ಉಡುಪಿ: ಪವರ್ ಮಹಿಳಾ ಉದ್ಯಮಿಗಳ ವೇದಿಕೆ ಇದರ ವತಿಯಿಂದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಇದರ ನೂತನ ರವೀಂದ್ರ ಮಂಟಪದಲ್ಲಿ ಪೆಭ್ರವರಿ 6 ಮತ್ತು 7 ರಂದು ಪವರ್ ಪರ್ಬ -16 ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ ಎಂದು ಪವರ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್ ಹೇಳಿದರು.
ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಮಹಿಳೆ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಆಕೆಗೆ ಸಮಾಜದ ಸಹಕಾರ ಮತ್ತು ಪ್ರೋತ್ಸಾಹ ಅತ್ಯಗತ್ಯವಾಗಿದ್ದು, ಮಹಿಳಾ ಉದ್ದಿಮೇದಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪವರ್ ಪರ್ಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವ್ಯಾಪಾರ ಕ್ಷೇತ್ರದ ಅಧ್ಯಯನ ಹಾಗೂ ಸಂಶೋಧನೆ ಬಗ್ಗೆ ವಿಚಾರಸಂಕಿರ್ಣ, ಆಹಾರ, ಕರಕುಶಲ ವಸ್ತುಗಳು, ವೇಷಭೂಷಣ, ಉಡುಗೆ ತೊಡುಗೆ, ಆಭರಣ, ಸೌಂದರ್ಯವರ್ಧಕ ಸಾಧನ, ಗ್ರಹಾಲಂಕಾರ ವಸ್ತು, ಚಿತ್ರಕಲೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, 300 ಮಹಿಳಾ ಉದ್ದಿಮೆದಾರರು, ಹಾಗೂ 3000 ಗ್ರಾಹಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮಹಿಳಾ ಉದ್ದಿಮೆದಾರರಲ್ಲದೆ ಗೋವಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮೊದಲಾದ ರಾಜ್ಯಗಳಿಂದ ಮಹಿಳಾ ಉದ್ದಿಮೆದಾರರು ಪಾಲ್ಗೊಳ್ಳಲ್ಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಸ್ ಪರ್ಟ್ ಸಮೂಹ ಸಂಸ್ಥಗಳ ಕಾರ್ಯದರ್ಶಿ ಉಷಪ್ರಭಾ ನಾಯ್ಕ್ ಉದ್ಘಾಟಿಸಲಿದ್ದು, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಸಹ್ಯಾದ್ರಿ ಸ್ಕೂಲ್ ಮ್ಯಾನೇಜ್ ಮೆಂಟ್ ನಿರ್ದೇಶಕ ಡಾ ಎಪಿ ಆಚಾರ್, ಎಂಜಿಎಮ್ ಕಾಲೇಜಿನ ಪ್ರಾಂಶುಪಾಲೆ ಕುಸಮಾ ಕಾಮತ್ ಉಪಸ್ಥಿತರಿರಲಿದ್ದಾರೆ.
ಫೆಬ್ರವರಿ ಸಂಜೆ 7 ಗಂಟೆಗೆ ಸಮಾರೋಪ ಕಾರ್ಯಕ್ರಮ ಜರುಗಲಿದ್ದು, ತರಂಗ ಪತ್ರಿಕೆಯ ಮುಖ್ಯ ಸಂಪಾದಕಿ ಡಾ ಸಂಧ್ಯಾಪೈ, ಜಿಲ್ಲಾಧಿಕಾರಿ ಡಾ ಆರ್ ವಿಶಾಲ್, ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪಸ್ಥಿತರಿರುವರು ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಸರಿತಾ ಸಂತೋಷ್, ಜಯಶ್ರೀ ಕೃಷ್ಣರಾಜ್, ಡಾ ಗಾಯತ್ರಿ ರಾಜಾ, ತಾರಾ ತಿಮ್ಮಯ್ಯ ಉಪಸ್ಥಿತರಿದ್ದರು.