ಉಡುಪಿ ಜಿಲ್ಲಾ ಕಾಂಗ್ರೆಸ್, ಸೇವಾದಳದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲಾ ಸೇವಾದಳದ ವತಿಯಿಂದ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಮತ್ತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಆಚರಣೆ ನಡೆಯಿತು.
ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ಕೆಪಿಸಿಸಿ ಸದಸ್ಯರಾದ ಮುರಳಿ ಶೆಟ್ಟಿ ಧ್ವಜಾರೋಹಣ ನೇರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಬೀರ್ ಅಹ್ಮದ್ ಅವರು ಗಾಂಧಿ ಪ್ರತಿಮೆಗೆ ಹಾರ ಹಾಕುವುದರ ಮೂಲಕ ಗೌರವ ಸೂಚಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಸಂದೇಶ ನೀಡಿದ ಅವರು ಮಹಾತ್ಮ ಗಾಂಧಿಯಂತಹ ಮಹಾನ್ ನಾಯಕರು ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಸ್ವಾತಂತ್ರ್ಯ ಪಡೆಯಲು ಅವಿರತ ಹೋರಾಟವನ್ನು ನಡೆಸಿ ಬ್ರಿಟಿಷರ ಸಂಕೊಲೆಯಿಂದ ಭಾರತವನ್ನು ಮುಕ್ತಗೊಳಿಸುವಲ್ಲಿ ಮಾಡಿದ ಶ್ರಮ ಅವಿಸ್ಮರಣೀಯವಾದುದು. ಕಳೆದ 72 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಅಭಿವೃದ್ಧಿಯನ್ನು ಮಾಡುವುದರ ಮೂಲಕ ದೇಶವನ್ನು ಜಗತ್ತಿನ ಎದರು ಗುರುತಿಸುವಂತಹ ಕಾರ್ಯ ಮಾಡಿದೆ ಎನ್ನಲು ಹೆಮ್ಮೆ ಎನಿಸುತ್ತದೆ ಎಂದರು.
ಇದೇ ವೇಳೆ ಜಿಲ್ಲಾ ಸೇವಾದಳ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ ದೇಶದ ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಸೇವಾದಳದ ಪಾತ್ರ ಮಹತ್ತರವಾದುದು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ತೊಡಗಿಕೊಂಡಿದ್ದು ಬೇರೆ ಯಾವುದೇ ಪಕ್ಷವೂ ಇಷ್ಟೊಂದು ರೀತಿಯಲ್ಲಿ ತೊಡಗಿಸಿಕೊಂಡಿಲ್ಲ. ಇದನ್ನು ಇಂದಿನ ಯುವಜನತೆಗೆ ಮಾಹಿತಿ ನೀಡುವ ಕೆಲಸ ಸೇವಾದಳ ಮಾಡಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ದಿನೇಶ್ ಪುತ್ರನ್, ಭಾಸ್ಕರ್ ರಾವ್ ಕಿದಿಯೂರು, ನರಸಿಂಹ ಮೂರ್ತಿ, ಹರೀಶ್ ಕಿಣಿ, ಪೀರು ಸಾಹೇಬ್, ಯತೀಶ್ ಕರ್ಕೇರಾ, ಸದಾಶಿವ ಕಟ್ಟೆಗುಡ್ಡೆ, ಸೇವಾದಳದ ಶರತ್ ಶೆಟ್ಟಿ, ಕಿಶೋರ್, ರಿಯಾಜ್ ಹಾಗೂ ಇತರರು ಉಪಸ್ಥಿತಿರದ್ದರು.