ಉಡುಪಿ: `ಕಣ್ಣಿನಿಂದ ಕಡ್ಡಿಗಳು ಬರುತ್ತಿವೆ’ ಎಂಬ ಕಾರಣಕ್ಕೆ ಯುವತಿಯೊಬ್ಬಳು ನಗರದ ಪ್ರಸಾದ್ ನೇತ್ರಾಲಯಕ್ಕೆ ದಾಖಲಾಗಿದ್ದಾಳೆ. ಮನೆಯವರ ಪ್ರಕಾರ ಕಳೆದ ಸುಮಾರು ಒಂದು ವಾರದಿಂದ ಆಕೆಯ ಕಣ್ಣಿನಿಂದ ಕಡ್ಡಿಗಳು ಹೊರಬರುತ್ತಿವೆಯಂತೆ.
ಬಾರ್ಕೂರು ಸಮೀಪದ ಹೇರಾಡಿ ಬಡಗುಡ್ಡೆಯ ನಿವಾಸಿಯಾಗಿರುವ ಗೀತಾ ನಾಯ್ಕ್ ಅವರ ಮಗಳು ಶ್ರೀನಿಧಿ ಈ ಸಮಸ್ಯೆಯಿಂದ ಬಳಲುತ್ತಿರುವ ಯುವತಿ. ಬಡ ಕುಟುಂಬದವರಾಗಿದ್ದು, ಮಗಳ ಈ ಸಮಸ್ಯೆಯಿಂದ ಆಕೆಯ ತಾಯಿಗೆ ದಿಕ್ಕು ತೋಚದಾಗಿದೆ.
ಯುವತಿಯ ಸಮಸ್ಯೆ ತಿಳಿಯುತ್ತಿದ್ದಂತೆ ಸ್ಥಳೀಯರ ಸಹಕಾರದಿಂದ ಯುವತಿಯನ್ನು ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ದಾಖಲಿಸಲಾಗಿದೆ. ವೈದ್ಯ ಡಾ. ಕೃಷ್ಣ ಪ್ರಸಾದ್ ನೇತೃತ್ವದ ವೈದ್ಯರ ತಂಡ ಆಕೆಯನ್ನು ತಪಾಸಣೆ ನಡೆಸಿದೆ. ವೈದ್ಯರ ಪ್ರಕಾರ ಕಣ್ಣಿನಿಂದ ಕಡ್ಡಿ ಬರಲು ಸಾಧ್ಯವೇ ಇಲ್ಲ.
ಶ್ರೀನಿಧಿ ಈ ಹಿಂದೆಯೂ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದಳು. ಹುಟ್ಟುತ್ತಲೇ ಆಕೆಯ ಎಡಗಣ್ಣು ಇರಲಿಲ್ಲ. ಶಸ್ತ್ರ ಚಿಕಿತ್ಸೆ ನಡೆಸಿ ಪ್ಲಾಸ್ಟಿಕ್ ಕಣ್ಣನ್ನು ಅಳವಡಿಸಲಾಗಿತ್ತು. ಇದೀಗ ಆಕೆಯ ಬಲಗಣ್ಣು ಪ್ಲಾಸ್ಟಿಕ್ನದ್ದು. ಇನ್ನು ಆಕೆಯ ಬಲಗಣ್ಣಿನಲ್ಲಿರುವುದು ಕೇವಲ ಶೇ.30ರಷ್ಟು ದೃಷ್ಟಿ ಮಾತ್ರ. ಅದರೆ ಆಕೆ ಶೇ.90ರಷ್ಟು ಅಂಧೆ. ಕೆಲ ದಿನಗಳ ಹಿಂದೆ ಆಕೆ ಕಣ್ಣಿನ ಖಾಯಿಲೆಯೊಂದಕ್ಕೆ ಚಿಕಿತ್ಸೆ ಪಡೆದು ಹೋಗಿದ್ದಳು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಕೃಷ್ಣ ಪ್ರಸಾದ್ ತಿಳಿಸುತ್ತಾರೆ.
ಶ್ರೀನಿಧಿಯ ತಂದೆ ಕೆಲ ವರ್ಶದ ಹಿಂದೆ ಮೃತಪಟ್ಟಿದ್ದು, ಆಕೆಯ ತಾಯಿ ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಮನೆಯಲ್ಲಿ ಶ್ರೀ ನಿಧಿ ಸೇರಿ ಮೂರು ಮಂದಿ ಹೆಣ್ಣು ಮಕ್ಕಳಿದ್ದು, ತಾಯಿಯೇ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಮಗಳ ಈ ಸಮಸ್ಯೆಯಿಂದ ತಾಯಿ ಚಿಂತೆಗೊಳಗಾಗಿದ್ದಾರೆ. ಸದ್ಯ ಶ್ರೀನಿಧಿ ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿದ್ದು, ವೈದ್ಯರು ಈ ಕಾಯಿಲೆಯಿಂದ ಆಕೆಯನ್ನು ಹೊರತರಲು ಪ್ರಯತ್ನ ಮಾಡುತ್ತಿದ್ದಾರೆ.