ಉಡುಪಿ: ಜಿಲ್ಲೆಯಲ್ಲಿರುವ ಬೃಹತ್ ಕೈಗಾರಿಕೆಗಳು ಸ್ಥಳೀಯ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಇಲ್ಲವಾದಲ್ಲಿ ಅಂತಹ ಕಂಪೆನಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಇಂದು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ, ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹಲವು ಬೃಹತ್ ಉದ್ದಿಮೆಗಳಿಂದ ಸ್ಥಳೀಯ ಪರಿಸರ ಹಾನಿಯಾಗುತ್ತಿದೆ ಅಲ್ಲದೇ ಇಂತಹ ಉದ್ದಿಮೆಗಳು ತಮ್ಮ ಸಂಸ್ಥೆಯಲ್ಲಿ ಸ್ಥಳೀಯರಿಗೆ ಯಾವುದೇ ಉದ್ಯೋಗಾವಕಾಶ ನೀಡುತ್ತಿಲ್ಲ, ತಮ್ಮಲ್ಲಿನ ಸಾಮಾಜಿಕ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವ ನಿಧಿಯಲ್ಲಿ ಸ್ಥಳಿಯವಾಗಿ ಯಾವುದೇ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಅಲ್ಲದೇ ಗ್ರಾಮ ಪಂಚಾಯತ್ನಿಂದ ವಿಧಿಸಲಾಗುವ ತೆರಿಗೆಯನ್ನೂ ಸಹ ಕಟ್ಟುತ್ತಿಲ್ಲ , ಇಂತಹ ಬೃಹತ್ ಉದ್ದಿಮೆಗಳು ತಮ್ಮ ಈ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಕಂಪೆನಿಗಳ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಸಚಿವರು ಹೇಳಿದರು.
ಜಿಲ್ಲೆಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿಯಲ್ಲಿ ರೂ.88 ಕೋಟಿ ಮಂಜೂರು ಆಗಿದ್ದು, ಇದರಲ್ಲಿ ಸುಸಜ್ಜಿತ ಸಂಪರ್ಕ ರಸ್ತೆಗಳನ್ನು ನಿರ್ಮಿಸಲಾಗುವುದು, ಇದರಲ್ಲಿ ಮುದರಂಗಡಿ ಪೇಟೆಯಿಂದ ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನ ರಸ್ತೆ ಅಭಿವೃದ್ಧಿ 4.12 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಇಂದು ಶಿಲಾನ್ಯಾಸ ನೆರವೇರಿಸಿದೆ.ಮುದರಂಗಡಿ ಪೇಟೆಯ ಮುಖ್ಯ ರಸ್ತೆಯನ್ನು 1.65 ಕೋಟಿ ವೆಚ್ಚದಲ್ಲಿ ಅಗಲೀಕರಣಗೊಳಿಸಲಾಗುತ್ತಿದೆ, ಮುದರಂಗಡಿಯ ಸಮಗ್ರ ಅಭಿವೃದ್ಧಿ ಕುರಿತಂತೆ ಪ್ರತ್ಯೇಕ ಅಭಿವೃದ್ದಿ ಸಮಿತಿ ರಚಿಸಿಕೊಂಡು ಅದರ ಮೂಲಕ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಿ ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಮುದರಂಗಡಿಯಲ್ಲಿ ರೂ.69 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ,ಬಯಲು ರಂಗಮಂದಿರ, ಸಮಾಜ ಮಂದಿರ ನಿರ್ಮಾಣ ಮತ್ತು ಸರಕಾರಿ ಪಿ.ಯು ಕಾಲೇಜಿಗೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಹಾಗೂ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.1 ಕೋಟಿ ಯ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಅಗತ್ಯ ಜನಪರ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುದರಂಗಡಿ ಗ್ರಾ. ಪಂ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷ ಡೇವಿಡ್, ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು, ಎಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜೇಂದ್ರ ಬೇಕಲ್, ಲೋಕೊಪಯೋಗಿ ಇಲಾಖೆಯ ಅಧಿಕಾರಿಗಳಾದ ಸುರೇಶ್ ಶೆಟ್ಟಿ, ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಬಿಪಿಎಲ್ ಪಡಿತರ ಚೀಟಿ, ಭಾಗ್ಯಲಕ್ಷಿ ಬಾಂಡ್ , ಹಕ್ಕುಪತ್ರ ವಿತರಣೆ, ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ಸುತ್ತುನಿಧಿ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸಚಿವರು ಸವಲತ್ತುಗಳನ್ನು ವಿತರಿಸಿದರು.
ಉಪ ತಹಸೀಲ್ದಾರ್ ಬಾಲಕೃಷ್ಣ ರೈ ಸ್ವಾಗತಿಸಿದರು. ಗ್ರಾಮ ಪಂಚಾಯತ್ ನ ಪಿಡಿಓ ನಿರೂಪಿಸಿ,ವಂದಿಸಿದರು.