ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಕೊರೋನಾತಂಕ? – 1487 ಮಂದಿಯ ವರದಿ ನಿರೀಕ್ಷೆಯಲ್ಲಿ ಜಿಲ್ಲಾಡಳಿತ
ಉಡುಪಿ: ಉಡುಪಿ ಜಿಲ್ಲೆಯ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು ಗುರುವಾರ ಮುಂಬೈ ಮತ್ತು ಇತರ ರಾಜ್ಯಗಳಿಂದ ಬಂದ 26 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಜಿಲ್ಲೆಯಲ್ಲಿ ಶುಕ್ರವಾರವೂ ಕೂಡ ಕೊರೋನಾ ಆತಂಕ ಮುಂದುವರೆದಿದೆ.
ಬೇರೆ ಬೇರೆ ದೇಶ ಹಾಗೂ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದವರ ಗಂಟಲ ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು 1487 ಮಂದಿಯ ವರದಿ ಶುಕ್ರವಾರ ಬರುವ ಸಾಧ್ಯತೆ ಇದೆ. ಇದರಲ್ಲಿ ಬಹುತೇಕ ಮಂದಿ ಮುಂಬೈನಿಂದ ಉಡುಪಿಗೆ ಬಂದವರಾಗಿದ್ದಾರೆ. ಗುರುವಾರ ಪತ್ತೆಯಾದ 26 ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ 21 ಮಂದಿ ಮುಂಬೈ ನಿಂದ ಬಂದವರಾದರೆ ಉಳಿದ ಐದು ಮಂದಿ ತೆಲಂಗಾಣ, ಕೇರಳ ಮತ್ತು ದುಬೈ ನಿಂದ ಬಂದವರು. ಆದ್ದರಿಂದ ಶುಕ್ರವಾರವೂ ಕೂಡ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಆತಂಕದಲ್ಲಿ ಆರೋಗ್ಯ ಇಲಾಖೆ ಇದೆ.
ಜಿಲ್ಲೆಯಲ್ಲಿ ಹಲವರಲ್ಲಿ ಯಾವುದೇ ರೋಗ ಲಕ್ಷಣವಿಲ್ಲದೆ ಕೊರೋನಾ ಕಾಣಿಸಿಕೊಳ್ಳುತ್ತಿದ್ದು ಕರೋನಾ ರೋಗಿಗಳ ಚಿಕಿತ್ಸೆಗೆ ತುರ್ತು ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಳ್ಳುತ್ತಿದೆ. ಕೊರೋನಾ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಮತ್ತೆರೆಡು ಕೋವಿಡ್ ಆಸ್ಪತ್ರೆಗಳು ಶುಕ್ರವಾರದಿಂದ ಕಾರ್ಯಾಚರಿಸಲಿವೆ. ಕುಂದಾಪುರ ತಾಲೂಕಿನಲ್ಲಿ 120 ಬೆಡ್ ಮತ್ತು ಕಾರ್ಕಳ ತಾಲೂಕಿನಲ್ಲಿ 100 ಬೆಡ್ ನ ಕೋವಿಡ್ ಆಸ್ಪತ್ರೆಗೆ ಚಾಲನೆ ಸಿಗಲಿದೆ. ಆಯಾ ತಾಲೂಕುಗಳಲ್ಲೇ ಕರೋನಾ ಚಿಕಿತ್ಸೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಿದ್ದು ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ ಉಡುಪಿಯ ಆಸ್ಪತ್ರೆಗೆ ರೋಗಿಗಳ ರವಾನೆ ಮಾಡಲು ನಿರ್ಧರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಕರೋನಾ ರೋಗಿಗಳ ಚಿಕಿತ್ಸೆಗೆ ಒಟ್ಡು 340 ಬೆಡ್ ನ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.