್ಕಾಚಾರ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಅವರು ಎಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇರುತ್ತೇ ಅಲ್ಲಿ ಜೆಡಿಎಸ್ ಬೆಂಬಲ ನೀಡುತ್ತೇ ಅಂತೆಯೇ ಎಲ್ಲಿ ಜೆಡಿಎಸ್ ಅಭ್ಯರ್ಥಿ ಇರುತ್ತೇ ಅಲ್ಲಿ ಕಾಂಗ್ರೆಸ್ ಬೆಂಬಲ ನೀಡುತ್ತೇ ಇದು ಮೈತ್ರಿ ನಿಯಮವಾಗಿದೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರವನ್ನು ಪಕ್ಷದ ವರಿಷ್ಠರು ಮತ್ತು ರಾಹುಲ್ ಗಾಂಧಿಯವರು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದಾರೆ. ಅದರಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಒಬ್ಬ ವ್ಯಕ್ತಿಯನ್ನು ಚುನಾವಣಾ ಅಭ್ಯರ್ಥಿಯನ್ನಾಗಿ ನೇಮಿಸುತ್ತೆ. ಆದರೆ ಚಿಹ್ನೆ ಮಾತ್ರ ಜೆಡಿಎಸ್ ಪಕ್ಷದಾಗಿರುತ್ತೆ.
ಅದರಂತೆ ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿ ಯಾರಾಗಬೇಕು ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೆಗೌಡ ಅವರು ಮೈತ್ರಿಕೂಟ ಅಭ್ಯರ್ಥಿಯಾಗಿ ನಿಲ್ಲುವಿರಾ ಎಂದು ನನ್ನಲ್ಲಿ ಕೇಳಿರುವುದು ಸತ್ಯ. ಆದರೆ ನಾನು ನನ್ನ ಪಕ್ಷದ ವರಿಷ್ಠರ ಅಭಿಪ್ರಾಯ ಮತ್ತು ಸೂಚನೆಯಂತೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದೇನೆ ಆದರೆ ಈ ವರೆಗೆ ಆ ತೀರ್ಮಾನ ಆಗಿಲ್ಲ.
ಮಹಾರಾಷ್ಟ್ರದಲ್ಲಿ ಶಿವಶೇನೆ-ಬಿಜೆಪಿ ಮೈತ್ರಿ ಇದೆ, ಬಿಹಾರದಲ್ಲಿ ನಿತಿಶ್ ಕುಮಾರ್ ಬಿಜೆಪಿ ಮೈತ್ರಿ ಇದೆ. ಮೈತ್ರಿ ಅಂದ ಮೇಲೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಜೊತೆಯಾಗಿ ಒಮ್ಮತದ ಅಭ್ಯರ್ಥಿಯನ್ನು ಬೆಂಬಲಿಸಬೇಕಾಗಿರುವುದು ನಮ್ಮ ಕರ್ತವ್ಯಾಗಿದೆ. ನಮಗೆ ಕೇವಲ ಬೆಂಚು ಬಿಸಿ ಮಾಡುವ ಅಭ್ಯರ್ಥಿ ಬೇಕಾಗಿಲ್ಲ ಬದಲಾಗಿ ಕೆಲಸ ಮಾಡುವ ಅಭ್ಯರ್ಥಿ ಬೇಕು. ಅದರಂತೆ ನಮ್ಮ ಎರಡು ಪಕ್ಷಗಳು ಸೇರಿ ಒಮ್ಮತದ ಅಭ್ಯರ್ಥಿಯ ಬಗ್ಗೆ ತೀರ್ಮಾನಕ್ಕೆ ಬರಲಿವೆ. ಜನರ ತೀರ್ಮಾನ ಹೇಗೆ ಎನ್ನುವುದು ಹೇಳಲು ಸಾಧ್ಯ ಅದರಂತೆ ಮೈತ್ರಿ ಕೂಟದ ಅಭ್ಯರ್ಥಿಗೆ ಗೆಲ್ಲುವ ವಾತಾವರಣ ಇದೆ. ಮಾರ್ಚ್ 26 ನೇ ತಾರೀಕಿನ ಒಳಗೆ ಒಮ್ಮತದ ಅಭ್ಯರ್ಥಿ ಯಾರು ಎನ್ನುವುದು ಸ್ಪಷ್ಟವಾಗಲಿದೆ ಎಂದು ಪ್ರಮೋದ್ ಹೇಳೀದರು.
ಉಡುಪಿಯಲ್ಲಿ ಬಹುತೇಕ ಕಾಂಗ್ರೆಸ್ನ್ನು ನಿಯಂತ್ರಣದಲ್ಲಿರಿಸಿದ್ದ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಲೇ ಕಾಂಗ್ರೆಸ್ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಕ್ಷದಿಂದ ಸಾಕಷ್ಟು ಅನುಭವಿಸಿ ಇದೀಗ ಜೆಡಿಎಸ್ ಸೇರ್ಪಡೆಗೊಳ್ಳುವ ಮೂಲಕ ಪಕ್ಷ ದ್ರೋಹ ಮಾಡುತ್ತಿದ್ದಾರೆ ಎಂದು ಕೆಲವರು ಹೇಳಿದರೆ, `ಹೋದರೆ ಹೋಗಲಿ ಬಿಡಿ. ಪ್ರಮೋದ್ ಕಾಂಗ್ರೆಸ್ಗೆ ಬಿಸಿ ತುಪ್ಪ’ ಎಂದೂ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರೋರ್ವರು ಸಿಟ್ಟು ವ್ಯಕ್ತಪಡಿಸಿದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಾಗದ ಪ್ರಮೋದ್ ಮುಂದಿನ ಚುನಾವಣೆಯಲ್ಲಿ ಚುನಾವಣೆಯಲ್ಲಿ ಸೋಲುವುದು ಖಚಿತವಾದರೂ ಅಂತರ ಕಡಿಮೆ ಆದೀತಷ್ಟೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವುದು ಮೂರ್ಖತನದ ಪರಮಾವಧಿ ಎಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಜೆಡಿಎಸ್ಗೆ 8 ಸೀಟು ಬಿಟ್ಟುಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತಂದಿದೆ, ಪ್ರತಿಭಟನೆಯೂ ನಡೆದಿದೆ. ಇಷ್ಟೆಲ್ಲಾ ವಿದ್ಯಮಾನಗಳನಡುವೆಯೇ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಜೆಡಿಎಸ್ ಸೇರ್ಪಡೆಗೊಂಡು ಸ್ಪರ್ಧಿಸುವ ವಿಚಾರವೂ ಕೇಳಿಬರುತ್ತಿದೆ. ಕೇವಲ 5 ತಿಂಗಳ ಹಿಂದೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಪ್ರಮೋದ್ ಮಧ್ವರಾಜ್ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದು ಮೂರ್ಖತನವಾಗುತ್ತದೆ. ಅವರ ಬದಲಿಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿರುವ ಕ್ಷೇತ್ರಗಳಲ್ಲಿ ಉಡುಪಿ ಕ್ಷೇತ್ರವನ್ನು ಕೈಬಿಟ್ಟು ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಯೋಗ್ಯ ಅಭ್ಯರ್ಥಿಯಾದ ಅಮೃತ್ ಶೆಣೈ ಅಥವಾ ಆರತಿ ಕೃಷ್ಣ ಅವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಅನ್ಸಾರ್ ಆಗ್ರಹಿಸಿದ್ದಾರೆ.