ಉಡುಪಿ: ಹಲಸು ಮೇಳ ಸಸ್ಯ ಸಂತೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ
ಉಡುಪಿ: ದೊಡ್ಡಣಗುಡ್ಡೆ ಶಿವಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಹಯೋಗದಲ್ಲಿ ಜುಲೈ 13 ರಿಂದ 15ರ ವರೆಗೆ ಆಯೋಜಿಸಿದ ಹಲಸು ಮೇಳ ಸಸ್ಯ ಸಂತೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹಲಸಿನಿಂದ ಮಾಡಲಾದ ವೈವಿಧ್ಯಮಯ ಖಾದ್ಯಗಳು ಬಾಯಲ್ಲಿ ನೀರೂರಿಸುವಂತೆ ಮಾಡಿದವು. 24ಕ್ಕೂ ಅಧಿಕ ಮಳಿಗೆಗಳಲ್ಲಿ ಹಲಸಿನ ಖಾದ್ಯ, ಉತ್ಪನ್ನಗಳು ಗಮನ ಸೆಳೆದವು. ಪ್ರತಿಯೊಂದು ಮಳಿಗೆಗಳಲ್ಲೂ ಭಿನ್ನ ರೀತಿಯ ಖಾದ್ಯ, ಆಹಾರ ಉತ್ಪನ್ನಗಳಿದ್ದವು. ವಿವಿಧ ತಳಿಯ ಹಲಸು, ಮನೆಯಲ್ಲೇ ತಯಾರಿಸಿದ ಹಲಸಿನ ಕುರುಕಲು ತಿನಿಸುಗಳು ಗ್ರಾಹಕರನ್ನು ವಿಶೇಷವಾಗಿ ಆಕರ್ಷಿಸಿತು. ಮೇಳಕ್ಕೆ ಬಂದವರೆಲ್ಲ ಹಲಸಿನ ಹಣ್ಣಿನ ಜತೆಗೆ, ಉಪ ಉತ್ಪನ್ನಗಳ ಸವಿಯನ್ನು ಸವಿದಿದ್ದು ವಿಶೇಷವಾಗಿತ್ತು.
ದೊಡ್ಡಬಳ್ಳಾಪುರ ರೈತ ರವಿಕುಮಾರ್ ತಂದಿದ್ದ ಚಂದ್ರ ಹಲಸು, ರುದ್ರಾಕ್ಷಿ ಹಲಸು, ಏಕಾದಶಿ ಹಲಸು ಎಲ್ಲರ ಗಮನ ಸೆಳೆಯಿತು. ಕೆಂಪು, ಹಳದಿ ಬಣ್ಣಗಳಲ್ಲಿ ಕಂಗೊಳಿಸುತ್ತಿದ್ದ ಸೊಳೆಗಳನ್ನು ನೋಡಿದಾಕ್ಷಣ ಒಮ್ಮೆ ಸವಿಯಲೇ ಬೇಕು ಎನಿಸುವಂತಿತ್ತು. ಹಾಗಾಗಿ, ಸ್ವಲ್ಪ ದುಬಾರಿ ಎನಿಸಿದರೂ ಗ್ರಾಹಕರು ಖರೀದಿಗೆ ಮುಗಿಬಿದ್ದರು. ಸುಮಾರು ಒಂದೂವರೆ ಟನ್ ಹಲಸು ತರಲಾಗಿದ್ದು, ಗ್ರಾಹಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ.
ಮರಿಕೇಸ್ ಕಂಪೆನಿಯ ಹಲಸಿನ ಬೀಜದ ಹೋಳಿಗೆ ಗಮನ ಸೆಳೆಯಿತು. ಹಲಸಿನ ಬೀಜಗಳನ್ನು ಪುಡಿಮಾಡಿ ಅದಕ್ಕೆ ಸಾವಯವ ಬೆಲ್ಲ ಸೇರಿಸಿ ಮಾಡಿದ್ದ ಹೋಳಿಗೆ ರುಚಿಯಾಗಿತ್ತು. ಇದೇ ಮರಿಕೇಸ್ ಕಂಪೆನಿಯ ನ್ಯಾಚುರಲ್ ಐಸ್ಕ್ರೀಂ ಕೂಡ ಗ್ರಾಹಕರನ್ನು ಆಕರ್ಷಿಸಿತು. ಹಲಸು, ಕಾಡು ಮಾವಿನಹಣ್ಣು, ಗಾಂಧಾರಿ ಮೆಣಸು, ನೇರಳೆ, ಬೊಂಡದಿಂದ ತಯಾರಿಸಲಾಗಿದ್ದ ಐಸ್ಕ್ರೀಂ ಅನ್ನು ಮಕ್ಕಳ ಜತೆಗೆ ಹಿರಿಯರೂ ಸವಿದು ಖುಷಿಪಟ್ಟರು.
ಇದರ ಜತೆಗೆ ಸಾಣೂರು ಹಲಸು ಬೆಳೆಗಾರರ ಸಂಘದಿಂದ ಕರಾವಳಿಯ ಪ್ರಸಿದ್ಧ ಹಲಸಿನ ತಳಿಗಳ ಜತೆಗೆ, ವಿಶೇಷ ಹಲಸಿನ ಶಿರಾ, ಮುಳಕ, ಸುಕ್ರುಂಡೆ, ಹಲಸಿನ ಅಪ್ಪಳ, ಗಟ್ಟಿ, ಚಿಪ್ಸ್ ಕೂಡ ಹೆಚ್ಚು ಮಾರಾಟವಾಯಿತು.
ಮೇಳದಲ್ಲಿದ್ದ ತುಪ್ಪದಿಂದ ಬೇಯಿಸಿದ್ದ ಹಲಸಿನ ಹೋಳಿಗೆ ರುಚಿಕರವಾಗಿತ್ತು. ಇದಲ್ಲದೆ ಮಾಂಬಳ, ಕಡಬು, ಉಪ್ಪಿನಕಾಯಿ, ಹಲ್ವ, ಬರ್ಫಿ ಹೀಗೆ ಬಗೆಬಗೆಯ ಖಾದ್ಯಗಳ ಸವಿಯನ್ನು ಒಂದೇ ಸೂರಿನಡಿ ಸವಿಯಲು ಅವಕಾಶ ಗ್ರಾಹಕರಿಗೆ ಸಿಕ್ಕಿತು.
ಕೆಲವರು ಸ್ಥಳದಲ್ಲೇ ಹಲಸಿನ ಪದಾರ್ಥವನ್ನು ತಿಂದರೆ, ಕೆಲವರು ಮನೆಗೆ ಕೊಂಡೊಯ್ದರು. ಕೆಲವರು ಹಣ್ಣಿನ ರುಚಿಗೆ ಮನಸೋತು, ಹಲಸಿನ ಗಿಡಗಳನ್ನೂ ಖರೀದಿಸಿದ್ದು ವಿಶೇಷವಾಗಿತ್ತು.
ಹಲಸಿನ ಮೇಳದ ಜತೆ ಸಸ್ಯ ಸಂತೆ ಆಯೋಜನೆಯೂ ವಿಶೇಷವಾಗಿತ್ತು, ತರಕಾರಿ ಸಸಿಗಳು 4 ಸಾವಿರ, ಇತರೆ ವಾಣಿಜ್ಯ ಬೆಳೆಗಳ 5 ಸಾವಿರ ಸಸಿಗಳು ಸಂತೆಯಲ್ಲಿದ್ದವು. ಕಸಿ ಗೇರು, ಅಡಕೆ, ತೆಂಗು, ಕೊಕ್ಕೊ, ಕಾಳು ಮೆಣಸು, ಇತರೆ ಅಲಂಕಾರಿಕ ಸಸಿಗಳು, ಲಿಂಬೆ, ಕರಿಬೇವು, ಹಲಸು ಸಸಿಗಳು, ತರಕಾರಿಯಲ್ಲಿ ಬೆಂಡೆ, ಬದನೆ, ಹೀರೆ, ಮೆಣಸು, ಕುಂಬಳಕಾಯಿ ಸಸಿಗಳು ಸಂತೆಯಲ್ಲಿವೆ. 10 ರಿಂದ 30 ರೂ, ಶುಲ್ಕದವರೆಗೆ ವಾಣಿಜ್ಯ ಬೆಳೆಗೆಳ ಸಸಿ, ತರಕಾರಿ ಸಸಿಗಳು 1 ರೂ.ಗೆ ತೋಟಗಾರಿಕೆ ಇಲಾಖೆ ಮಾರಾಟಕ್ಕಿಟ್ಟಿದೆ. ಮೊದಲ ದಿನವೇ 2 ಸಾವಿರಕ್ಕೂ ಹೆಚ್ಚು ಸಸಿಗಳು ಮಾರಾಟವಾಗಿವೆ. ತರಕಾರಿ ಸಸಿಗಳಿರುವ ಪಾಲಿಹೌಸ್ ಆಕರ್ಷಕವಾಗಿದೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ದಿನಕರ ಬಾಬು ತುಳುನಾಡಿನಲ್ಲಿ ಹಲಸಿನ ಹಣ್ಣಿಗೆ ವಿಶೇಷ ಪ್ರಾಮುಖ್ಯತೆ ಇದ್ದು, ಹಿಂದೆಲ್ಲ ಪ್ರಮುಖ ಆಹಾರವಾಗಿ ಬಳಕೆಯಾಗುತ್ತಿತ್ತು. ಬಳಿಕ ನಿರ್ಲಕ್ಷ್ಯಕ್ಕೊಳಗಾಗಿದ್ದ ಹಲಸು, ಇದೀಗ ಮತ್ತೆ ಮುನ್ನಲೆಗೆ ಬಂದಿರುವುದು ಖುಷಿಯ ವಿಚಾರ ಎಂದು ಅಭಿಪ್ರಾಯಪಟ್ಟರು.
ಭೂತಾರಾಧಾನೆಯ ದಿನ ದೈವಗಳ ನೈವೇದ್ಯಕ್ಕೆ ಹಲಸು ಬಳಸಲಾಗುತ್ತಿತ್ತು. ನಿತ್ಯದ ಆಹಾರವಾಗಿಯೂ ಸೇವಿಸಲಾಗುತ್ತಿತ್ತು. ಬಳಿಕ ಫಾಸ್ಟ್ಫುಡ್ಗಳ ಹಾವಳಿಯಿಂದ ಹಲಸು ಮೂಲೆ ಸೇರಿತ್ತು. ಇದೀಗ ತೋಟಗಾರಿಕಾ ಇಲಾಖೆಯು ಹಲಸಿನ ಮೇಳಗಳನ್ನು ಆಯೋಜಿಸುವ ಮೂಲಕ ಮತ್ತೆ ಹಲಸಿನ ತರಹೇವಾರಿ ರುಚಿಯನ್ನು ಸಾರ್ವಜನಿಕರಿಗೆ ಉಣಬಡಿಸುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಎಸ್.ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಕಾರ್ಕಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕೃಷಿಕ ಸಮಾಜದ ಕಾರ್ಯದರ್ಶಿ ಪ್ರದೀಪ್ ಹೆಬ್ಬಾರ್, ಉಡುಪಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್, ತೋಟಗಾರಿಕಾ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರಾದ ನಾಗರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಭುವನೇಶ್ವರಿ ಇದ್ದರು