ಉಡುಪಿ ಜಿಲ್ಲಾಡಳಿತದಿಂದ ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ ತರಬೇತಿ ಶಿಬಿರಕ್ಕೆ ಚಾಲನೆ

Spread the love

ಉಡುಪಿ ಜಿಲ್ಲಾಡಳಿತದಿಂದ ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ ತರಬೇತಿ ಶಿಬಿರಕ್ಕೆ ಚಾಲನೆ

ಉಡುಪಿ :ಅಧಿಕಾರಿಗಳು ಮನಸ್ಸು ಮಾಡಿ,. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಲ್ಲಿ ರಾಷ್ಟ್ರದಲ್ಲಿನ ಶೇ.90 ರಷ್ಟು ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಸಮಾಜದಲ್ಲಿ ಹೊಸ ಬದಲಾವಣೆ ಸಾಧ್ಯ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಸೋಮವಾರ ಉಡುಪಿಯ ಪುರಭವನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ, ಭಾರತೀಯ ನಾಗರೀಕ ಸೇವಾ ಪರೀಕ್ಷೆ ಹಾಗೂ ಕರ್ನಾಟಕ ಸೇವಾ ಪರೀಕ್ಷೆಗಳ ಸಿದ್ದತೆ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಉತ್ತರದಾಯಿಗಳಾಗಿದ್ದಾರೆ ಆದರೆ ಆಡಳಿತ ನಡೆಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ, ಅಧಿಕಾರಿಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಪರಸ್ಪರ ಜನರ ಹಿತ ಅರಿತು ಕೆಲಸ ಮಾಡಬೇಕು, ಅಧಿಕಾರಿಗಳು ಕೆಲವು ಘಟನೆಗಳು ಸಂಭವಿಸಿದಾಗ ಭ್ರಮ ನಿರಸನರಾಗಬಾರದು ಎಂದು ಹೇಳಿದರು.

ಉಡುಪಿ ಮತ್ತು ದ.ಕ ಜಿಲ್ಲೆಗಳು ಶಿಕ್ಷಣ ,ಆರೋಗ್ಯ ಹಾಗೂ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ಸಹ ಇಲ್ಲಿನ ವಿದ್ಯಾರ್ಥಿಗಳು ನಾಗರೀಕ ಸೇವೆಯಲ್ಲಿ ತೊಡಗಿಕೊಳ್ಳುವುದು ಕಡಿಮೆ, ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಸಾದನೆ ಮಾಡುವ ಅರ್ಹತೆ ಇದ್ದರೂ ಸಹ ಆದ್ಯತೆ ನೀಡುತ್ತಿಲ್ಲ , ಮನೆಮನೆಗಳಲ್ಲಿ ಹಾಗೂ ಕಾಲೇಜುಗಳ ಈ ಕುರಿತು ಅರಿವು ಹಾಗೂ ಪ್ರೇರಣೆ ಮೂಡಿಸಬೇಕಿದೆ, ಜಿಲ್ಲೆಯಲ್ಲಿ 5 ಕೋಟಿ ವೆಚ್ಚದಲ್ಲಿ ನೂತನ ಗ್ರಂಥಾಲಯ ನಿರ್ಮಾಣವಾಗುತ್ತಿದ್ದು, ಇದರಲ್ಲಿ ನಾಗರೀಕ ಸೇವಾ ಪರೀಕ್ಷಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳ ಅದ್ಯಯನಕ್ಕೆ ಪ್ರತ್ಯೇಕ ವಿಭಾಗ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

2017 ರ ನಾಗರೀಕ ಸೇವಾ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ರಾಜ್ಯದ ನಂದಿನಿ ಹಾಗೂ 37 ನೇ ರ್ಯಾಂಕ್ ಪಡೆದ ನವೀನ್ ಭಟ್ ರವರನ್ನು ಸನ್ಮಾನಿಸಲಾಯಿತು,

ನಂತರ ಮಾತನಾಡಿದ ನಂದಿನಿ ಅವರು, ಐ.ಎ.ಎಸ್ ಎನ್ನುವುದು ಕಬ್ಬಿಣದ ಕಡಲೆಯಲ್ಲ, ಇದು ಹೊರಗಿನಿಂದ ಕಠಿಣ ಒಳಗೆ ಮೃದು, ನಿಗಧಿತ ಗುರಿ, ಸಾಧಿಸುವ ಛಲ, ಆತ್ಮ ವಿಶ್ವಾಸ ಮತ್ತು ಸತತ ಪರಿಶ್ರಮದಿಂದ ಇದರಲ್ಲಿ ಯಶಸ್ವಿಯಾಗಬಹುದು, ಸಮಾಜಕ್ಕೆ ಏನಾದರೂ ಸಹಾಯ ಮಾಡಬೇಕು ಎನ್ನುವ ಮನೋಭಾವ ಹೊಂದಿರುವವರು ನಾಗರೀಕ ಸೇವೆಯಿಂದ ತಮ್ಮ ಆದರ್ಶ ಸಮಾಜ ನಿರ್ಮಾಣದ ಕನಸನ್ನು ಸಾಕಾರ ಮಾಡಿಕೊಳ್ಳಬಹುದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಅಥವಾ ತನ್ನಿಂದ ಇದು ಸಾಧ್ಯವಿಲ್ಲ ಎಂಬ ಅಳುಕು ಬೇಡ , ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ , ಆತ್ಮ ವಿಶ್ವಾಸದಿಂದ ಮುನ್ನುಗ್ಗಿದರೆ ಖಂಡಿತ ಫಲ ಸಿಗುತ್ತದೆ ಎಂದು ಹೇಳಿದರು.

ನವೀನ್ ಭಟ್ ಮಾತನಾಡಿ, ನಿರಂತರ ಅಭ್ಯಾಸ ಹಾಗೂ ಪರೀಕ್ಷೆಯ ಕುರಿತು ಸೂಕ್ತ ಮಾರ್ಗದರ್ಶನ ಪಡೆಯುವುದರಿಂದ ನಾಗರೀಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬಹುದು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಮಾತನಾಡಿ, ಸಮಾಜದ ಹೊರಗಡೆ ನಿಂತು ಆಡಳಿತವನ್ನು ಟೀಕೆ ಮಾಡುವುದು ಸುಲಭ, ಆಡಳಿತದಲ್ಲಿ ಬದಲಾವಣೆ ತರುವ ಮನಸ್ಸಿದಲ್ಲಿ ಆಡಳಿತದ ಒಳಗೆ ಬಂದು ಕೆಲಸ ಮಾಡಿ, ಬದಲಾವಣೆ ತನ್ನಿ, ಉಡುಪಿ ಹಾಗೂ ದ.ಕನ್ನಡದಲ್ಲಿ ನಾಗರೀಕ ಸೇವೆಗೆ ಸೇರುವವರ ಸಂಖ್ಯೆ ಬಹಲ ಕಡಿಮೆ ಇದನ್ನು ಇಲ್ಲಿನ ಆಡಳಿತ ವ್ಯವಸ್ಥೆಯಲ್ಲೂ ಕಾಣಬಹುದಾಗಿದ್ದು, ಇಲಾಖೆಗಳಲ್ಲಿ ಹಲವು ಹುದೆಗಳು ಖಾಲಿ ಇವೆ, ಈ ನಿಟ್ಟಿನಲ್ಲಿ ಜಿಲ್ಲೆಯ ಯುವ ಜನತೆಗೆ ನಾಗರೀಕ ಪರೀಕ್ಷೆಗಳ ಕುರಿತು ಆಗಸ್ಟ್ ಕೊನೆಯ ವಾರದಿಂದ ತರಬೇತಿ ನೀಡಲು ನಿರ್ಧರಿಸಿದ್ದು, ಆಸಕ್ತರು ವೆಬ್ ಸೈಟ್ www.udupi.nic.in ನಲ್ಲಿ ನೊಂದಣಿ ಮಾಡಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಮಾತನಾಡಿ ವಿದ್ಯಾರ್ಥಿಗಳು ಪ್ರತಿನಿತ್ಯ ತಮ್ಮ ಮನೆಗಳಲ್ಲಿ ಬರುವ ದಿನಪತ್ರಿಕೆಗಳನ್ನು ಒದುವ ಮೂಲಕ ದೇಶದ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಕಲಿತಾಗ ಅದರ ಪರಿಹಾರಕ್ಕೆ ತಾನು ಕೈಜೋಡಿಸಬೇಕು ಎಂಬ ಮನಸ್ಸು ಬಂದಾಗ ನಾಗರಿಕ ಸೇವೆಗಳತ್ತ ಮನಸ್ಸು ಮಾಡಬೇಕು. ದೇಶದ ಸಮಸ್ಯೆಗಳಿಗೆ ಹೆಗಲು ಕೋಡುವ ಅಪೇಕ್ಷೆ ಇದ್ದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ನಾಗರಿಕ ಸೇವೆಗಳಿಗೆ ಸೇರ್ಪಡೆಯಾಗುವತ್ತ ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಪೂವಿತ , ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ಶಂಕರ್ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ್ ರಾವ್, ಪರ್ಕಳ ಲಯನ್ಸ್ ಕ್ಲಬ್ ಅಧ್ಯಕ್ಷ ಹರೀಶ್, ಉಡುಪಿ ತಹಸೀಲ್ದಾರ್ ಮಹೇಶ್ಚಂದ್ರ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿ ದೇವರಾಜ್ ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ಸ್ವಾಗತಿಸಿದರು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು.


Spread the love