ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ
ಉಡುಪಿ :- ಭಾರತದ ಪ್ರಥಮ ಪ್ರಧಾನಿ ಜವಹರಲಾಲ ನೆಹರೂ ರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಇಂದು ದೇಶದೆಲ್ಲೆಡೆ ಆಚರಿಸುತ್ತಿದ್ದು, ಉಡುಪಿಯ ಬಾಲಭವನದಲ್ಲಿ ಇಂದು ಮಕ್ಕಳ ಕಲರವ ತುಂಬಿತ್ತು.
‘ಬನ್ನಿ ಬನ್ನಿ ಬನ್ನಿರೆಲ್ಲ ನಮ್ಮ ಶಾಲೆಗೆ; ಅಂಗಳದಲ್ಲಿ ಆಡುವ ಮಕ್ಕಳ ಅಂಗನವಾಡಿಗೆ’ ಹಾಡಿನ ಮೂಲಕ ಅಂಬಲಪಾಡಿ ಅಂಗನವಾಡಿ ಪುಟಾಣಿಗಳ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಕಡೆಕಾರು ಅಂಗನವಾಡಿ ಮಕ್ಕಳಿಂದ ಬಾನಿನಲ್ಲಿ ಮೂಡಿಬಂದ ಚಂದಮಾಮ, ಕುತ್ಪಾಡಿ ಅಂಗನವಾಡಿ ಮಕ್ಕಳಿಂದ ನರಿಯು ಕಂಡ ದ್ರಾಕ್ಷಿ ಹಣ್ಣು ಅಭಿನಯಗೀತೆ, ಕಿದಿಯೂರು ಅಂಗನವಾಡಿ ಮಕ್ಕಳಿಂದ ಬಂಬಂ ಬೋಲೆ ನೃತ್ಯ, ಕರಾವಳಿ ಬೈಪಾಸ್ ಅಂಗನವಾಡಿ ಶಾಲಾ ಮಕ್ಕಳಿಂದ ಛದ್ಮವೇಷ, ಜನತಾ ಕಾಲನಿ ಮಕ್ಕಳಿಂದ ಚಂದಮಾಮ ಬಾ ಗೋಳಿ ಮಾಮ ಬಾ ಹಾಡಿಗೆ ನೃತ್ಯ, ಬಬ್ಬರ್ಯಗುಡ್ಡೆ ಅಂಗನವಾಡಿ ಶಾಲಾ ಮಕ್ಕಳು ಬೂಕ್ ಲಗೀ ಬೂಕ್ ಲಗೀ ಹಾಡಿಗೆ ನೃತ್ಯ ಮಾಡಿದರು. ಸುಮಾರು 60 ರಿಂದ 70 ಮಕ್ಕಳು ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದರು.
ಓಟ, ಕಪ್ಪೆ ಜಿಗಿತ, ಸಂಗೀತ ಕುರ್ಚಿ, ಅಭಿನಯ ಗೀತೆಯಲ್ಲಿ ಪಾಲ್ಗೊಂಡು ಬಹುಮಾನ ಪಡೆದ ಚಿಣ್ಣರಿಗೆ ಇದೇ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ವಕೀಲರ ಸಂಘ (ರಿ.) ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಮತ್ತು ರೋಟರಿ ಕ್ಲಬ್ ಕಲ್ಯಾಣಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ -2016 ‘ಮಕ್ಕಳ ರಕ್ಷಣೆ ಮತ್ತು ಪೋಷಣೆ’-ಚಿಂತನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಬಿ.ಕೆ.ನಾರಾಯಣ, ವಕೀಲರ ಸಂಘದ ಅಧ್ಯಕ್ಷರಾದ ದಯಾನಂದ ಕೆ., ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಇಕ್ಬಾಲ್ ಹಮ್ಮಾಜಿ ಮಕ್ಕಳ ಪೋಷಕರನ್ನು ಉದ್ದೇಶಿಸಿ ಮಾತನಾಡಿದ್ದರು.
ಸಿಡಿಪಿಒ ವೀಣಾ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಶೋಭ ಧನ್ಯವಾದ ಸಲ್ಲಿಸಿದರು. ಮೀರಾ ಕಾರ್ಯಕ್ರಮ ನಿರೂಪಿಸಿದರು.