ಉಡುಪಿ: ಉಡುಪಿಯಲ್ಲಿ ಸುಮಾರು 50ವರ್ಷಗಳ ಹಿಂದೆ ಹಾಜಿ ಅಬ್ದುಲ್ಲಾ ಸಾಹೇಬ್‌ರ ಕಾಲದಲ್ಲಿ ಮುಸ್ಲಿಮರಿಗೂ ಉಡುಪಿ ಶ್ರೀಕೃಷ್ಣ ಮಠಕ್ಕೂ ಅವಿನಾಭವ ಸಂಬಂಧ ಇತ್ತು. ಆದರೆ ಇಂದು ಅದು ಸಂಪೂರ್ಣ ಕ್ಷೀಣಿಸಿದೆ. ಧರ್ಮದಲ್ಲಿರುವ ಕೆಲವು ಕಿಡಿಗೇಡಿಗಳಿಂದ ಸಮುದಾಯಕ್ಕೆ ಹಾನಿಯಾಗುವ ಸಂಭವ ಬರುತ್ತಿದೆ. ಯುವ ಪೀಳಿಗೆಗೆ ಹಿರಿಯರು ಉತ್ತಮ ಮಾರ್ಗದರ್ಶನ ನೀಡುವ ಕಾರ್ಯ ಅಗತ್ಯವಾಗಿದೆ ಎಂದು ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಜಮಿಯ್ಯತುಲ್ ಫಲಾಹ್ ಉಡುಪಿ ಘಟಕದ ವತಿಯಿಂದ ರವಿವಾರ ಉದ್ಯಾವರ ಹಫ್ಸಾ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಆಶೀರ್ವಚನ ನೀಡಿದರು.
ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಧಾರ್ಮಿಕ ಮುಖಂಡರು ಕೆಲವೊಂದು ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತದೆ. ಪರಸ್ಪರ ಧರ್ಮವನ್ನು ಅರಿತುಕೊಳ್ಳುವ ಕೆಲಸ ಮಾಡಬೇಕು ಎಂದರು.
ಉಡುಪಿ ಧರ್ಮ ಪ್ರಾಂತದ ಅಂತರ್‌ಧರ್ಮೀಯ ವಿಭಾಗದ ನಿರ್ದೇಶಕ ರೆ.ಫಾ.ವಿಲಿಯಂ ಮಾರ್ಟಿಸ್, ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಮತ್ತು ಉಡುಪಿ ಜಿಲ್ಲಾ ವಲಯ ಸಂಚಾಲಕ ವೌಲ್ವಿ ಅಬ್ದುಲ್ ಸಲಾಮ್ ಯು. ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣಾಮಲೈ, ಉಡುಪಿ ನಗರಸಭಾ ಅಧ್ಯಕ್ಷ ಯುವ ರಾಜ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್ ಉಪಸ್ಥಿತರಿದ್ದರು. ಹೂಡೆ ಮುಹಮ್ಮದೀಯ ಎಜುಕೇಶನ್ ಟ್ರಸ್ಟ್‌ನ ಇದ್ರೀಸ್ ಹೂಡೆ ದಿಕ್ಸೂಚಿ ಭಾಷಣ ಮಾಡಿದರು.
ಘಟಕದ ಅಧ್ಯಕ್ಷ ಶಭೀ ಅಹ್ಮದ್ ಕಾಝಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಸಮೀರ್ ಎಂ. ವಂದಿಸಿದರು. ಪತ್ರಿಕಾ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.