ಉಡುಪಿ ಜಿಲ್ಲೆಯಲ್ಲಿ ಕೊರೋನಾ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಉಸ್ತುವಾರಿ ಸಚಿವರು ನಿರ್ಲಕ್ಷಿಸಿರುವುದು ದುರದೃಷ್ಟಕರ – ವಿಘ್ನೇಶ್ ಕಿಣಿ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕರುಳಾದ ಮಾಜಿ ಸಚಿವರು, ಮಾಜಿ ಶಾಸಕರನ್ನು ಸಂಪೂರ್ಣವಾಗಿ ನಿರ್ಲಕ್ಷ ಮಾಡಿರುವುದು ದುರದೃಷ್ಟಕರ ಸಂಗತಿ ಎಂದು ಕೆಪಿಸಿಸಿ ಸಾಮಾಜಿಕ ಜಾಲತಾಣ ಉಡುಪಿ ಜಿಲ್ಲೆ ಇದರ ಸಂಚಾಲಕ ವಿಘ್ನೇಶ್ ಕಿಣಿ ಹೇಳಿದ್ದಾರೆ.
ಕೋರೋನಾ ನಿಯಂತ್ರಣ ವಿಚಾರದಲ್ಲಿ ರಾಜ್ಯಮಟ್ಟದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ , ಸರಕಾರದ ಪ್ರಮುಖ ನಿರ್ಧಾರಗಳಿಗೆ ಬೆಂಬಲ ನೀಡಿಕೊಂಡು ಬಂದಿದೆ. ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಕೂಡ ಜಿಲ್ಲಾಡಳಿತ ತೆಗೆದುಕೊಂಡ ಪ್ರಮುಖ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದೆ.
ಜಿಲ್ಲೆಯಲ್ಲಿ ಕೊರೋನಾ ಸೋಕಿಂತರ ಸಂಖ್ಯೆ 1000 ಕ್ಕಿಂತಲೂ ಹೆಚ್ಚಾಗಿದ್ದು ಜಿಲ್ಲಾಡಳಿತ ತನ್ನದೆ ಆದ ನಿರ್ಧಾರವನ್ನು ಕೈಗೊಂಡಿದ್ದು ಅದರ ಯಾವುದೇ ನಿರ್ಧಾರಕ್ಕೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಅಪಸ್ವರ ಎತ್ತಿಲ್ಲ. ಈ ನಡುವೆ ಮತ್ತೆ ಪುನಃ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಅದನ್ನು ಸಮರ್ಪಕವಾಗಿ ನಿರ್ವಹಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆದರೆ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರು ಜಿಲ್ಲೆಯೊಂದಿಗೆ ಅಂತರ ಕಾಯ್ದುಕೊಂಡಿರುವುದು ಅಲ್ಲದೆ ಕೋರೊನ ಸಮಸ್ಯೆಯನ್ನು ನಿರ್ವಹಿಸುವಲ್ಲಿ ಎಲ್ಲಾ ಪಕ್ಷದವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಬೇಸರದ ಸಂಗತಿ.
ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವರುಗಳಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಅಲ್ಲದೆ ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಯು ಆರ್ ಸಭಾಪತಿಯಾಗಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಲಿ ಕನಿಷ್ಟ ಸೌಜನ್ಯಕ್ಕಾದರೂ ಕರೆದು ಸರ್ವ ಪಕ್ಷಗಳ ಸಭೆ ನಡೆಸುವ ಕೆಲಸವನ್ನು ಕೂಡ ಸಚಿವರು ಮಾಡದೇ ಇರುವುದು ವಿರೋಧ ಪಕ್ಷಗಳನ್ನು ನಿರ್ಲಕ್ಷದಿಂದ ಕಾಣುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇನ್ನಾದರೂ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಿ ಮುಂಬರುವ ದಿನಗಳಲ್ಲಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಅವರು ಆಗ್ರಹಿಸಿದ್ದಾರೆ.