ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಬೃಹತ್ ಕಾರ್ಮಿಕ ಜನಜಾಗೃತಿ ಸಮಾವೇಶವನ್ನು ಎಮ್ ಜಿಎಮ್ ಕಾಲೇಜಿನ ಮೈದಾನದಲ್ಲಿ ನವೆಂಬರ್ 29ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಳೆದ 8 ತಿಂಗಳಿನಲ್ಲಿ ಕಾರ್ಮಿಕ ವೇದಿಕೆ ಕಾರ್ಮಿಕರ ಏಳಿಗೆಗಾಗಿ ಹಲವಾರು ಜನಪರ ಕೆಲಸಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ನವೆಂಬರ್ 29 ರಂದು ಭಾನುವಾರ ನಿರುದ್ಯೋಗಿತನ ಹೋಗಲಾಡಿಸುವ ನಿಟ್ಟಿನಲ್ಲಿ ನೇರ ನೇಮಕಾತಿ ಮೂಲಕ 100 ಕ್ಕೂ ಅಧಿಕ ಕಂಪೆನಿಗಳು ನೇತೃತ್ವದಲ್ಲಿ ಉದ್ಯೋಗ ಮೇಳ ಮತ್ಉತ ಕಾರ್ಮಿಕರ ನೋಂದಾವಣೆಯನ್ನು ಆಯೋಜಿಸಿದ್ದು, ಬಡ ಕಾರ್ಮಿಕರಿಗೆ ಉಚಿತ ಅಂಬುಲೆನ್ಸ್ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಅಲ್ಲದೆ ಕೃಷಿ ಮಾಹಿತಿ, ಕವಿಗೋಷ್ಠಿ, ಪ್ರಧಾನಮಂತ್ರಿ ವಿಮಾ ಯೋಜನೆಯನ್ನು ಕಿದಿಯೂರು ಉದಯಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ನೀಡಲು ನಿರ್ಧರಿಸಲಾಗಿದೆ.
ಕರ್ನಾಟಕ ಕಾರ್ಮಿಕರ ವೇದಿಕೆಯ ವತಿಯಿಂದ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿವಣ್ಣ ಅಂಬಾಳೆ(ವೀರಗಾಸೆ), ಶ್ರೀಪತಿ ಹೆಗ್ಡೆ ಹಕ್ಲಾಡಿ (ಪತ್ರಕರ್ತರು), ರಾಧ (ನಿವೃತ್ತ ಶಿಕ್ಷಕಿ), ವೀರಣ್ಣ ಕುರುವತ್ತಿಗೌಡರ್ (ಆಸುಕವಿ), ಸದಾಶೀವ ಶೆಟ್ಟಿ (ರೈತರು), ಗುರುರಾಜ್ ಸನೀಲ್ (ಉರಗ ತಜ್ಞರು), ಸೂರಿ ಶೆಟ್ಟಿ, ರವಿ ಕಟಪಾಡಿ, ನಿತ್ಯಾನಂದ ಒಳಕಾಡು, ಉದಯ್ ಕುಮಾರ್ ಶೆಟ್ಟಿ (ಸಮಾಜಸೇವೆ) ನೀಲಾವರ ಸುರೇಂದ್ರ ಅಡಿಗ (ಕನ್ನಡದ ಕಟ್ಟಾಳು), ಉದಯ್ ಕುಮಾರ್ ಶೆಟ್ಟಿ (ಉದ್ಯಮ ಶೀಲ), ಗೋಪಾಲ್ ಶೆಟ್ಟಿ ಬೆಂಗಳೂರು (ಕಾರ್ಮಿಕ ಬಂಧು), ರಾಘವೇಂದ್ರ ರಾವ್ ಬೆಂಗಳೂರು (ಕಾರ್ಮಿಕ ಕಣ್ಮಣಿ) ಗಳಿಗೆ ನೀಡಲಾಗುವುದು ಎಂದರು.
ಭಾನುವಾರ ಬೆಳಿಗ್ಗೆ ಧ್ವಜಾರೋಹಣ, ಉದ್ಯೋಗ ಮೇಳದ ಹಾಗೂ ಜನಜಾಗೃತಿ ಜರುಗಿದರೆ ಬಳಿಕ ಕವಿಗೋಷ್ಠಿ ನಡೆಯಲಿರುವುದು. ಮಧ್ಯಾಹ್ನ 2 ಗಂಟೆಯಿಂದ ನಗರದ ಕ್ಲಾಕ್ ಟವರ್ ಬಳಿಯಿಂದ 200 ಕ್ಕೂ ಹೆಚ್ಚು ಬೈಕುಗಳು ಮತ್ತು ಟ್ಯಾಬ್ಲೋ ಹಾಗೂ ಸಾಂಸ್ಕೃತಿಕ ತಂಡದೊಂದಿಗೆ ಸಮ್ಮೇಳನ ಸ್ಥಳಕ್ಕೆ ಮೆರವಣಿಗೆ ನಡೆಯಲಿರುವುದು. ಸಂಜೆ ನಢೆಯುವ ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿತರಣೆ, ಅಂಬುಲೆನ್ಸ್ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಚಂದ್ರಿಕಾ ಶೆಟ್ಟಿ, ಸುರೇಶ್ ಶೇರಿಗಾರ್, ರವಿ ಶಾಸ್ತ್ರಿ, ಪ್ರವೀಣ್ ಹಿರಿಯಡ್ಕ ಉಪಸ್ಥಿತರಿದ್ದರು.