ಉಡುಪಿ ಧರ್ಮಪ್ರಾಂತ್ಯ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸಂಭ್ರಮ ವಿನಿಮಯ
ಉಡುಪಿ: ಸಮಾಜದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಪ್ರತಿಯೊಬ್ಬರು ತನ್ನ ಕೊಡುಗೆಯನ್ನು ನೀಡಬೇಕಾಗಿದೆ ಈ ಮೂಲಕ ಶಾಂತಿಯುತ ಭಾರತ ಕಟ್ಟುವ ಕೆಲಸ ನಿರ್ಮಾಣವಾಗಬೇಕಾಗಿದೆ ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಅವರು ಶುಕ್ರವಾರ ಶೋಕ ಮಾತಾ ಇಗರ್ಜಿ ಆವರಣದಲ್ಲಿರುವ ಬಿಷಪ್ ಹೌಸ್ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಮಿತ್ರರ ಜೊತೆಗಿನ ಕ್ರಿಸ್ಮಸ್ ಸ್ನೇಹಕೂಟದಲ್ಲಿ ಆಶೀರ್ವಚನ ನೀಡಿ ಜಗತ್ತಿನಲ್ಲಿ ಅಶಾಂತಿ ತಾಂಡವವಾಡುತ್ತಿದ್ದು ಪ್ರಭು ಏಸುವಿನ ಜನನ, ಬೋಧನೆಯ ಹಿಂದೆ ಶಾಂತಿಯ ಕಿರಣವಿದೆ. ಶಾಂತಿ ಇರುವಲ್ಲಿ ಭಾವೈಕ್ಯತೆ, ಸಹಬಾಳ್ವೆ, ಸಾಮರಸ್ಯ, ಸಮಾಧಾನವಿರುತ್ತದೆ.
ಸಮಾಜದಲ್ಲಿ ಹೆಚ್ಚುತ್ತಿರುವ ಅಶಾಂತಿ, ಹಿಂಸೆ, ಗಲಭೆ, ಅತ್ಯಾಚಾರ, ಅನಾಚಾರ, ಬಡತನ, ಶೋಷಣೆ, ನಿರುದ್ಯೋಗಕ್ಕೆ ಪರಿಹಾರ ಒದಗಿಸಲಿ ಎಂದು ಡಾ. ಜೆರಾಲ್ಡ್ ಲೋಬೊ ಹಾರೈಸಿದರು.
2020 ರಲ್ಲಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಸ್ವಂತ ಜಾಗವುಳ್ಳ ಬಡವರಿಗೆ ಮನೆ ನಿರ್ಮಿಸಿಕೊಡಲು, ಕ್ಯಾನ್ಸರ್ ಜಾಗೃತಿ, ತಪಾಸಣೆ, ಚಿಕಿತ್ಸೆಯ ಸ್ಪರ್ಶ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ನೆರವೇರಿಸಲು ಚಿಂತನೆ ನಡೆಸಲಾಗಿದೆ ಎಂದರು.
ಎಎಸ್ಪಿ ಕುಮಾರಚಂದ್ರ ಮಾತನಾಡಿ, ಕ್ರಿಸ್ಮಸ್ ಶುಭ ವಾರ್ತೆಯ ಕಾಲವಾಗಿದ್ದು ಏಸು ದೇವದೂತನಾಗಿ ಶಾಂತಿ, ಸಾಮರಸ್ಯದ ಅಗತ್ಯ ಮತ್ತು ಅರಿವಿನ ಬೀಜ ಬಿತ್ತಿದ್ದಾರೆ. 2020ರಲ್ಲಿ ಜಗತ್ತು ಶಾಂತಿ, ಸೌಹಾರ್ದ, ಸಾಮರಸ್ಯದಲ್ಲಿ ಸಂಭ್ರಮಿಸಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ದಿವಾಕರ ಹಿರಿಯಡ್ಕ ಮಾತನಾಡಿದರು. ಶೋಕಮಾತಾ ಇಗರ್ಜಿಯ ಮುಖ್ಯ ಗುರು ವಲೇರಿಯನ್ ಮೆಂಡೋನ್ಸಾ ಉಪಸ್ಥಿತರಿದ್ದರು. ಕೇಕ್ ಕತ್ತರಿಸಿ ಹಂಚಲಾಯಿತು.
ಫಾ. ರಾಯಿಸನ್ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಫಾ. ಚೇತನ್ ಲೋಬೋ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಮೈಕೆಲ್ ರೋಡ್ರಿಗಸ್ ವಂದಿಸಿದರು.