ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ ಜನಗಣತಿ ಕಾರ್ಯ – ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ: ದೇಶದ ಜನಗಣತಿ ಅಂಗವಾಗಿ ಜಿಲ್ಲೆಯಲ್ಲಿ ಏಪ್ರಿಲ್ 15 ರಿಂದ ಮೇ 29 ರ ವರೆಗೆ ಮನೆಗಳ ಗಣತಿ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಗಣತಿ ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿಯ ಜನಗಣತಿಯಲ್ಲಿ, ಗಣತಿ ಅಧಿಕಾರಿಗಳು ಮುದ್ರಿತ ಪೇಪರ್ನಲ್ಲಿ ಹಾಗೂ ಮೊಬೈಲ್ ಅಪ್ಲಿಕೇಶನ್ ಎರಡು ರೀತಿಯಲ್ಲಿ ಜನಗಣತಿ ನಡೆಸಲಿದ್ದು, ಮೊಬೈಲ್ ಅಪ್ಲಿಕೇಶನ್ನಲ್ಲಿ ದಾಖಲಿಸುವುದರಿಂದ ವಿವರಗಳು ಶೀಘ್ರವಾಗಿ ದೊರೆಯಲಿದೆ, ಇದರ ಆಯ್ಕೆ ಗಣತಿ ಅಧಿಕಾರಿಗಳಿಗೆ ನೀಡಿದ್ದು, ಒಬ್ಬ ಗಣತಿದಾರರು ಪ್ರತಿ ದಿನ 150 ರಿಂದ 180 ಮನೆಗಳ ಗಣತಿ ಮಾಡಲಿದ್ದು, 650 ರಿಂದ 800 ಜನರ ಗಣತಿ ಮಾಡಲಿದ್ದಾರೆ, ಗಣತಿದಾರರಿಗೆ ನಿಗಧಿತ ಪ್ರದೇಶಗಳ ವಿಂಗಡಣೆ ಮಾಡಲಿದ್ದು, ಜಿಲ್ಲೆಯಲ್ಲಿ ಈಗಾಗಲೇ 2 ಮಂದಿ ಮಾಸ್ಟರ್ ಟ್ರೈನ್ಗಳಿಗೆ ಗಣತಿ ಕಾರ್ಯದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗಣತಿ ಸಂದರ್ಭದಲ್ಲಿ ನಾಗರೀಕರಿಂದ ಪಡೆಯುವ ಮಾಹಿತಿಗಳಲ್ಲಿ ಗೋಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು, ಗಣತಿ ಸಂದರ್ಭದಲ್ಲಿ ನಾಗರೀಕರಿಂದ ಯಾವುದೇ ದಾಖಲೆ ಅಥವಾ ಪ್ರಮಾಣಪತ್ರಗಳನ್ನು ಪಡೆಯಲಾಗುವುದಿಲ್ಲ ಹಾಗೂ ಬಯೋಮೆಟ್ರಿಕ್ ಸಂಗ್ರಹ ಕೂಡ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಗಣತಿ ಕಾರ್ಯಕ್ಕಾಗಿ 2194 ಗಣತಿದಾರರು ಹಾಗೂ 356 ಮೇಲ್ವಿಚಾರಕನ್ನು ನೇಮಕ ಮಾಡಲಾಗಿದ್ದು, ಇವರಿಗೆ ಶೀಘ್ರದಲ್ಲಿ ಸಮಗ್ರ ತರಬೇತಿ ನೀಡಲಾಗುವುದು ಎಂದ ಜಿಲ್ಲಾಧಿಕಾರಿ, ಗಣತಿ ಕಾರ್ಯವನ್ನು ನಿಗಧಿತ ಅವಧಿಯೊಳಗೆ ಮುಕ್ತಾಯಗೊಳಿಸಬೇಕಿದ್ದು, ಗಣತಿಯ ಅವಧಿಯು ವಿಸ್ತರಣೆ ಆಗುವುದಿಲ್ಲ, ಆದ್ದರಿಂದ ಗಣತಿ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ನಿಗಧಿತ ಅವಧಿಯಲ್ಲಿ ಗಣತಿ ಕಾರ್ಯವನ್ನು ಮುಕ್ತಾಯಗೊಳಿಸುವಂತೆ ತಿಳಿಸಿದರು.
ಜನಗಣತಿ ಕುರಿತು ಜಿಲ್ಲಾ ನೋಡೆಲ್ ಅಧಿಕಾರಿ ಪ್ರಮೇಶ್ ಚಂದ್ರ ಬಾಬು ಮಾತನಾಡಿ, ದೇಶದಲ್ಲಿ 1872 ರಿಂದ ಜನಗಣತಿ ಆರಂಭಗೊಂಡಿದ್ದು, ಪ್ರಸ್ತುತ 2021 ರ ಜನಗಣತಿಯು ದೇಶದ 16 ನೆಯ ಹಾಗೂ ಸ್ವಾತಂತ್ರ್ಯಾ ನಂತರದ 8 ನೇ ಜನಗಣತಿಯಾಗಿದೆ, ಭಾರತದ ಜನಗಣತಿ ವಿಧಾನವು ವಿಶ್ವದ ಅತ್ಯುತ್ತಮ ಜನಗಣತಿ ವಿಧಾನ ಎಂದು ಪರಿಗಣಿತವಾಗಿದ್ದು, ಜನಗಣತಿ ಕಾಯ್ದೆಯಡಿ ಜನಗಣತಿ ನಡೆಯುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಡಿಡಿಪಿಐ ಶೇಷಶಯನ ಕಾರಿಂಜ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಉಪಸ್ಥಿತರಿದ್ದರು.