ಉಡುಪಿ ಜಿಲ್ಲಾ ಕಾಂಗ್ರೆಸಿನಿಂದ ಕರಾಳ ದಿನ – ನೋಟ್ ಬ್ಯಾನ್‍ನಿಂದ ಉದ್ಯೋಗ ನಷ್ಟ: ಅಸ್ಕರ್ ಫೆರ್ನಾಂಡಿಸ್
ಉಡುಪಿ: ಕೇಂದ್ರ ಸರಕಾರ 500 ಮತ್ತು 1000 ರೂ. ನೋಟ್ ಬ್ಯಾನ್ ಮಾಡಿದ ಪರಿಣಾಮ ಶೇ. 2ರಷ್ಟು ಜಿಡಿಪಿ ಕುಸಿತವಾಗಿದ್ದು, ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದೆ. ಇದರಿಂದ ಸುಮಾರು 7 ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಅಸ್ಕರ್ ಫೆರ್ನಾಂಡಿಸ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕರಾಳ ದಿನಾಚರಣೆ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಒಳ್ಳೆಯ ದಿನ ನೋಡುವ ಬದಲಿಗೆ ಕೆಟ್ಟ ದಿನ ನೋಡುವಂತಾಗಿದ್ದು, ವಸ್ತ್ರೋದ್ಯಮ ಸಂಪೂರ್ಣ ನೆಲಕ್ಕಚ್ಚಿದೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಮೋದಿ ಭರವಸೆ ಹುಸಿಯಾಗಿದ್ದು, ಇದ್ದ ಉದ್ಯೋಗ ಕಳೆದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅರೋಪಿಸಿದರು.
ಜಿಎಸ್ಟಿ ಹಾಗೂ ನೋಟ್ ಬ್ಯಾನ್ಗೆ ನಮ್ಮ ವಿರೋಧವಿಲ್ಲ. ಅದರೆ ಸರಕಾರದ ತಪ್ಪು ನೀತಿಗಳನ್ನು ಜನರಿಗೆ ತಿಳಿಸುವ ಕಾರ್ಯವನ್ನು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡುತ್ತದೆ ಎಂದು ಅವರು ತಿಳಿಸಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ್ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಸಭಾ ಸದಸ್ಯ ರಮೇಶ್ ಕಾಂಚನ್, ಜನಾರ್ದನ ಭಂರ್ಡಾಕರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಕಾಂಗ್ರೆಸ್ ನಾಯಕರಾದ ಹಬೀಬ್ ಆಲಿ, ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳದಲ್ಲಿ ಮಾಜಿ ಶಾಸಕ ಗೋಪಾಲ ಭಂಡಾರಿ ನೇತೃತ್ವಲ್ಲಿ ಪ್ರತಿಭಟನೆ ನಡೆಯಿತು.