ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೇ ಡ್ರೋನ್ ಕ್ಯಾಮರಾ ಬಳಸಿದಲ್ಲಿ ಕಠಿಣ ಕ್ರಮ- ಜಿಲ್ಲಾಧಿಕಾರಿ ಜಿ.ಜಗದೀಶ
ಉಡುಪಿ : ಕೋವಿಡ್-2019 ( ಕೊರೋನಾ ವೈರಸ್ ಕಾಯಿಲೆ ) ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ರಾಜ್ಯಾದ್ಯಂತ ಲಾಕ್ಡೌನ್ ಘೋಷಿಸಿದ್ದು, ಅದರಂತೆ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144 (3) ರಂತೆ ನಾಗರೀಕರ ಸಂಚಾರವನ್ನು ನಿರ್ಭಂಧಿಸಿ ಆದೇಶವನ್ನು ಹೊರಡಿಸಲಾಗಿದೆ.
ಈ ನಡುವೆ ಕೆಲವೊಂದು ವ್ಯಕ್ತಿಗಳು / ಸಂಸ್ಥೆಗಳು ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಪಡೆಯದೇ ಡ್ರೋನ್ ಕ್ಯಾಮರಾಗಳನ್ನು ಬಳಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿರುತ್ತದೆ.ಈ ಬಗ್ಗೆ ಸಾಕಷ್ಟು ದೂರುಗಳು ಸ್ವೀಕೃತವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣಕ್ಕೆ ಆಸ್ಪದ ನೀಡಿದಂತಾಗುತ್ತದೆ. ಡ್ರೋನ್ ಕ್ಯಾಮರಾಗಳನ್ನು ಉಪಯೋಗಿಸುವ ಬಗ್ಗೆ ಜಿಲ್ಲಾಡಳಿತದಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗಿರುತ್ತದೆ.
ಅಲ್ಲದೇ ಡ್ರೋನ್ ಕ್ಯಾಮರಾಗಳನ್ನು ಹೊಂದಿರುವವರು ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಯಲ್ಲಿ ನೊಂದಣಿ ಮಾಡಿಸಬೇಕಾಗಿರುತ್ತದೆ. ಆದುದರಿಂದ ಡ್ರೋನ್ ಕ್ಯಾಮರಾಗಳನ್ನು ಹೊಂದಿರುವವರು ಅವುಗಳ ಬಗ್ಗೆ ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಯಲ್ಲಿ ನೊಂದಣಿ ಮಾಡಿಸಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಅವಶ್ಯಕತೆಗನುಸಾರ ಅವುಗಳನ್ನು ಬಳಸುವಂತೆ ಈ ಮೂಲಕ ತಿಳಿಯಪಡಿಸಿದೆ.
ಅನುಮತಿ ಪಡೆಯದೇ ಡ್ರೋನ್ ಕ್ಯಾಮರಾಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು , ನಿಯಮಾನುಸಾರ ಕಠಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.