ಉಡುಪಿ ಜಿಲ್ಲೆಯ ಜನರ ನೋವಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾಯಿಸಿ. – ಶ್ರೀನಿಧಿ ಹೆಗ್ಡೆ
ಉಡುಪಿ: ಜಿಲ್ಲೆಯಲ್ಲಿ ವರುಣನ ಆರ್ಭಟ ದೊಡ್ಡ ಮಟ್ಟದಲ್ಲಿ ಹಾನಿಗೀಡು ಮಾಡಿದರು ಕೂಡ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಇನ್ನು ಜಿಲ್ಲೆಯ ಜನರ ಸಮಸ್ಯೆಗೆ ಪರಿಹಾರ ಅಥವಾ ಕನಿಷ್ಠ ಪಕ್ಷ ಜನತೆಗೆ ಸಾಂತ್ವನ ಹೇಳುವ ಕೆಲಸಕ್ಕೂ ಮುಂದಾಗಲಿಲ್ಲ ಎನ್ನುವುದು ವಿಪರ್ಯಾಸ ಎಂದು ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರದ ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉಡುಪಿಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಕುರಿತು ಕಾಳಜಿ ವಹಿಸದೇ ಇರುವುದು ನಮ್ಮ ಜಿಲ್ಲೆಯ ದುರಾದೃಷ್ಟವೆ ಸರಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದ ಕಾರಣಕ್ಕೆ ರಾಜ್ಯ ಸರ್ಕಾರ ಜಿಲ್ಲೆಯನ್ನು ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಈ ಹಿಂದೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾದಾಗ ಅಂದು ಕೂಡ ಜಿಲ್ಲಾ ಉಸ್ತುವಾರಿ ಸಚಿವರ ಅನುಪಸ್ಥಿತಿ ಇತ್ತು ಅದು ಇಂದು ಮುಂದುವರೆದಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ಶಾಲಾ ಮಕ್ಕಳಿಗೆ 3-4 ದಿನ ರಜೆ ಘೋಷಣೆ ಆಗಿದೆ, ಉಸ್ತುವಾರಿ ಸಚಿವರು ಕೂಡ ರಜೆಯಲ್ಲಿ ಯಾವ ಊರಿಗೆ ಹೋಗಿರುವರು ಎಂಬ ಪ್ರಶ್ನೆಗಳೂ ಕೇಳಬೇಕಾಗಿದೆ. ಜಿಲ್ಲೆಯಲ್ಲಿ ನೂರಾರು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ, ಹಲವಾರು ಮನೆಗಳಿಗೆ ಹಾನಿ ಉಂಟಾಗಿದೆ, ನೂರಾರು ಕುಟುಂಬಗಳ ಜೀವನ ಅಸ್ತವ್ಯಸ್ತ ಆಗಿದ್ದರು ಸಚಿವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಒಂದೇ ಒಂದು ಸಭೆ ನಡೆಸಿಲ್ಲ.
ಸಚಿವರು ತಮ್ಮ ನಾಯಕರ ಮುಖ್ಯಮಂತ್ರಿಯ ಗದ್ದುಗೆ ಆಟದ ಬೇಗುದಿ ಕಾರ್ಯದಲ್ಲಿ ನಿರತರಾಗಿರಬೇಕು ಅಥವಾ ಗೃಹ ಲಕ್ಷ್ಮಿ ಯೋಜನೆಗೆ ಹಣವನ್ನು ಹೊಂದಿಸಲು ವಾಲ್ಮಿಕಿ ನಿಗಮದ ಹಣವನ್ನು ತಾವು ವಿನಿಯೋಗಿಸುವ ಪ್ರಯತ್ನದಲ್ಲಿ ಇದ್ದಾರೆಯೇ..?? ಎಂದು ಕೇಳಬೇಕಾದ ಪರಿಸ್ಥಿತಿ ಬಂದಿದೆ.
ಕರಾವಳಿಯಲ್ಲಿ ಡೆಂಗ್ಯೂ ಆರ್ಭಟ ಹೆಚ್ಚುತ್ತಿದ್ದರೂ ಆರೋಗ್ಯ ಸಚಿವರು ಮಂಗಳೂರಿಗೆ ಬಂದು ಈಜುಕೊಳದಲ್ಲಿ ತನ್ನ ಸಮಯ ಕಳೆದಿರುವುದು ಒಂದು ಕಥೆ ಆದರೆ, ಇತ್ತ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಸಂತ್ರಸ್ತರ ಬೇಟಿ ಮಾಡದೆ ರಾಜಧಾನಿಯಲ್ಲೇ ಕುಳಿತು ಮಾಧ್ಯಮ ಹೇಳಿಕೆ ನೀಡಿ ಹಾರಿಕೆ ಉತ್ತರ ನೀಡುತ್ತಾ ಇರುವುದು ಜಿಲ್ಲಾ ಜನತೆಯ ವಿಪರ್ಯಾಸವೇ ಸರಿ ಹಾಗೂ ಇದು ಜಿಲ್ಲಾ ಉಸ್ತುವಾರಿ ಸಚಿವರ ಬಾಲಿಶತನವನ್ನು ತೋರಿಸುತ್ತದೆ. ಜಿಲ್ಲೆಯ ಜನರ ನೋವಿಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು ಎಂದು ಈ ಮೂಲಕ ಬಂಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.