ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ವತಿಯಿಂದ  ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಆಚರಣೆ

Spread the love

ಉಡುಪಿ ಜಿಲ್ಲಾ ಆರ್.ಜಿ.ಪಿ.ಆರ್.ಎಸ್ ವತಿಯಿಂದ  ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಆಚರಣೆ

ಉಡುಪಿ: ಇಂದು ಅಂಗೈಯಲ್ಲಿ ವಿಶ್ವವನ್ನು ತಲುಪಲು ಸಾಧ್ಯವಾಗುವಂತಹ ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಿದವರು ಮಾಜಿ ಪ್ರಧಾನಿ   ರಾಜೀವ್ ಗಾಂಧಿಯವರು. ಇಂದಿನ ಡಿಜಿಟಲ್ ಇಂಡಿಯಾ ಅನ್ನುವ ಒಂದು ದೊಡ್ಡ ಬೊಬ್ಬೆಗೆ ಕಾರಣೀಕರ್ತರಾದ ರಾಜೀವ್ ಗಾಂಧಿಯವರನ್ನು ಇದನ್ನು ಪ್ರಚಾರ ಮಾಡುವ ನಾಯಕರುಗಳು ಮರೆತು ಬಿಟ್ಟಿದ್ದಾರೆ. ಸ್ಯಾಮ್ ಪಿತ್ರೋಡರಂತಹ ತಂತ್ರಜ್ಞರನ್ನು ಭಾರತಕ್ಕೆ ಕರೆಸಿ ಸಿ ಡಾಟ್ ಕಂಪೆನಿಗಳ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಭಾರತದಲ್ಲಿ ಆಧುನೀಕರಿಸಿ ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ ಕನಸು ಕಂಡು ಅದನ್ನು ನನಸಾಗಿಸುವಲ್ಲಿ ಶ್ರಮ ವಹಿಸಿದ ಮಹಾನ್ ಚೇತನ ದಿ. ರಾಜೀವ್‍ಜೀ ಅವರನ್ನು ಭಾರತ ಎಂದೂ ಮರೆಯಲು ಸಾಧ್ಯವಿಲ್ಲ ಎಂದು, ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ ರಾಜೀವ್ ಗಾಂಧಿಯವರ 29ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಜಿ ಶಾಸಕರಾದ   ಯು. ಆರ್. ಸಭಾಪತಿಯವರು ಮಾತನಾಡಿದರು.

ಅವರು ಮುಂದುವರಿಯುತ್ತಾ, ಪಂಚಾಯತ್ ರಾಜ್ ವ್ಯವಸ್ಥೆಯನ್ನು ವಿಕೇಂದ್ರೀಕರಿಸುವುದರ ಮೂಲಕ ತಳ ಹಂತದ ಪ್ರತಿನಿಧಿಗಳು ಸರಕಾರ ರಚನೆಯ ಕಾರ್ಯದಲ್ಲಿ ಭಾಗವಹಿಸುವಂತೆ ಸಂವಿಧಾನದ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‍ಗಳಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡಿದ್ದಲ್ಲದೆ ಯುವ ಜನತೆ ಈ ದೇಶದ ಭವಿಷ್ಯ ಎನ್ನುವ ದೂರ ದೃಷ್ಟಿಯಿಂದ 18ನೇ ವರ್ಷಕ್ಕೆ ಮತದಾನದ ಹಕ್ಕನ್ನು ಕೊಡುವ ಮಹತ್ತರವಾದ ಕಾನೂನನ್ನು ತಂದ ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರ ನಂತರ ಭಾರತಕ್ಕೆ ಜಗತ್ತು ಗಮನಿಸುವಂತಹ ನಾಯಕತ್ವವನ್ನು ನೀಡಿದವರು ಎಂದರು.

 ಪ್ರಾರಂಭದಲ್ಲಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕರಾದ  ರೊಶನಿ ಒಲಿವರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘಟನೆಯ ಜಿಲ್ಲಾ ಉಸ್ತುವಾರಿಯಾದ ಡಾ. ಸುನೀತಾ ಶೆಟ್ಟಿ ವಂದಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ವೆರೋನಿಕಾ ಕರ್ನೇಲಿಯೋ, ರಮೇಶ್ ಕಾಂಚನ್, ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಲೂಯಿಸ್ ಲೋಬೋ, ಜಯಶ್ರೀ ಶೇಟ್, ಜನಾರ್ದನ ಭಂಡಾರ್ಕಾರ್, ಜಿತೇಶ್ ಕುಮಾರ್, ಅಶೋಕ್ ಸುವರ್ಣ, ಉಪೇಂದ್ರ ಗಾಣಿಗ, ವೆಂಕಟೇಶ್ ಪೆರಂಪಳ್ಳಿ, ಸುಧನ್ವ ಶೆಟ್ಟಿ, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


Spread the love