ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 210 ಕೋವಿಡ್ ಪಾಸಿಟಿವ್?
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಕಬಂಧಬಾಹು ಚಾಚುತ್ತಲೇ ಇದ್ದು ಮಂಗಳವಾರ ಒಂದೇ ದಿನ ಸ್ಪೋಟಗೊಳ್ಳುವ ಸಾಧ್ಯತೆ ಇದ್ದು ಒಂದೇ ದಿನ 210 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಟಿವಿ ವಾಹಿನಿಗಳಿಗೆ ಮಾಹಿತಿ ನೀಡಿರುವ ಕಂದಾಯ ಸಚಿವ ಆರ್ ಅಶೋಕ್ ಅವರು ಈಗಾಗಲೇ ಮಹಾರಾಷ್ಟ್ರದಿಂದ ಉಡುಪಿ ಜಿಲ್ಲೆಗೆ 15-20 ಸಾವಿರ ಜನ ಬಂದಿದ್ದು, ಅವರಿಂದಲೇ ಹೆಚ್ಚು ಪಾಸಿಟಿವ್ ಪ್ರಕರಣ ಜಿಲ್ಲೆಯಲ್ಲಿ ಕಂಡು ಬಂದಿದೆ. ಮಂಗಳವಾರ ಒಂದೇ ದಿನ 210 ಪಾಸಿಟಿವ್ ಬರುವ ಸಾಧ್ಯತೆ ಇದ್ದು, ಈ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಭೆ ನಡೆಸಿದ್ದು ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಿನ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ, ಮಹಾರಾಷ್ಟ್ರ ದಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 260 ಕೋವಿಡ್19 ಸೋಂಕು ಪ್ರಕರಣಗಳು ದೃಢವಾಗಿತ್ತು. ಇಂದಿನ 210 ಹೊಸ ಪ್ರಕರಣಗಳು ಕಾರಣದಿಂದ ಜಿಲ್ಲೆಯ ಸೋಂಕಿತರ ಸಂಖ್ಯೆ 470ಕ್ಕೆ ಏರಿಕೆ ಕಂಡಿದೆ.
ಆದರೆ ರಾಜ್ಯ ಹೆಲ್ತ್ ಬುಲೆಟಿನ್ ಸಂಜೆ 5 ಗಂಟೆಯ ಬಳಿಕ ಅಧಿಕೃತವಾಗಿ ಬಿಡುಗಡೆಯಾದ ಬಳಿಕವಷ್ಟೇ ಎಷ್ಟು ಪ್ರಕರಣಗಳು ಎನ್ನುವುದು ದೃಢವಾಗಲಿದೆ.