ಉಡುಪಿ:  ಸೆಂಟ್ರಲ್ ಎಸಿ  ಕಟ್ಟಡಗಳಲ್ಲಿ 50 ಕ್ಕಿಂತ ಹೆಚ್ಚು ಗ್ರಾಹಕರು ಸೇರುವುದಕ್ಕೆ ನಿಷೇಧ – ಡಿಸಿ ಜಗದೀಶ್

Spread the love

ಉಡುಪಿ:  ಸೆಂಟ್ರಲ್ ಎಸಿ  ಕಟ್ಟಡಗಳಲ್ಲಿ 50 ಕ್ಕಿಂತ ಹೆಚ್ಚು ಗ್ರಾಹಕರು ಸೇರುವುದಕ್ಕೆ ನಿಷೇಧ – ಡಿಸಿ ಜಗದೀಶ್

ಉಡುಪಿ: ಜಿಲ್ಲೆಯಲ್ಲಿನ ಬಹುಮಹಡಿ ಕೇಂದ್ರಿಕೃತ ಹವಾನಿಯಂತ್ರಣ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿರುವ ಮಳಿಗೆಗಳಲ್ಲಿ ಏಕಕಾಲದಲ್ಲಿ 25 ಸಿಬಂದಿಗಳಿಗಿಂತ ಜಾಸ್ತಿ ಜನ ಕಾರ್ಯನಿರ್ವಹಿಸುವುದನ್ನು ಹಾಗೂ 50ಕ್ಕಿಂತ ಜಾಸ್ತಿ ಗ್ರಾಹಕರು ಸೇರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ ಆದೇಶ ನೀಡಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕೆಲವೊಂದು ಬಟ್ಟೆ ಅಂಗಡಿಗಳು, ಚಿನ್ನಾಭರಣ ಮಳಿಗೆಗಳು ಮತ್ತು ಎಲೆಕ್ಟ್ರಾನಿಕ್ ಮಳಿಗೆಗಳು ಮತ್ತಿತರ ಮಳಿಗೆಗಳು ಬಹುಮಹಡಿ ಕೇಂದ್ರಿಕೃತ ಹವಾನಿಯಂತ್ರಣ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಂತಹ ವಾತಾವರಣವು ಕೊರೋನಾ ವೈರಸ್ ಹರಡುವಿಕೆಗೆ ಪೂರಕವಾಗುವ ಸಂಭವವಿದ್ದು, ಇಂತಹ ಮಳಿಗೆಗಳಲ್ಲಿ ಏಕಕಾಲದಲ್ಲಿ 25 ಸಿಬಂದಿಗಳಿಗಿಂತ ಜಾಸ್ತಿ ಜನ ಕಾರ್ಯನಿರ್ವಹಿಸುವುದನ್ನು ಹಾಗೂ 50ಕ್ಕಿಂತ ಜಾಸ್ತಿ ಗ್ರಾಹಕರು ಸೇರುವುದನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಮುಂದಿನ ಆದೇಶದ ವರೆಗೆ ನಿಷೇಧಿಸಲಾಗಿದೆ.

ಸದರಿ ಮಳಿಗೆಗಳಲ್ಲಿ ಸಿಬಂದಿಗಳ ಸಂಖ್ಯೆಯನ್ನು 25ಕ್ಕೆ ಸೀಮಿತಿಗೊಳಿಸಿದಾಗ, ಉಳಿದ ಕರ್ತವ್ಯರಹಿತ ಇತರೆ ಸಿಬಂದಿಗಳ ವೇತನವನ್ನು ಸಂಬಂಧಿಸಿದ ಮಳಿಗೆಗಳ ಮಾಲಿಕರು ಪಾವತಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಸದರಿ ಮಳಿಗೆಗಳಿಗೆ ಆಗಮಿಸುವ ಗ್ರಾಹಕರಲ್ಲಿ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣ ಇರುವ ಗ್ರಾಹಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಇದನ್ನು ಮಳಿಗೆಗಳ ಮಾಲಿಕರು ವ್ಯವಸ್ಥಾಪಕರು ಖಚಿತಪಡಿಸಿಕೊಳ್ಳಬೇಕು.

ಮಳಿಗೆಯನ್ನು ಪ್ರವೇಶಿಸುವ ಮುನ್ನಾ ಗ್ರಾಹಕರು ಸ್ಯಾನಿಟೈಸರ್ ಬಳಸಿ ಒಳಪ್ರವೇಶಿಸುವುದಕ್ಕೆ ಮಳಿಗೆ ಮಾಲಿಕರು ವ್ಯವಸ್ಥಾಪಕರು ಏರ್ಪಾಡು ಮಾಡಿಕೊಳ್ಳುವುದು ಮತ್ತು ಖಾತ್ರಿ ಪಡಿಸಿಕೊಳ್ಳೂವುದು. ಮಳಿಗೆ ವಠಾರದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.


Spread the love