ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಸರಿಪಡಿಸಲು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಆಗ್ರಹ
ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಇತ್ತೀಚೆಗೆ ಅಗಲೀಕರಣಗೊಂಡು ಕಾಂಕ್ರೀಟಿಕರಣ ಕಾಮಗಾರಿ ನಡೆದಿದೆ. ಆದರೆ ಇನ್ನೂ ಕೆಲವು ಕಡೆ ಕಾಂಕ್ರಿಟೀಕರಣ ಮತ್ತು ಅಗಲಗೊಳಿಸುವ ಕಾರ್ಯ ನಡಯದೇ ಇರುವುದರಿಂದ ಸದ್ರಿ ಹೆದ್ದಾರಿಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತುಂಬಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಆರೋಪಿಸಿದ್ದಾರೆ.
ಕಾಂಕ್ರಿಟೀಕರಣ ಆದ ರಸ್ತೆಯ ಕೊನೆಯಲ್ಲಿ ಇಳಿಜಾರುಗಳು ಇದ್ದು, ವಾಹನಗಳು ಪಾತಾಳಕ್ಕೆ ಇಳಿದು ಮೇಲೆ ಬಂದಂತಾಗುತ್ತದೆ. ವಾಹನಗಳು ಇಳಿಯುವಲ್ಲಿ ಗುಂಡಿಗಳಾಗಿವೆ. ಅಲ್ಲದೆ ಮಧ್ಯದಲ್ಲಿ ಕಾಂಕ್ರಟೀಕರಣಗೊಳಿಸದೇ ಇರುವ ರಸ್ತೆಯು ಸಂಪೂರ್ಣ ನಾದುರಸ್ತಿಯಲ್ಲಿದ್ದು, ಗುಂಡಿಮಯವಾಗಿ ಮಳೆಯ ನೀರು ಸದ್ರಿ ಗುಂಡಿಗಳಲ್ಲಿ ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಅವೈಜ್ನಾನಿಕ ಕಾಮಗಾರಿಯಿಂದಾಗಿ ಜನರು ರಸ್ತೆಯಲ್ಲಿ ಹರಸಹವಾಸಪಡುವಂತಾಗಿದೆ. ದೊಡ್ಡ ದೊಡ್ಡ ಗುಂಡಿಗಳಿಗೆ ಮಳೆಗಾಲದಲ್ಲಿ ತಾತ್ಕಾಲಿಕ ಪರಿಹಾರ ಒದಗಿಸಬೇಕಾದ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಳೆಗಾಲಕ್ಕೆ ಸರಿಯಾದ ವ್ಯವಸ್ಥೆ ಯಾ ತಯಾರಿ ನಡೆಸದ ಗುತ್ತಿಗೆದಾರರು ಹಾಗೂ ಇಲಾಖೆ ಈಗ ನಮಗೆ ಸಂಭಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ದಿನನಿತ್ಯ ಸದ್ರಿ ರಸ್ತೆಯಲ್ಲಿ ಸಂಚರಿಸುವ ಆಸ್ಪತ್ರೆಯ ವಾಹನಗಳಿಗೆ, ರೋಗಿಗಳಿಗೆ, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಬಗ್ಗೆ ಅಧಿಕಾರಿಗಳನ್ನು ಕರೆದು ದುರವಸ್ಥೆ ಸರಿಪಡಿಸುವ ಕೆಲಸ ಮಾಡಬೇಕಾದ ನಮ್ಮ ಉಡುಪಿ- ಚಿಕ್ಕಮಗಳೂರು ಸಂಸದೆ ಕೇವಲ ಹೇಳಿಕೆಗಳನ್ನು ನೀಡುವುದಕ್ಕೆ ಸೀಮಿತವಾಗಿದ್ದಾರೆ. ಆದುದರಿಂದ ಸದ್ರಿ ಹೆದ್ದಾರಿಯ ದುರವಸ್ಥೆಯನ್ನು ಕೂಡಲೇ ಸರಿಪಡಿಸಲು ಇಲಾಖೆಯ ಅಧಿಕಾರಿಗಳು, ಸಂಸದೆಯರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ, ನ್ಯಾಯವಾದಿ ಮೆಲ್ವಿನ್ ಡಿಸೋಜ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.