ಉಡುಪಿ: ಚಲಾವಣೆಯಲ್ಲಿಲ್ಲದ ಬ್ರಜಿಲ್ ದೇಶದ ಕರೆನ್ಸಿ ಮಾರಾಟ ಮಾಡುತ್ತಿದ್ದ ದ.ಕ. ಜಿಲ್ಲೆ ಪುತ್ತಿಗೆ ಗ್ರಾಮದ ಹಂಡೇಲು ಹೌಸ್‍ನ ಇಮ್ರಾನ್ (24) ಎಂಬಾತನನ್ನು ಉಡುಪಿಯ ಅಜ್ಜಕಾಡಿನಲ್ಲಿ ಸೋಮವಾರ ಮಧ್ಯಾಹ್ನ ಉಡುಪಿ ಡಿಸಿಐಬಿ ಪೋಲೀಸರು ಬಂಧಿಸಿದ್ದು, ಆತನಿಂದ 59.24 ಲಕ್ಷ ರೂ. ಮೌಲ್ಯದ 666 ನೋಟುಗಳ್ನು ವಶಪಡಿಸಿಕೊಳ್ಳಲಾಗಿದೆ.
ನಗರದ ಅಜ್ಜರಕಾಡಿನ ಹೊಟೇಲೊಂದರ ಬಳಿ ನೋಟು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಉಡುಪಿ ಡಿಸಿಐಬಿ ಇನ್ಸ್‍ಪೆಕ್ಟರ್ ಟಿ.ಆರ್. ಜೈಶಂಕರ್ ತಮ್ಮ ಸಿಬ್ಬಂದಿಯೊಂದಿಗೆ ಧಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ 1989ರಲ್ಲಿಯೇ ಬ್ರಜಿಲ್‍ನಲ್ಲಿ ಚಲಾವಣೆ ನಿಲ್ಲಿಸಲಾಗಿರುವ ಬ್ರೆಜಿಲ್ ದೇಶದ ಕರೆನ್ಸಿ ಕುಸ್ರಾಡೊ ಬ್ಯಾಂಕೋ ಸೆಂಟ್ರಲ್ ಡೊ ಬ್ರಜಿಲ್ (BANCO CENTRAL DO BRASIL)ಎಂದು ಬರೆದಿರುವ 500 ಮುಖಬೆಲೆಯ 574 ನೋಟುಗಳು, 100 ಮುಖಬೆಲೆಯ 92 ನೋಟುಗಳು ಸೇರಿ ಒಟ್ಟು 2,96,200 ಮೌಲ್ಯದ ( ಭಾರತೀಯ ಮೌಲ್ಯ 59.24 ಲಕ್ಷ ರೂ.) ನೋಟುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಆರೋಪಿ ಇಮ್ರಾನ್‍ನನ್ನು ವಶಕ್ಕೆ ತೆಗದುಕೊಂಡು ಆತನನ್ನು ಉಡುಪಿ ನಗರ ಠಾಣೆಗೆ ಹಸ್ತಾಂತರಿಸಲಾಗಿದೆ. ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೋಲೀಸ್ ಅಧೀಕ್ಷ ಅಣ್ಣಾ ಮಲೈ ನಿರ್ದೇಶನದಲ್ಲಿ ಹೆಚ್ಚುವರಿ ಪೋಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೋಲೀಸ್ ಉಪಾಧೀಕ್ಷಕ ಕೆ.ಎಂ. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಉಡುಪಿ ಡಿಸಿಐಬಿ ಇನ್ಸ್‍ಪೆಕ್ಟರ್ ಟಿ.ಆರ್. ಜೈಶಂಕರ್ ಹಾಗೂ ಸಿಬ್ಬಂದಿಗಳಾದ ರವಿಚಂದ್ರ, ಸಂತೋಷ ಪುತ್ತೂರು, ಚಂದ್ರ ಶೆಟ್ಟಿ, ಸಂತೋಷ್ ಕುಂದರ್, ಸುರೇಶ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ ಮತ್ತು ವಾಹನ ಚಾಲಕ ಚಂದ್ರ ಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಪ್ರಸ್ತುತ ನೋಟುಗಳು ಬ್ರಜಿಲ್‍ನಲ್ಲಿ ಚಲಾವಣೆಯಲ್ಲಿ ಇಲ್ಲದಿದ್ದರೂಚಲಾವಣೆಯಲ್ಲಿರುವ ಕರೆನ್ಸಿ ಎಂದು ಹೇಳಿ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ. ಕಡಿಮೆ ಬೆಲೆಗೆ ಕೊಡುತ್ತೇನೆ ಎಂದು ಸಾರ್ವಜನಿಕರಿಗೆ ಆಮಿಷ ತೋರಿಸುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.