ಉಡುಪಿ: ಇಲ್ಲಿನ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ದಾನಿಗಳನೆರವಿನಿಂದ ನೂತನವಾಗಿ ನಿರ್ಮಾಣ ಮಾಡಲಾದ ಅನ್ನಪೂರ್ಣ ಅಕ್ಷರದಾಸೋಹ ಭೋಜನ ಶಾಲೆಯನ್ನು ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷಿಣದಲ್ಲಿ ಮೂರು ಬ್ರಹ್ಮ ಕ್ಷೇತ್ರಗಳಿದ್ದು, ಅನ್ನಬ್ರಹ್ಮನ ಕ್ಷೇತ್ರ ಉಡುಪಿ, ಕಾಂಚನಬ್ರಹ್ಮನ ಕ್ಷೇತ್ರ ತಿರುಪತಿ ಹಾಗೂ ನಾದಬ್ರಹ್ಮನ ಕ್ಷೇತ್ರ ಪಂಡರಾಪುರವಾಗಿದೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ತಮ್ಮ ಮೂಲವನ್ನು ಎಂದಿಗೂ ಮರೆಯಬಾರದು ಎಂದು ಶಾಸ್ತ್ರ ಹೇಳುತ್ತದೆ. ತಾವು ಕಲಿತ, ತಾವು ವಾಸವಿದ್ದ ಮನೆ, ತಂದೆ ತಾಯಿಯರ ಸ್ಮರಣೆಯನ್ನು ಎಂದಿಗೂ ನಿಲ್ಲಿಸಬಾರದು. ಯಶಸ್ವಿನ ಮೂಲವಿರುವುದು ಮೂಲಸ್ಥಾನದಲ್ಲಿ ಎಂದರು. ವಳಕಾಡು ಶಾಲೆ ಮಾದರಿ ಶಾಲೆಯಗಳಿಗೆ ಮಾದರಿಯಾಗಿದ್ದು, ಸರ್ಕಾರಿ ಶಾಲೆ ಎಂದರೆ ಹಿಂಜರಿಯುವವರಿಗೆ ವಳಕಾಡು ಶಾಲೆ ಮಾದರಿಯಾಗಿದೆ ಎಂದರು.
ಭೋಜನ ಶಾಲೆ ನಿರ್ಮಾಣಕ್ಕೆ ನೆರವು ನೀಡಿದ ಶಾಲೆಯ ಹಳೆ ವಿದ್ಯಾರ್ಥಿ ಬಿ.ಆರ್. ಶೆಟ್ಟಿ ಹಾಗೂ ಪತ್ನಿ ಚಂಚಲಾ ಅವರನ್ನು ಸ್ವಾಮೀಜಿ ಸನ್ಮಾನಿಸಿದರು. ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷ ಯುವರಾಜ್, ಸದಸ್ಯೆ ಗೀತಾ ರವಿ ಶೇಟ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್, ಶಾಲಾ ಹಳೆ ವಿದ್ಯಾರ್ಥಿಗಳಾದ ಜಯಕರ ಶೆಟ್ಟಿ ಇಂದ್ರಾಳಿ, ಗಾಂಧಿ ಆಸ್ಪತ್ರೆಯ ಡಾ. ಹರೀಶ್ಚಂದ್ರ,ನಾಗೇಶ್ ಶೇಟ್, ಮಾರುತಿ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮೃತ್ ಶೆಣೈ, ನಿವೃತ್ತ ಮುಖ್ಯೋಪಾಧ್ಯಾಯಿನಿ ವಸಂತಿ ಬಾಯಿ, ಎಸ್‍ಡಿಎಂಸಿ ಅಧ್ಯಕ್ಷೆ ಇಂದೂ ರಮಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ನಿರ್ಮಲಾ ಬಿ. ರಾವ್ ಸ್ವಾಗತಿಸಿದರು.